ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವಿನೊಳಗೆ ಕೈಸೇರದ ಕೋವಿಡ್ ಪರೀಕ್ಷಾ ವರದಿ

ಗೊಂದಲದಲ್ಲಿ ಕೊರೊನಾ ಸೋಂಕು ಶಂಕಿತರು l 8 ತಿಂಗಳು ಕಳೆದರೂ ಬಗೆಹರಿಯದ ಸಮಸ್ಯೆ
Last Updated 29 ಸೆಪ್ಟೆಂಬರ್ 2020, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳವಾದರೂ ಆರ್‌ಟಿ‍–ಪಿಸಿಆರ್ ಪರೀಕ್ಷೆಯ ಫಲಿತಾಂಶಕ್ಕೆಸೋಂಕು ಶಂಕಿತರು ಕಾಯುವುದು ಇನ್ನೂ ತಪ್ಪಿಲ್ಲ. 48 ಗಂಟೆಗಳಲ್ಲಿ ನೀಡಬೇಕಾದ ಪರೀಕ್ಷಾ ವರದಿಯನ್ನು ತಾಂತ್ರಿಕ ಕಾರಣದ ನೆಪವೊಡ್ಡಿ, ಒಂದು ವಾರದವರೆಗೂ ವಿಳಂಬ ಮಾಡಲಾಗುತ್ತಿದೆ.

ಆ್ಯಂಟಿಜೆನ್ ಪರೀಕ್ಷೆಗಳನ್ನು ಪ್ರಾರಂಭಿಸಿದ ಬಳಿಕ ಪ್ರಯೋಗಾಲಯಗಳ ಮೇಲಿನ ಹೊರೆ ಅರ್ಧದಷ್ಟು ಕಡಿಮೆಯಾಗಿದೆ. ವರ್ಷಾರಂಭದಲ್ಲಿ ಸೋಂಕು ಶಂಕಿತರ ಗಂಟಲ ದ್ರವದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗುತ್ತಿತ್ತು. ಇದರಿಂದಾಗಿ ಪರೀಕ್ಷಾ ವರದಿ ವಿಳಂಬವಾಗುತ್ತಿತ್ತು. ಫೆಬ್ರುವರಿ ಅಂತ್ಯಕ್ಕೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಹಾಗೂ ಎನ್‌ಐವಿ ಬೆಂಗಳೂರು ಕೇಂದ್ರದ ಪ್ರಯೋಗಾಲಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಅನುಮೋದನೆ ನೀಡಿತು.

ಐಸಿಎಂಆರ್ ಮಾಹಿತಿ ಪ್ರಕಾರ, ನಗರದಲ್ಲಿ 49 ಆರ್‌ಟಿ–ಪಿಸಿಆರ್‌ ಸೇರಿದಂತೆ ಒಟ್ಟು 65 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ 200ರಿಂದ 300 ಮಂದಿಗೆ ನಡೆಸಲಾಗುತ್ತಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆ 30 ಸಾವಿರಕ್ಕೆ ಏರಿದೆ. 50 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿದ್ದರೂ ಅಧಿಕ ಪರೀಕ್ಷಾ ವೆಚ್ಚ, ಸಿಬ್ಬಂದಿ ಕೊರತೆ ಸೇರಿ ವಿವಿಧ ಕಾರಣಗಳಿಂದಪ್ರಯೋಗಾಲಯಗಳ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುತ್ತಿಲ್ಲ. ಬದಲಾಗಿ ನಗರದ ಎಲ್ಲೆಡೆ ಆ್ಯಂಟಿಜೆನ್‌ ಪರೀಕ್ಷೆ ನಡೆಸಲಾಗುತ್ತಿದೆ.

ಸೋಂಕು ಶಂಕಿತರಿಗೆ ಗೊಂದಲ: ಆ್ಯಂಟಿಜೆನ್ ಪರೀಕ್ಷೆಯಲ್ಲಿ ಸೋಂಕು ಲಕ್ಷಣ ಹೊಂದಿರುವವರ ವರದಿ ನೆಗೆಟಿವ್‌ ಎಂದು ಬಂದಲ್ಲಿ ಅವರ ಇನ್ನೊಂದು ಮಾದರಿಯನ್ನು ಆರ್‌ಟಿ‍–‍ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಅದೇ ರೀತಿ, ಹೆಚ್ಚು ಅಸ್ವಸ್ಥರಾಗಿರುವ ಹಾಗೂ ಲಕ್ಷಣಗಳು ಇರುವವರ ಗಂಟಲ ದ್ರವದ ಮಾದರಿಯನ್ನು ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿದೆ. 48 ಗಂಟೆಯೊಳಗೆ ಪರೀಕ್ಷೆಯ ವರದಿ ನೀಡದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿ ಆರೋಗ್ಯ ಇಲಾಖೆಯೇ ಆದೇಶ ಹೊರಡಿಸಿದ್ದರೂ ಸೋಂಕು ಶಂಕಿತರು ವರದಿಗಾಗಿ ಕಾಯಬೇಕಾದ ಪರಿಸ್ಥಿತಿ ನಿಂತಿಲ್ಲ. ಇದರಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಲವರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

‘ತಂದೆಗೆ ಜ್ವರ, ಕೆಮ್ಮಿನ ಲಕ್ಷಣಗಳು ಕಾಣಿಸಿದ್ದವು. ಅವರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ಪರೀಕ್ಷೆ ಮಾಡಿಸಲಾಯಿತು. ಅವರೊಂದಿಗೆ ನಮ್ಮ ಕುಟುಂಬದ ಸದಸ್ಯರೂ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ನೀಡಿದ್ದೆವು. ನಾಲ್ಕು ದಿನವಾದರೂ ವರದಿ ಬಂದಿರಲಿಲ್ಲ. ತಂದೆಯ ಆರೋಗ್ಯದ ಸ್ಥಿತಿ ಇನ್ನಷ್ಟು ಹದಗೆಟ್ಟ ಪರಿಣಾಮ ಆಸ್ಪತ್ರೆಗೆ ದಾಖಲಿಸಿದೆವು. ಈ ಅವಧಿಯಲ್ಲಿ ನಾವು ಮನೆಯಲ್ಲಿಯೇ ಪ್ರತ್ಯೇಕ ಇದ್ದೆವು. ಆರು ದಿನಗಳ ಬಳಿಕ ಸೋಂಕಿತರಾಗಿರುವ ಬಗ್ಗೆ ವರದಿ ಬಂದಿತು’ ಎಂದು ವೀರಭದ್ರನಗರದ ನಿವಾಸಿ ವೆಂಕಟೇಶ್ ತಿಳಿಸಿದರು.

ಪ್ರೋತ್ಸಾಹ ಧನ ಘೋಷಿಸಿದರೂ ವಿಳಂಬ

ನಿಯಮದ ಪ್ರಕಾರ ಪ್ರಯೋಗಾಲಯಗಳು ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷಾ ಫಲಿತಾಂಶವನ್ನು 24 ಗಂಟೆಗಳಿಂದ 48 ಗಂಟೆಗಳಲ್ಲಿ ನೀಡಿ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ವೆಬ್‌ ಪೋರ್ಟಲ್‌ನಲ್ಲಿ ನಮೂದಿಸಬೇಕು. ಫಲಿತಾಂಶಗಳು ಬೇಗ ಸಿಗಬೇಕು ಎಂಬ ಉದ್ದೇಶದಿಂದಲೇ ಆರೋಗ್ಯ ಇಲಾಖೆಯು 24 ಗಂಟೆಗಳಲ್ಲಿ ಫಲಿತಾಂಶ ನೀಡಿ, ಪೋರ್ಟಲ್‌ನಲ್ಲಿ ಮಾಹಿತಿ ನಮೂದಿಸುವ ಪ್ರಯೋಗಾಲಯಗಳಿಗೆ ಪ್ರತಿ ಪರೀಕ್ಷೆಗೆ ನಿಗದಿಪಡಿಸಿರುವ ದರದ ಶೇ 10 ರಷ್ಟು ಪ್ರೋತ್ಸಾಹ ಧನ ಘೋಷಿಸಿದೆ. ಆದರೂ, ಕೆಲ ಪ್ರಯೋಗಾಲಯಗಳು ನಿಗದಿತ ಅವಧಿಯಲ್ಲಿ ವರದಿ ನೀಡುತ್ತಿಲ್ಲ.

‘ಪ್ರಯೋಗಾಲಯದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಇದರಿಂದ ಆಯಾ ದಿನವೇ ಎಲ್ಲ ಮಾದರಿಗಳನ್ನು ಪರೀಕ್ಷೆ ಸಾಧ್ಯವಾಗುತ್ತಿಲ್ಲ. ಕೆಲವು ಪ್ರಯೋಗಾಲಯಗಳಲ್ಲಿ ಮೂಲಸೌಕರ್ಯ ಕೂಡ ಇಲ್ಲ. ಆರ್‌ಟಿ–ಪಿಸಿಆರ್‌ ಕಿಟ್‌ಗಳ ಕೊರತೆ, ಅಗತ್ಯ ಪ್ರಮಾಣದಲ್ಲಿ ತಾಂತ್ರಿಕ ಸಿಬ್ಬಂದಿ ಇಲ್ಲದಿರುವುದು ಕೂಡ ಪರೀಕ್ಷೆಗೆ ಹಿನ್ನಡೆಯಾಗಿದೆ. ಕೆಲವರು ಮಾದರಿಗಳನ್ನು ಸರಿಯಾಗಿ ಕಳುಹಿಸುತ್ತಿಲ್ಲ. ಬಾರ್‌ಕೋಡ್‌ ಇರುವುದಿಲ್ಲ. ಐಸಿಎಂಆರ್‌ ಪೋರ್ಟಲ್‌ ಕೂಡ ಕೆಲ ಸಂದರ್ಭದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ’ ಎಂದು ಸರ್ಕಾರಿ ಪ್ರಯೋಗಾಲಯದ ಮುಖ್ಯಸ್ಥರೊಬ್ಬರು ತಿಳಿಸಿದರು.

ನಿಗದಿತ ಅವಧಿಯಲ್ಲಿ ಪರೀಕ್ಷಾ ವರದಿ ನೀಡದಿದ್ದಲ್ಲಿ ಪ್ರಯೋಗಾಲಯಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈವರೆಗೂ ನಮಗೆ ಯಾವುದೇ ದೂರು ಬಂದಿಲ್ಲ ಎಂದುಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT