ಸೋಮವಾರ, ಜೂನ್ 21, 2021
21 °C
ಕೌನ್ಸಿಲ್ ಸಭೆಯಲ್ಲಿ ಚರ್ಚೆಗೊಳಗಾದ ಯಂತ್ರ ಖರೀದಿಸುವ ಚಾಳಿ

‘ಕಸ ಗುಡಿಸುವ ಯಂತ್ರ ಖರೀದಿ: ಹೊಸ ಟೆಂಡರ್‌ ರದ್ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಖ್ಯ ರಸ್ತೆಗಳಲ್ಲಿನ ಕಸ ಗುಡಿಸಲು ಯಂತ್ರಗಳನ್ನು ಖರೀದಿಸುವ ಹೊಸ ಅಲ್ಪಾವಧಿ ಟೆಂಡರ್‌ ರದ್ದುಪಡಿಸಿ ಹೊಸ ಷರತ್ತುಗಳನ್ನು ರೂಪಿಸಿ ಹೊಸತಾಗಿ ಟೆಂಡರ್‌ ಕರೆಯಲಾಗುವುದು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಮುಖ್ಯ ರಸ್ತೆಗಳಲ್ಲಿ ಕಸ ಗುಡಿಸುವ ಯಂತ್ರ ಖರೀದಿಸುವ ವಿಚಾರ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಚರ್ಚೆಗೆ ಗ್ರಾಸವಾಯಿತು.

‘ಪಾಲಿಕೆ ಈಗಾಗಲೇ ಖರೀದಿಸಿರುವ ಕಸ ಗುಡಿಸುವ 27 ಯಂತ್ರಗಳು ನಿತ್ಯ 40 ಕಿ.ಮೀ. ರಸ್ತೆಯನ್ನು ಸ್ವಚ್ಛಗೊಳಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದರು. ಈ ಯಂತ್ರಗಳು ಟೆಂಡರ್‌ ಷರತ್ತಿನ ಪ್ರಕಾರ ಕೆಲಸ ಮಾಡುತ್ತಿಲ್ಲ. ಈಗ ಮತ್ತೆ ಕಾರ್ಯಪಾಲಕ ಎಂಜಿನಿಯರ್‌ ಅವರು ಯಂತ್ರಗಳ ಖರೀದಿಗೆ ₹ 40 ಕೋಟಿ ಹಾಗೂ ಅವುಗಳನ್ನು ಏಳು ವರ್ಷ ನಿರ್ವಹಣೆ ಮಾಡುವುದಕ್ಕೆ ₹ 180 ಕೋಟಿ ವೆಚ್ಚ ಮಾಡಲು ಅಲ್ಪಾವಧಿ ಟೆಂಡರ್‌ ಕರೆದಿದ್ದಾರೆ. ಇದರ ಔಚಿತ್ಯವೇನು’ ಎಂದು ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಯಾವುದಾದರೂ ಯಂತ್ರ ದಿನಕ್ಕೆ 20 ಕಿ.ಮೀ. ಕಸ ಗುಡಿಸಿದರೂ ಸಾಕು, ನಾನು ಕಸ ನಿರ್ವಹಣೆ ವಿಭಾಗದ ಅಧಿಕಾರಿಗಳಿಗೆ ₹ 1 ಲಕ್ಷ ಬಹುಮಾನ ನೀಡುತ್ತೇನೆ’ ಎಂದು ಆಡಳಿತ ಪಕ್ಷದ ಸದಸ್ಯ ಪದ್ಮನಾಭ ರೆಡ್ಡಿ ಸವಾಲು ಹಾಕಿದರು.

‘ನಾನೇ ಖುದ್ದಾಗಿ ಸೂಚಿಸಿದರೂ ಕಸ ಗುಡಿಸುವ 27 ಯಂತ್ರಗಳನ್ನು ತೋರಿಸಿಲ್ಲ. ಈ ವಾಹನಗಳ ಕಾರ್ಯಾಚರಣೆ ಮೇಲೆ ನಿಗಾ ಇಡಲು ಜಿಪಿಎಸ್‌ ಅಳವಡಿಕೆಯೆಲ್ಲಾ ಸುಮ್ಮನೆ. ಯಂತ್ರ ವಾಹನದ ಮೇಲಿರುತ್ತದೆ. ವಾಹನ ಮಾತ್ರ ಚಲಿಸುತ್ತಿರುತ್ತದೆ. ಆದರೆ, ರಸ್ತೆ ಸ್ವಚ್ಛವಾಗುತ್ತಿಲ್ಲ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು. 

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ‘ಟ್ರಕ್‌ ಮೌಂಟೆಡ್‌ ಯಂತ್ರದ ಬದಲು ಸ್ವಯಂಚಾಲಿತ ಯಂತ್ರ (ಸೆಲ್ಫ್‌ಪ್ರೊಪೆಲ್ಡ್‌) ಖರೀದಿ ಒಳ್ಳೆಯದು. ಈ ಹಿಂದೆ ಖರೀದಿಸಿದ್ದ 5 ಕ್ಯೂಬಿಕ್‌ ಮೀ. ಸಾಮರ್ಥ್ಯದ ಯಂತ್ರಗಳೇ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. 10 ಕ್ಯೂಬಿಕ್‌ ಮೀ. ಸಾಮರ್ಥ್ಯದ ಯಂತ್ರ ಖರೀದಿಸಿದರೂ ವಿಫಲವಾಗಲಿವೆ’ ಎಂದರು. 

‘ಪಾಲಿಕೆ ಈ ಹಿಂದೆ ಖರೀದಿಸಿದ್ದ 76 ಕಾಂಪ್ಯಾಕ್ಟರ್‌ಗಳಲ್ಲಿ 36 ವಾಹನಗಳು ರಸ್ತೆಗಿಳಿಯುತ್ತಿಲ್ಲ. ಇಂತಹ ಯಂತ್ರಗಳ ಖರೀದಿ ಯಾವ ಪುರುಷಾರ್ಥಕ್ಕೆ’ ಎಂದು ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಪ್ರಶ್ನಿಸಿದರು.

‘ರಸ್ತೆ ಗುಂಡಿ ಮುಚ್ಚಲು ಖರೀದಿಸಿದ್ದ ಪೈಥಾನ್ ಯಂತ್ರಗಳು ಅರಮನೆ ಮೈದಾನದ ಬಳಿ ನಿಂತಿವೆ. ಅವುಗಳು ಬಳಕೆ ಆಗುತ್ತಿಲ್ಲ’ ಎಂದು ಬಿಜೆಪಿಯ ಉಮೇಶ್‌ ಶೆಟ್ಟಿ ದೂರಿದರು.

-0-

‘15 ದಿನಗಳಲ್ಲಿ ರಸ್ತೆ ಗುಂಡಿ ಇರಲ್ಲ’
‘ಮುಖ್ಯ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ರಸ್ತೆ ಮೂಲಸೌಕರ್ಯ ವಿಭಾಗದ ಎಂಜಿನಿಯರ್‌ಗಳಿಗೆ ವಹಿಸಿ ಈ ಹಿಂದೆ ಆಗಿರುವ ತಪ್ಪು ಸರಿಪಡಿಸಿದ್ದೇವೆ. ಈಗ ಪಾಲಿಕೆಯೇ ಹಾಟ್‌ಮಿಕ್ಸ್‌ ತಯಾರಿ ಘಟಕ ಆರಂಭಿಸಿದೆ. ಹಾಗಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ತ್ವರಿತಗತಿಯಲ್ಲಿ ನಡೆಯಲಿದೆ. 15 ದಿನಗಳಲ್ಲಿ ಮುಖ್ಯ ರಸ್ತೆಗಳ ಎಲ್ಲ ಗುಂಡಿಗಳನ್ನು ಮುಚ್ಚಿಸಲಾಗುತ್ತದೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

‘₹ 7.5 ಕೋಟಿ ವೆಚ್ಚದಲ್ಲಿ ಹಾಟ್‌ಮಿಕ್ಸ್‌ ಘಟಕ ಸ್ಥಾಪಿಸಿದ್ದೇವೆ. ಇದರಲ್ಲಿ ಗಂಟೆಗೆ 100 ಟನ್‌ನಂತೆ 10 ಗಂಟೆಗಳಲ್ಲಿ 50 ಟ್ರಕ್‌ಗಳಷ್ಟು 160 ಡಿಗ್ರಿ ಉಷ್ಣಾಂಶದ ಹಾಟ್‌ ಮಿಕ್ಸ್‌ ಸಿದ್ಧಪಡಿಸಬಹುದು. ಇದನ್ನು ಹೊಸ ರಸ್ತೆ ನಿರ್ಮಾಣಕ್ಕೂ ಬಳಸಬಹುದು’ ಎಂದರು. 

ಅಂಕಿ ಅಂಶ
12 ಸಾವಿರ ಕಿ.ಮೀ: 
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಾರ್ಡ್‌ ರಸ್ತೆಗಳ ಒಟ್ಟು ಉದ್ದ
93 ಸಾವಿರ: ನಗರದಲ್ಲಿರುವ ವಾರ್ಡ್‌ ರಸ್ತೆಗಳು
474: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳು
1,400 ಕಿ.ಮೀ: ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ಒಟ್ಟು ಉದ್ದ
63: ರಸ್ತೆ ಮೂಲಸೌಕರ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು