ಕೆಂಗೇರಿ: ‘ಕುಂಬಳಗೋಡು ಪಂಚಾಯಿತಿ ವ್ಯಾಪ್ತಿಯಲ್ಲಿ ನಕಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮಗಳಾಗುತ್ತಿಲ್ಲ’ ಎಂದು ಕುಂಬಳಗೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕರಾಜು ದೂರಿದರು.
ಕುಂಬಳಗೋಡು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಮೊದಲನೆ ಸುತ್ತಿನ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಪಡೆಯದೆ ಅಲೋಪತಿ ಪದ್ಧತಿ ಆಧಾರಿತ ಔಷಧ ನೀಡುತ್ತಿರುವ ಆಯುರ್ವೇದ ವೈದ್ಯರು ಸೇರಿದಂತೆ, ಸೂಕ್ತ ಶಿಕ್ಷಣ ಪಡೆಯದೆ ಮೆಡಿಕಲ್ ಸ್ಟೋರ್, ಲ್ಯಾಬ್‌ಗಳನ್ನು ನಡೆಸುತ್ತಿರುವ ಪ್ರಕರಣಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿವೆ. ಔಷಧ ಅಂಗಡಿಗಳಲ್ಲೇ ಗಾಂಜಾ ಮಾರಾಟದಂತಹ ಗಂಭೀರ ಪ್ರಕರಣಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ದಾಖಲಾಗಿವೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ತಾಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
‘ಜಲಂಡಳಿಯ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಹಾಗೆ ಬಿಡಲಾಗಿದೆ. ಈಗಲೂ ಡಾಂಬರು ಹಾಕಿಲ್ಲ. ಗುಂಡಿಗಳಿಗೆ ಬಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ’ ಎಂದು ಕಾರುಬೆಲೆ ನಿವಾಸಿಗಳು ಅಲವತ್ತುಕೊಂಡರು.
’ಬೀದಿಯ ಎಲ್ಲರ ಮನೆಗೂ ನೀರು ಬರುತ್ತಿದೆ. ನಮ್ಮ ಮನೆಗೆ ಮಾತ್ರ ನೀರು ಬಾರದಿರಲು ಕಾರಣವೇನು’ ಎಂದು ಕುಂಬಳಗೋಡು ನಿವಾಸಿ ರಮೇಶ್ ಪ್ರಶ್ನಿಸಿದರು.
‘ಬಸವಗಂಗೋತ್ರಿ ಬಡಾವಣೆಯ ನೀರಿನ ಸಮಸ್ಯೆ, ಬೀದಿ ದೀಪದ ಸಮಸ್ಯೆಗೆ ವರ್ಷ ಕಳೆದರೂ ಪರಿಹಾರ ದೊರೆತಿಲ್ಲ’ ಎಂದು ವೃದ್ದರೊಬ್ಬರು ಬೇಸರ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ದೇವರಾಜ್, ‘ನೀರಿನ ಕೊರತೆ ಸರಿಪಡಿಸಲು ಈಗಾಗಲೇ 23 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅಂತರ್ಜಲದ ಕೊರತೆಯಿಂದ ನೀರಿನ ಲಭ್ಯತೆ ಕಡಿಮೆಯಿದ್ದು, ಮಂಚನಬೆಲೆ ಕಾಮಗಾರಿ ಮುಗಿದ ಬಳಿಕ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ’ ಎಂದು ಹೇಳಿದರು.
’ಅಪಾರ್ಟ್‌ಮೆಂಟ್ ಹಾಗೂ ವಾಣಿಜ್ಯ ಕಟ್ಟಡದ ಮಾಲೀಕರು ನೀರಿನ ಪೂರೈಕೆಗೆ ಸ್ವಂತ ಜಲಮೂಲಗಳನ್ನು ಹೊಂದಬೇಕು. ನೀರು ಪೂರೈಕೆಯಲ್ಲಿ ವಸತಿ ಉದ್ದೇಶಗಳಿಗೆ ಮೊದಲ ಪ್ರಾಶಸ್ತ್ಯ ದೊರಕಬೇಕು’ ಎಂದರು.
ಮುಖಂಡರಾದ ಗೋಪಾಲಕೃಷ್ಣ ,ನರಸಿಂಹಮೂರ್ತಿ, ರಾಮಕೃಷ್ಣ, ನಂಜೇಗೌಡ, ಅನೀಸ್, ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.