ಶುಕ್ರವಾರ, ಜುಲೈ 30, 2021
25 °C
ತಲಘಟ್ಟಪುರ ಠಾಣೆ ಇನ್‌ಸ್ಪೆಕ್ಟರ್‌ ವಿರುದ್ಧ ಡಿಸಿಪಿಗೆ ಬಿಲ್ಡರ್‌ ಪ್ರತಿದೂರು

ನಿವೇಶನ ಅಭಿವೃದ್ಧಿ ಹೆಸರಿನಲ್ಲಿ ವಂಚನೆ; ಬಿಲ್ಡರ್ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಜಮೀನಿನಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಮಾರಾಟ ಮಾಡಿಕೊಡುವುದಾಗಿ ಹೇಳಿದ್ದ ‘ಮಹಾರಾಜ್ ಡೆವಲಪರ್ಸ್‌’ ಮಾಲೀಕ ಎಸ್‌.ಟಿ.ಶ್ರೀನಿವಾಸ್, ಮಾತುಕತೆಯಂತೆ ಹಣ ನೀಡದೇ ನಂಬಿಕೆ ದ್ರೋಹ ಎಸಗಿ ವಂಚಿಸಿದ್ದಾರೆ’ ಎಂದು ಆರೋಪಿಸಿ ವೈ.ಜೆ. ರವಿಕುಮಾರ್ ಎಂಬುವರು ತಲಘಟ್ಟಪುರ ಠಾಣೆಗೆ ದೂರು ನೀಡಿದ್ದಾರೆ.

‘ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ನನ್ನ ತಂದೆ ಜಯರಾಮು ಅವರ 1 ಎಕರೆ 1 ಗುಂಟೆ ಜಮೀನು ಇದೆ. 2014ರಲ್ಲಿ ತಂದೆ ಬಳಿ ಮಾತುಕತೆ ನಡೆಸಿದ್ದ ಬಿಲ್ಡರ್ ಶ್ರೀನಿವಾಸ್, ಜಮೀನಿನಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಿಕೊಡುವುದಾಗಿ ಹೇಳಿದ್ದರು. ಚದರ ಅಡಿಗೆ ₹2,000 ಲೆಕ್ಕದಲ್ಲಿ ಒಟ್ಟು ₹7.41 ಕೋಟಿ ಹಣ ನೀಡುವುದಾಗಿಯೂ ಒಪ್ಪಂದ ಮಾಡಿಕೊಂಡಿದ್ದರು’ ಎಂದು ದೂರಿನಲ್ಲಿ ರವಿಕುಮಾರ್ ಹೇಳಿದ್ದಾರೆ.

‘ಪೂರ್ತಿ ಜಮೀನು ಅಭಿವೃದ್ಧಿಪಡಿಸದ ಶ್ರೀನಿವಾಸ್, ಕೆಲಭಾಗವನ್ನು ಮಾತ್ರ ಅಭಿವೃದ್ಧಿಪಡಿಸಿ 2016–2017ರಲ್ಲಿ 8 ನಿವೇಶನ ಮಾರಿದ್ದಾರೆ. ನಿಗದಿತ ಹಣಕ್ಕಿಂತಲೂ ಕಡಿಮೆ ಹಣವನ್ನು ನಮಗೆ ನೀಡಿದ್ದಾರೆ. ನಂತರ, ಸಂಪರ್ಕಕ್ಕೆ ಸಿಗುತ್ತಿಲ್ಲ. ತಮ್ಮಷ್ಟಕ್ಕೆ ತಾವೇ ನಿವೇಶನ ಮಾರಿಕೊಳ್ಳುತ್ತಿರುವ ಮಾಹಿತಿಯೂ ಇದೆ’ ಎಂದು ದೂರಿದ್ದಾರೆ.

ಇನ್‌ಸ್ಪೆಕ್ಟರ್‌ ವಿರುದ್ಧ ದೂರು; ಇದೇ ಪ್ರಕರಣ ಸಂಬಂಧ ಗೃಹ ಸಚಿವ, ಕಮಿಷನರ್ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ದೂರು ನೀಡಿರುವ ಬಿಲ್ಡರ್ ಶ್ರೀನಿವಾಸ್, ‘ಜಮೀನು ಸಂಬಂಧದ ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶಿಸುತ್ತಿರುವ ತಲಘಟ್ಟಪುರ ಠಾಣೆ ಇನ್‌ಸ್ಪೆಕ್ಟರ್ ರಾಮಪ್ಪ ಗುತ್ತೇರ್, ರವಿಕುಮಾರ್ ಜೊತೆ ಸೇರಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಜೆ.ಪಿ.ನಗರ 2ನೇ ಹಂತದಲ್ಲಿ ‘ಮಹಾರಾಜ್ ಡೆವಲಪರ್ಸ್‌’ ಕಚೇರಿ ಇದೆ. ಗೊಲ್ಲಹಳ್ಳಿ ಗ್ರಾಮದ ಜಮೀನಿನದ್ದು ಸಿವಿಲ್ ವ್ಯಾಜ್ಯ. ನ್ಯಾಯಾಲಯದಲ್ಲೂ ಮೊಕದ್ದಮೆ ಇತ್ತು. ಆದರೆ, ಈಗ ನನ್ನ ವಿರುದ್ಧವೇ ಠಾಣೆಗೆ ಸುಳ್ಳು ದೂರು ನೀಡಲಾಗಿದೆ. ಅದನ್ನು ಮುಂದಿಟ್ಟುಕೊಂಡು ವಂಚನೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಇನ್‌ಸ್ಪೆಕ್ಟರ್‌ ರಾಮಪ್ಪ ಬೆದರಿಸುತ್ತಿದ್ದಾರೆ. ನ್ಯಾಯಾಲಯದ ದಾಖಲೆ ತೋರಿಸಿದರೂ ಕಿಮ್ಮತ್ತು ನೀಡುತ್ತಿಲ್ಲ. ಒಪ್ಪಂದ ರದ್ದು ಮಾಡಿಕೊಳ್ಳುವಂತೆ ನನ್ನ ಮೇಲೆಯೇ ಒತ್ತಡ ಹಾಕುತ್ತಿದ್ದಾರೆ’ ಎಂದೂ ದೂರಿನಲ್ಲಿ ಶ್ರೀನಿವಾಸ್ ಉಲ್ಲೇಖಿಸಿದ್ದಾರೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್ ರಾಮಪ್ಪ, ‘ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪದಡಿ ಶ್ರೀನಿವಾಸ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ಸಂಬಂಧ ದಾಖಲೆಗಳನ್ನು ಹಾಜರುಪಡಿಸುವಂತೆಯೂ ಆರೋಪಿಗೆ ಹೇಳಿದ್ದೇವೆ’ ಎಂದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.