ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕರ್‌ಗೆ ನಿರ್ಬಂಧ: ನೀರಿನ ಸಮಸ್ಯೆ ತೀವ್ರ

ಕುಸಿದ ಅಂತರ್ಜಲ ಮಟ್ಟ l ಹೊಸಕೋಟೆಯಿಂದ ನಗರಕ್ಕೆ ನೀರು ಸಾಗಣೆಗೆ ತಡೆ
Last Updated 15 ಮಾರ್ಚ್ 2020, 21:59 IST
ಅಕ್ಷರ ಗಾತ್ರ

ಬೆಂಗಳೂರು:ಹೊಸಕೋಟೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದಕ್ಕೆ ಹೊಸಕೋಟೆ ತಹಶೀಲ್ದಾರ್‌ ನಿರ್ಬಂಧ ವಿಧಿಸಿರುವುದರಿಂದ, ನಗರದ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಲಿದೆ.

ಹೊಸಕೋಟೆಯ ಆನುಗೊಂಡನಹಳ್ಳಿ ಹೋಬಳಿ, ಕೋಟೂರು, ಹಾರೋಹಳ್ಳಿ, ಮುತ್ಸಂದ್ರ ಗ್ರಾಮಗಳಿಂದ ನಗರದ ಬೆಳ್ಳಂದೂರು, ವರ್ತೂರು, ಪಣತೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಹಳ್ಳಿಗಳಿಂದ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 50ರಿಂದ 60 ಟ್ಯಾಂಕರ್‌ಗಳಷ್ಟು ನೀರು ಪೂರೈಕೆಯಾಗುತ್ತಿತ್ತು. ಬೇಸಿಗೆ ಸಮಯದಲ್ಲಿ 100 ಟ್ಯಾಂಕರ್‌ಗಳಷ್ಟು ನೀರು ಸರಬರಾಜಾಗುತ್ತಿತ್ತು.

‘ಹೊಸಕೋಟೆ ತಾಲ್ಲೂಕಿನ ಈ ಗ್ರಾಮಗಳಿಂದ ಟ್ಯಾಂಕರ್‌ ಮೂಲಕ ಅಕ್ರಮವಾಗಿ ನೀರು ಸಾಗಿಸುವುದನ್ನು ತಡೆಯಬೇಕು. ಗ್ರಾಮ ಪಂಚಾಯ್ತಿಯಿಂದ ಯಾವುದೇ ಅನುಮತಿ ಪಡೆಯದೆ ದಿನದ 24 ಗಂಟೆ ನೀರು ಸಾಗಿಸಲಾಗುತ್ತಿದೆ.ಬರಪೀಡಿತ ಪ್ರದೇಶವಾಗಿರುವ ಈ ತಾಲ್ಲೂಕಿನಲ್ಲಿ ನೀರಿನ ಅಭಾವ ಇದೆ. ವಾಣಿಜ್ಯ ಉದ್ದೇಶಕ್ಕಾಗಿ ಟ್ಯಾಂಕರ್‌ ಮೂಲಕ ನೀರು ಸಾಗಿಸುತ್ತಿರುವುದು ಕಂಡು ಬಂದಲ್ಲಿ, ಸರಬರಾಜುದಾರರ ವಿರುದ್ಧ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು’ ಎಂದು ಹೊಸಕೋಟೆ ತಹಶೀಲ್ದಾರ್‌,
ತಿರುಮಲಶೆಟ್ಟಿಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ಗೆ ಮಾರ್ಚ್‌ 9ರಂದು ಪತ್ರ ಬರೆದಿದ್ದಾರೆ.

‘ಈ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೊಸ ಕೊಳವೆಬಾವಿ ಕೊರೆದರೂ ನೀಗು ಸಿಗದೆ ಬೆಳೆಗಳು ಒಣಗುತ್ತಿವೆ. ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ, ಟ್ಯಾಂಕರ್‌ ನೀರು ಸರಬರಾಜು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿಯೂ ರೈತರು ತಿಳಿಸಿದ್ದಾರೆ’ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ.

ವಿದ್ಯುತ್‌ ಕಡಿತ:‘ಮುತ್ಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಕೊಳವೆ ಬಾವಿಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು’ ಎಂದು ಬೆಸ್ಕಾಂ ಹೊಸಕೋಟೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಿರಿಯ ಭೂವಿಜ್ಞಾನಿ ಮಾ.13ರಂದು ಪತ್ರ ಬರೆದಿದ್ದಾರೆ.

ದುಡ್ಡು ಕೊಟ್ಟರೂ ನೀರಿಲ್ಲ:‘ಮೊದಲು ದುಡ್ಡು ನೀಡಿದರಾದರೂ ನೀರು ಸಿಗುತ್ತದೆ ಎಂಬ ಭರವಸೆ ಇತ್ತು. ಈಗ ಅದೂ ಇಲ್ಲದಾಗಿದೆ. ಮಹದೇವಪುರ ಕ್ಷೇತ್ರದಲ್ಲಿ ಅನೇಕ ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ನಿತ್ಯ ಬಳಕೆಗೂ ನೀರಿಲ್ಲದೆ ಪರಿತಪಿಸುವಂತಾಗಿದೆ’ ಎಂದು ವರ್ತೂರು ನಿವಾಸಿ ರಮೇಶ್‌ ಅಳಲು ತೋಡಿಕೊಂಡರು.

ವಿವಿಧ ಗಾತ್ರದ ಟ್ಯಾಂಕರ್‌ಗಳಲ್ಲಿ 5 ಸಾವಿರ ಲೀಟರ್‌ಗಳಿಂದ 12 ಸಾವಿರ ಲೀಟರ್‌ಗಳಷ್ಟು ನೀರನ್ನು ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ, ಕಂಪನಿಗಳಿಗೆ ತರಲಾಗುತ್ತಿದೆ. ನೀರಿನ ಪ್ರಮಾಣ ಆಧರಿಸಿ ₹300ರಿಂದ ₹800 ಪಾವತಿಸಲಾಗುತ್ತಿದೆ.

ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ

‘ಹೊಸಕೋಟೆಯ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ವರ್ತೂರು ಸೇರಿದಂತೆ ಸುತ್ತ–ಮುತ್ತಲ ಪ್ರದೇಶಗಳಲ್ಲಿಯೂ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ನೀರಿನ ಕೊರತೆ ಉಂಟಾದಾಗ ಮಾತ್ರ ಮಳೆ ನೀರು ಸಂಗ್ರಹ ಕುರಿತ ಸಲಹೆಗಳು ಕೇಳಿ ಬರುತ್ತವೆ. ಈ ಬಗ್ಗೆ ಅಧಿಕಾರಿಗಳನ್ನು ದೂರಬೇಕೋ, ಜನರನ್ನು ದೂರಬೇಕೋ ಗೊತ್ತಾಗುತ್ತಿಲ್ಲ’ ಎಂದು ‘ವರ್ತೂರು ರೈಸಿಂಗ್‌’ನ ಜಗದೀಶ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಯಾವುದೇ ಸೂಚನೆ ಕೊಡದೆ ಏಕಾಏಕಿ ಟ್ಯಾಂಕರ್‌ ನೀರು ಸರಬರಾಜು ಮಾಡುವುದಕ್ಕೆ ನಿರ್ಬಂಧ ವಿಧಿಸಿರುವುದರಿಂದ ಸಮಸ್ಯೆ ಬಿಗಡಾಯಿಸಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಮಳೆ ನೀರು ಸಂಗ್ರಹ ಕಡ್ಡಾಯ ಯೋಜನೆ ಹೆಸರಿಗೆ ಮಾತ್ರ ಎನ್ನುವಂತಿದೆ. ನಗರದ ಶೇ 75ರಷ್ಟು ಪ್ರದೇಶ ಕಾಂಕ್ರೀಟ್‌ಮಯವಾಗಿರುವುದರಿಂದ ನೀರು ಇಂಗಲು ಜಾಗವೇ ಇಲ್ಲದಂತಾಗಿದೆ. ಬಿಬಿಎಂಪಿ, ಜಲಮಂಡಳಿ ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ’ ಎಂದರು.

ನೀರು ಸರಬರಾಜು ಮಾಡದಿರಲು ನಿರ್ಧಾರ

‘ಹೊಸಕೋಟೆ ತಾಲ್ಲೂಕಿನ 3 ಗ್ರಾಮಗಳಿಂದ ನೀರು ಸರಬರಾಜು ಮಾಡಲು ನಿರ್ಬಂಧ ವಿಧಿಸಿರುವುದು ರಾಜಕೀಯ ದುರುದ್ದೇಶದ ಕ್ರಮ. ತಹಶೀಲ್ದಾರ್‌ ಅವರ ಈ ಆದೇಶ ವಿರೋಧಿಸಿ, ಮಾ.16ರಿಂದ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ. ಆದೇಶ ಹಿಂಪಡೆಯುವವರಿಗೆ ನೀರು ಸರಬರಾಜು ಮಾಡುವುದಿಲ್ಲ’ಎಂದು ನೀರು ಸರಬರಾಜು ಟ್ಯಾಂಕರ್‌ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಆರ್.ವಿ. ಎನ್. ಬಾಬು ಹೇಳಿದರು.

‘ದಕ್ಷಿಣ ಪಿನಾಕಿನಿ ನದಿಯು ಈ ಪ್ರದೇಶದಲ್ಲಿ ಹರಿಯುತ್ತದೆ. ಈ ಗ್ರಾಮಗಳ ಸುತ್ತ–ಮುತ್ತ ಅಣೆಕಟ್ಟು ನಿರ್ಮಾಣ ಮಾಡಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿಯೇ ಇದೆ. ಕೊಳವೆಬಾವಿಗಳಿಂದ ನೀರು ತೆಗೆಯುವುದಕ್ಕೆ ನಿರ್ಬಂಧ ವಿಧಿಸುವುದಾದರೆ ಇಡೀ ರಾಜ್ಯದಲ್ಲಿ ಈ ನಿಯಮ ಅನ್ವಯವಾಗಲಿ. ಹೊಸಕೋಟೆಯಈ ಮೂರು ಗ್ರಾಮಗಳಲ್ಲಿ ಮಾತ್ರ ನಿರ್ಬಂಧವೇಕೆ’ ಎಂದೂ ಅವರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT