ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ ಈಗ ಎಷ್ಟು ಸ್ಮಾರ್ಟ್‌?: ಬಾಲಭವನ, ತಾರಾಲಯಕ್ಕೆ ‘ಹೈಟೆಕ್’ ಸ್ಪರ್ಶ

ಕಬ್ಬನ್‌ಪಾರ್ಕ್‌ನಲ್ಲಿ ಕರಗದ ಕುಂಟೆಗೆ ಕಾಯಕಲ್ಪ; ತಾರಾಲಯದಲ್ಲಿ ‘ಹಸಿರು ಕಟ್ಟಡ’
Last Updated 23 ಆಗಸ್ಟ್ 2022, 7:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಸಿರು ಪರಿಸರಕ್ಕೆ ಪ್ರಮುಖ ಕಾರಣವಾಗಿರುವ ಕಬ್ಬನ್‌ ಪಾರ್ಕ್‌ ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ಹೈಟೆಕ್‌ ಸ್ವರೂಪ ಪಡೆದುಕೊಳ್ಳುತ್ತಿದೆ. ಚಿಣ್ಣರಿಗೆ ಅಚ್ಚುಮೆಚ್ಚಿನ ತಾಣವಾದ ಬಾಲಭವನ ವಿಶೇಷ ರೂಪದೊಂದಿಗೆ ಅತ್ಯಾಧುನಿಕ ಸಲಕರಣೆಗಳನ್ನೂ ಪಡೆದುಕೊಳ್ಳಲಿದೆ. ಆದರೆ ಇದನ್ನೆಲ್ಲ ಅನುಭವಿಸಲು ಇನ್ನೊಂದೆರಡು ತಿಂಗಳು ಕಾಯಲೇಬೇಕು.

ಮಕ್ಕಳಿಗೆ ಪ್ರಿಯವಾದ ತಾಣವಾಗಿರುವ ಕಬ್ಬನ್‌ ಪಾರ್ಕ್‌ನಲ್ಲಿ ಹೊಸ ಸೌಲಭ್ಯಗಳು ಕಾಣ ಸಿಗಲಿವೆ. ವಿಶೇಷ ಮಕ್ಕಳಿಗೆ ವೈಶಿಷ್ಟ್ಯಪೂರ್ಣವಾದ ಆಟದ ಮೈದಾನವನ್ನು ‘ಮೈಂಡ್‌ಟ್ರೀ’ ಸಹಯೋಗ ದೊಂದಿಗೆ ರೂಪಿಸಲಾಗಿದೆ. ‘ಪುಟಾಣಿ ಎಕ್ಸ್‌ಪ್ರೆಸ್‌’ ರೈಲು ಮತ್ತೆ ಓಡಲು ಎಲ್ಲ ರೀತಿಯ ವ್ಯವಸ್ಥೆಗಳೂ ಆಗುತ್ತಿವೆ. ಈ ಎಲ್ಲ ರೀತಿಯ ಸೌಂದರ್ಯೀಕರಣಕ್ಕೆ ₹17.55 ಕೋಟಿ ವೆಚ್ಚವಾಗಿದೆ.

ಇದಲ್ಲದೆ, ಕಬ್ಬನ್‌ ಪಾರ್ಕ್‌ನಲ್ಲಿ ಬೊಟಾನಿಕಲ್‌ ಗಾರ್ಡನ್‌ ಧಾರವಾಡದ ಎಕೊ ವಿಲೇಜ್‌ ಪರಿಕಲ್ಪನೆಯಲ್ಲಿ ಮರು ಅಭಿವೃದ್ಧಿಯನ್ನೂ ಕಾಣುತ್ತಿದೆ. ಅಭಿವೃದ್ಧಿ ಕಾಮಗಾರಿಯ ಜೊತೆಗೆ ಅದನ್ನು ರಕ್ಷಿಸುವ ವಿಧಾನಗಳನ್ನು ಅಳವಡಿಸಲಾಗಿದೆ. ಇಲ್ಲಿನ ಮಳೆನೀರು ಹರಿಯುವ ಹಾದಿಯನ್ನು ದುರಸ್ತಿ ಮಾಡಿ, ನಗರದ ಐತಿಹಾಸಿಕ ಕರಗದ ಕುಂಟೆ, ಲೋಟಸ್‌, ಡ್ರೈ ಪಾಂಡ್‌ ಹಾಗೂ ಕೊಳಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬಾಲಭವನದಲ್ಲಿ ಆಕರ್ಷಣೆಯನ್ನು ಹೆಚ್ಚಿಸಿದ್ದು, ಬೋಟಿಂಗ್ ವ್ಯವಸ್ಥೆ ದ್ವೀಪದ ವೈಶಿಷ್ಟ್ಯದೊಂದಿಗೆ ಮರುಸೃಷ್ಟಿಯಾಗು ತ್ತಿದೆ.

ಪಾದಚಾರಿ ಮಾರ್ಗದ ಉನ್ನತೀಕರಣ, ಲೋಟಸ್‌ ಪಾಂಡ್‌ ಪುನರುಜ್ಜೀವನ, ಮಳೆ ನೀರು ಸಂಗ್ರಹಿಸಲು ಅಚ್ಚುಕಟ್ಟು ಪ್ರದೇಶದ ಮರು ಅಭಿವೃದ್ಧಿ, ಜಾಗಿಂಗ್‌ ಮತ್ತು ಸೈಕಲ್‌ ಸವಾರರಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಇಲ್ಲಿ ಅಳವಡಿಸಲಾಗಿದೆ. ಕೆಲವು ಭಾಗಗಳಲ್ಲಿ ಹೊಸ ಬೇಲಿಯನ್ನೂ ಇಲ್ಲಿ ಅಳವಡಿಸಲಾಗುತ್ತಿದೆ.

ಸೆಪ್ಟೆಂಬರ್‌ ಅಂತ್ಯಕ್ಕೆ ಪೂರ್ಣ

ಕಬ್ಬನ್‌ಪಾರ್ಕ್‌ ಅಭಿವೃದ್ಧಿ ಯೋಜನೆಯಲ್ಲಿ ಮೊದಲು ಬಾಲಭವನ ಇರಲಿಲ್ಲ. ಯೋಜನೆ ರೂಪಿಸಿಕೊಂಡು, ನಾಗರಿಕರ ಸಲಹೆ ಪಡೆದು ಕಾಮಗಾರಿ ಆರಂಭಿಸಲು ವಿಳಂಬವಾಯಿತು. 2021ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ ದೆವು. ರಜೆ ದಿನಗಳಲ್ಲಿ ಕೆಲಸ ಮಾಡುವಂತಿಲ್ಲ. ಬೃಹತ್‌ ಯಂತ್ರಗಳನ್ನೂ ಉದ್ಯಾನಕ್ಕೆ ತರುವಂತಿಲ್ಲ. ಹೀಗಾಗಿ ಸ್ವಲ್ಪ ವಿಳಂಬವಾಗಿದೆ. ಈ ಸೆಪ್ಟೆಂಬರ್‌ನಲ್ಲಿ ಎಲ್ಲ ಕೆಲಸಗಳನ್ನೂ ಮುಗಿಸುವ ಗುರಿ ಹೊಂದಿದ್ದೇವೆ.

- ವಿನಾಯಕ ಸೂಗೂರು, ಮುಖ್ಯ ಎಂಜಿನಿಯರ್‌, ಸ್ಮಾರ್ಟ್‌ ಸಿಟಿ

ಕಬ್ಬನ್‌ಪಾರ್ಕ್‌ನಲ್ಲಿ ವಿಶೇಷ ಮಕ್ಕಳಿಗೆ ರೂಪಿಸಲಾಗಿರುವ ಪಾರ್ಕ್‌
ಕಬ್ಬನ್‌ಪಾರ್ಕ್‌ನಲ್ಲಿ ವಿಶೇಷ ಮಕ್ಕಳಿಗೆ ರೂಪಿಸಲಾಗಿರುವ ಪಾರ್ಕ್‌

ಪ್ಲಾಟಿನಂ ಸರ್ಟಿಫಿಕೇಟ್‌ ಗುರಿ

ಜವಾಹರ ಲಾಲ್‌ ನೆಹರೂ ತಾರಾಲಯದಲ್ಲಿನಿರ್ಮಾಣವಾಗಲಿರುವ ‘ಹಸಿರು ಕಟ್ಟಡ’ ಹೀಗಿರಲಿದೆ
ಜವಾಹರ ಲಾಲ್‌ ನೆಹರೂ ತಾರಾಲಯದಲ್ಲಿ
ನಿರ್ಮಾಣವಾಗಲಿರುವ ‘ಹಸಿರು ಕಟ್ಟಡ’ ಹೀಗಿರಲಿದೆ

ಮಕ್ಕಳಿಗೆ ಸೌರಲೋಕದ ಜ್ಞಾನ ನೀಡುವ ಜವಾಹರಲಾಲ್‌ ನೆಹರೂ ತಾರಾಲಯಕ್ಕೆ ‘ಸ್ಮಾರ್ಟ್‌ ಸೌಲಭ್ಯಗಳನ್ನು’ ನೀಡಲಾಗುತ್ತದೆ. ₹36 ಕೋಟಿ ವೆಚ್ಚದಲ್ಲಿ ಇಲ್ಲಿ ಎರಡು ಕಟ್ಟಡಗಳು ನಿರ್ಮಾಣವಾಗಲಿವೆ. 600 ಆಸನಗಳ ಬೃಹತ್ ಸಭಾಂಗಣ ಇಲ್ಲಿ ನಿರ್ಮಾಣದ ಹಂತದಲ್ಲಿದೆ. ಇದರ ಜೊತೆಗೆ ತಲಾ 50 ಆಸನಗಳ ನಾಲ್ಕು ಹಾಗೂ 100 ಆಸನಗಳ ಒಂದು ಸಭಾಂಗಣ ಈ ಕಟ್ಟಡದಲ್ಲಿ ಇರಲಿದೆ. ಇದು ಮಕ್ಕಳು ಹಾಗೂ ವಿಜ್ಞಾನ ಆಸಕ್ತರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಸಹಕಾರಿ.

ನೆಹರೂ ತಾರಾಲಯದಆವರಣದಲ್ಲೇ ಮತ್ತೊಂದು ‘ಮಿನಿ ಆಡಿಟೋರಿಯಂ’ ಸಹ ನಿರ್ಮಾಣವಾಗಲಿದೆ. ಇದು 600 ಆಸನಗಳ ಸಾಮರ್ಥ್ಯವನ್ನು ಹೊಂದಿದ್ದು, ಇದು ವಿಶೇಷಚೇತನಸ್ನೇಹಿ ಕಟ್ಟಡವಾಗಿರಲಿದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಈ ಸಭಾಂಗಣ ನಿರ್ಮಾಣವಾಗಲಿದೆ. ಮಕ್ಕಳು ಮತ್ತು ಮಹಿಳೆಯರಿಗೇ ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶೇಷವಾದ ಪ್ಯಾನೆಲಿಂಗ್‌, ವೇದಿಕೆ, ಕರ್ಟನ್ಸ್‌, ಬೆಳಕಿನ ಸೌಲಭ್ಯ ಇಲ್ಲಿ ಲಭ್ಯ.

ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ (ಐಜಿಬಿಸಿ) ವತಿಯಿಂದ ನೀಡಲಾಗುವ ಪ್ಲಾಟಿನಂ ಸರ್ಟಿಫಿಕೇಟ್‌ ಪಡೆಯುವುದು ಈ ಎರಡು ‘ಹಸಿರು ಕಟ್ಟಡ’ಗಳ ಗುರಿ. ಈ ನಿಟ್ಟಿನಲ್ಲೇ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಐಜಿಬಿಸಿಯ ತಂಡವೂ ಆಗಾಗ್ಗೆ ಬಂದು ನಿರ್ಮಾಣದಲ್ಲಿ ಎಲ್ಲ ರೀತಿಯ ನಿಯಮ ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದೆ. ಪರಿಸರ
ಸ್ನೇಹಿಯಾಗಿ ನಿರ್ಮಾಣವಾಗುವ ಕಟ್ಟಡಕ್ಕೆ ‘ಹಸಿರು ಕಟ್ಟಡ’ ಎಂಬ ಪ್ರಮಾಣ ಪತ್ರ ಲಭಿಸುತ್ತದೆ. ಈ ಕಟ್ಟಡಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಡಿಸೆಂಬರ್‌ಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ. ಆದರೆ, ವಾಸ್ತವದಲ್ಲಿ ಅದಕ್ಕಿಂತ ಮತ್ತಷ್ಟು ತಿಂಗಳು ಕಾಮಗಾರಿ ಪೂರೈಸಲು ಬೇಕಿದೆ.

ಜವಾಹರ ಲಾಲ್‌ ನೆಹರೂ ತಾರಾಲಯದಲ್ಲಿ ನಿರ್ಮಾಣ ಹಂತದಲ್ಲಿರುವ ‘ಹಸಿರು ಕಟ್ಟಡ’
ಜವಾಹರ ಲಾಲ್‌ ನೆಹರೂ ತಾರಾಲಯದಲ್ಲಿ ನಿರ್ಮಾಣ ಹಂತದಲ್ಲಿರುವ ‘ಹಸಿರು ಕಟ್ಟಡ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT