ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿ–ಕ್ಷಯ್ ಮಿತ್ರ ಯೋಜನೆ’: 1,400 ಕ್ಷಯ ರೋಗಿಗಳ ದತ್ತು

ರೋಗಿಗಳಿಗೆ ಉಚಿತವಾಗಿ ಪೌಷ್ಟಿಕ ಆಹಾರದ ಕಿಟ್‌ಗಳ ವಿತರಣೆ
Published 7 ಜೂನ್ 2023, 14:22 IST
Last Updated 7 ಜೂನ್ 2023, 14:22 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ಭಾಗವಾದ ‘ನಿ–ಕ್ಷಯ್ ಮಿತ್ರ ಯೋಜನೆ’ಯಡಿ ದತ್ತು ಪಡೆದ ಕ್ಷಯ ರೋಗಿಗಳಿಗೆ ನಗರದಲ್ಲಿ ಬುಧವಾರ ಉಚಿತವಾಗಿ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಸಂಸದ ಲಹರ್‌ ಸಿಂಗ್‌ ಹಾಗೂ ಅವರ ಜೊತೆಗಾರರು ನಗರದಲ್ಲಿ ಒಟ್ಟು 1,400 ಕ್ಷಯ ರೋಗಿಗಳನ್ನು ದತ್ತು ಪಡೆದು, ಅಗತ್ಯ ಆಹಾರದ ಕಿಟ್‌ಗಳನ್ನು ಪೂರೈಸುತ್ತಿದ್ದಾರೆ. ಉದ್ಯಮಿ ಅನಿಲ್‌ ಅಗರ್ವಾಲ್‌ ಅವರು ನಗರದಲ್ಲಿ 300 ರೋಗಿಗಳನ್ನು ದತ್ತು ಪಡೆದರು. 

ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ರಾಜ್ಯವನ್ನು 2025ರ ವೇಳೆಗೆ ಕ್ಷಯ  ಮುಕ್ತಗೊಳಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಈ ರೋಗ ತಡೆಗೆ ಕ್ರಮವಹಿಸಲಾಗಿದೆ. ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ಸಂಘ–ಸಂಸ್ಥೆಗಳು, ಉದ್ಯಮಿಗಳು ಕ್ಷಯ ರೋಗಿಗಳನ್ನು ದತ್ತು ಪಡೆದು, ಪೂರಕ ನೆರವು ನೀಡಬೇಕು. ಈ ಕ್ರಮ ರೋಗದ ವಿರುದ್ಧ ಹೋರಾಡಲು ಸಹಕಾರಿ’ ಎಂದು ಹೇಳಿದರು. 

ಜಯನಗರದ ಕೆಎಂವೈಎಫ್‌ ಡಿ.ಆರ್‌.ರಂಕ ಡಯಾಲಿಸಿಸ್‌ ಸೆಂಟರ್‌ಗೆ ₹16.8 ಲಕ್ಷ ಮೊತ್ತದ 2 ಡಯಾಲಿಸಿಸ್‌ ಯಂತ್ರಗಳನ್ನು ಸಂಸದರ ನಿಧಿಯಿಂದ ನೀಡುವುದಾಗಿ ಘೋಷಿಸಿದ ಲಹರ್‌ ಸಿಂಗ್‌, ‘ಬೆಂಗಳೂರಿನಲ್ಲಿ ವೈಯಕ್ತಿಕವಾಗಿ 500, ಸಮುದಾಯ ಹಾಗೂ ಸ್ನೇಹಿತರ ಜೊತೆಗೂಡಿ ಒಟ್ಟು 1,400 ಕ್ಷಯ ರೋಗಿಗಳನ್ನು ದತ್ತು ಪಡೆಯಲಾಗಿದೆ. ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ನೆರವು ನೀಡುವ ಮೂಲಕ ಕ್ಷಯ ಮುಕ್ತ ಕಾರ್ಯಕ್ಕೆ ಸಾಮೂಹಿಕ ಬೆಂಬಲ ನೀಡಬೇಕು’ ಎಂದರು.

‘ಕ್ಷಯ ರೋಗಕ್ಕೆ ಪ್ರತಿದಿನ ನೀಡುವ ಔಷಧವನ್ನು ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ. ಈ ರೋಗಕ್ಕೆ ಕನಿಷ್ಠ 6 ತಿಂಗಳು ಚಿಕಿತ್ಸೆ ನೀಡಲಾಗುತ್ತದೆ. ನಿರಂತರ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣ ಗುಣಪಡಿಸಬಹುದು’ ಎಂದು ತಿಳಿಸಿದರು. 

ಆರೋಗ್ಯ ಇಲಾಖೆಯ ಕ್ಷಯ (ಟಿಬಿ) ವಿಭಾಗದ ಉಪ ನಿರ್ದೇಶಕ ಡಾ. ಅನ್ಸರ್ ಅಹಮದ್, ರಾಜ್ಯ ಟಿಬಿ ಸೆಂಟರ್‌ನ ಉಪ ನಿರ್ದೇಶಕ ಡಾ.ಅನಿಲ್‌ ಕುಮಾರ್‌, ಜಿಲ್ಲಾ ಟಿಬಿ ಕಾರ್ಯಕ್ರಮದ ಅಧಿಕಾರಿ ಡಾ. ಕಲ್ಪನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT