ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಕೋವಿಡ್ ಕರ್ತವ್ಯದ ‘ಹೊರೆ ’!

ಪರಿಹಾರವಿಲ್ಲ–ಸುರಕ್ಷತಾ ಪರಿಕರಗಳೂ ಇಲ್ಲ *ಅಪಾಯದಲ್ಲಿ ಕಾರ್ಯ ನಿರ್ವಹಿಸುವ ಒತ್ತಡ
Last Updated 23 ಮೇ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಶಿಕ್ಷಕರು ಕೋವಿಡ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯದ ವೇಳೆ ಮೃತಪಟ್ಟವರ ಕುಟುಂಬಕ್ಕೆ ₹30 ಲಕ್ಷ ಪರಿಹಾರ ಕೊಡುವುದು ಒಂದೆಡೆ ಇರಲಿ, ಈ ಶಿಕ್ಷಕರಿಗೆ ಕನಿಷ್ಠ ಮಾಸ್ಕ್‌, ಸ್ಯಾನಿಟೈಸರ್, ಗ್ಲೌಸ್‌ನಂತಹ ಸುರಕ್ಷತಾ ಸಾಮಗ್ರಿಗಳನ್ನೂ ಸರ್ಕಾರ ಒದಗಿಸುತ್ತಿಲ್ಲ.

ಆಸ್ಪತ್ರೆ, ರೈಲು ಮತ್ತು ಬಸ್‌ ನಿಲ್ದಾಣ, ಚೆಕ್‌ಪೋಸ್ಟ್‌ಗಳಲ್ಲಿ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಕೋವಿಡ್ ವಾರ್‌ರೂಮ್, ಸಹಾಯವಾಣಿಯಲ್ಲಿ ಇವರು ಕೆಲಸ ಮಾಡುತ್ತಿರುವುದಲ್ಲದೆ, ಸೋಂಕಿತರ ಮನೆಗೇ ಹೋಗಿ, ಅವರ ಮತ್ತು ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ವಿವರವನ್ನು ಸಂಗ್ರಹಿಸಿ, ಅವರ ಕುಟುಂಬದವರೊಂದಿಗೆ ಫೋಟೊ ತೆಗೆಸಿ, ಅದನ್ನು ಸಂಬಂಧಪಟ್ಟವರಿಗೆ ರವಾನಿಸಬೇಕಾಗಿದೆ.

’ಶಿಕ್ಷಕರು ಸೋಂಕಿತರ ನೇರ ಸಂಪರ್ಕಕ್ಕೆ ಬರುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ, ಅವರಿಗೆ ಕನಿಷ್ಠ ಸುರಕ್ಷತಾ ಪರಿಕರಗಳನ್ನೂ ಒದಗಿಸುತ್ತಿಲ್ಲ. ಶಿಕ್ಷಕರು ಮುಂಚೂಣಿ ಕಾರ್ಯಕರ್ತರು ಎಂಬ ಆದೇಶವನ್ನು ಇನ್ನೂ ಅಧಿಕೃತವಾಗಿ ಹೊರಡಿಸಿಲ್ಲ. ಕಂದಾಯ ಇಲಾಖೆಯಿಂದ ಈ ಆದೇಶ ಹೊರಡಬೇಕಿದೆ‘ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಚಂದ್ರಶೇಖರ ನುಗ್ಗಲಿ ಹೇಳಿದರು.

’ಯಾವುದೇ ಸೌಲಭ್ಯ ಕೇಳಬೇಕು ಎಂದರೆ ಸಂಬಂಧಪಟ್ಟ ಜಿಲ್ಲಾಡಳಿತಗಳಿಗೆ ಕೇಳಬೇಕು. ಶಿಕ್ಷಣ ಇಲಾಖೆಯಿಂದ ಸರಿಯಾದ ಪರಿಹಾರ ಇಲ್ಲ. ರಜಾ ದಿನಗಳಲ್ಲಿಯೂ ಕೆಲಸ ಮಾಡುತ್ತಿದ್ದೇವೆ. ಗಳಿಕೆ ರಜೆ ಕೊಡುತ್ತೇವೆ ಎಂದು ಹೇಳಿದ್ದರು. ಆ ಸೌಲಭ್ಯವನ್ನೂ ನೀಡಿಲ್ಲ‘ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಬಿ. ಲಿಂಗರಾಜು ಹೇಳಿದರು.

’ಶಿಕ್ಷಕರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಲಸಿಕೆ ನೀಡಲಾಗುತ್ತಿದೆ. ಶಿಕ್ಷಕರ ಕುಟುಂಬದವರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು‘ ಎಂದು ಒತ್ತಾಯಿಸಿದರು.

’ಅನುದಾನಿತ ಶಾಲಾ ಶಿಕ್ಷಕರು ಕೋವಿಡ್‌ನಿಂದ ಮೃತಪಟ್ಟರೆ ನಯಾಪೈಸೆ ಪರಿಹಾರವೂ ಅವರಿಗೆ ಸಿಗದು. ಕರ್ತವ್ಯಕ್ಕೆ ನಿಯೋಜಿಸುತ್ತಾರೆ ವಿನಾ ಅವರನ್ನು ಕೊರೊನಾ ಸೇನಾನಿಗಳು ಎಂದು ಪರಿಗಣಿಸಲ್ಲ‘ ಎಂದು ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ. ಕರಬಸಪ್ಪ ಹೇಳಿದರು.

’ಈಗ ಶಾಲೆಗಳು ನಡೆಯುತ್ತಿಲ್ಲ. ಶಿಕ್ಷಕರಿಗೆ ಸುಮ್ಮನೆ ವೇತನ ಏಕೆ ಕೊಡಬೇಕು ಎಂಬ ಉದ್ದೇಶದಿಂದ ಸರ್ಕಾರ ಅವರನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುವ ಮೂಲಕ ವ್ಯವಹಾರಿಕವಾಗಿ ಯೋಚಿಸುತ್ತಿದೆ‘ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಸಚಿವ ಎಸ್. ಸುರೇಶ್‌ಕುಮಾರ್ ಅವರಿಗೆ ಕರೆ ಮಾಡಲಾಯಿತು. ಅವರು ಸ್ವೀಕರಿಸಲಿಲ್ಲ.

’ಕೆಲಸಕ್ಕುಂಟು, ಲೆಕ್ಕಕ್ಕಿಲ್ಲ‘

’ಗುತ್ತಿಗೆ ಶಿಕ್ಷಕರನ್ನೂ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಕಾಯಂ ಶಿಕ್ಷಕರು ಮಾಡುವ ಎಲ್ಲ ಕಾರ್ಯಗಳನ್ನೂ ನಾವು ಮಾಡುತ್ತೇವೆ. ನಮ್ಮನ್ನು ಕೊರೊನಾ ಸೇನಾನಿಗಳು ಎಂದೇ ಸರ್ಕಾರ ಪರಿಗಣಿಸಿಲ್ಲ‘ ಎಂದು ಬಿಬಿಎಂಪಿ ಶಾಲೆಗಳ ಗುತ್ತಿಗೆ ಶಿಕ್ಷಕರೊಬ್ಬರು ಹೇಳಿದರು.

’ಸುರಕ್ಷತಾ ಕಿಟ್‌ಗಳಿರಲಿ ನಮಗೆ ಕೊಡುವ ಕನಿಷ್ಠ ಸಂಬಳವನ್ನೂ ಸರ್ಕಾರ ಸರಿಯಾಗಿ ಪಾವತಿಸುತ್ತಿಲ್ಲ‘ ಎಂದರು.

’ಕರ್ತವ್ಯದ ವೇಳೆ ಸೋಂಕು ತಗುಲಿದವರಿಗೆ ಕೆಲವು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಹೇಳುತ್ತದೆ. ಆದರೆ, ಚಿಕಿತ್ಸೆಗಾಗಿ ಹೋದರೆ ಹಲವು ಷರತ್ತುಗಳನ್ನು ಹಾಕುತ್ತಾರೆ. ಕೋವಿಡ್‌ ಪೀಡಿತ ಶಿಕ್ಷಕರಿಬ್ಬರಿಗೆ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲೇ ಇಲ್ಲ‘ ಎಂದು ಹೇಳಿದರು.

ಶಿಕ್ಷಕರ ಬೇಡಿಕೆಗಳು

* ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹30 ಲಕ್ಷ ಪರಿಹಾರ ನೀಡಬೇಕು

* ಕರ್ತವ್ಯನಿರತ ಶಿಕ್ಷಕರಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಫೇಸ್‌ಶೀಲ್ಡ್‌ ವಿತರಿಸಬೇಕು

* ಶಿಕ್ಷಕರು ಮತ್ತು ಅವರ ಕುಟುಂಬಕ್ಕೆ ಆದ್ಯತೆ ಮೇರೆಗೆ ಲಸಿಕೆ ವಿತರಿಸಬೇಕು

* ಆಸ್ಪತ್ರೆಗಳಲ್ಲಿ ಶೇ 10 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು

* ಅನುದಾನಿತ ಶಾಲೆ ಮತ್ತು ಗುತ್ತಿಗೆ ಶಿಕ್ಷಕರನ್ನೂ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT