ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣ: ₹ 2 ಕೋಟಿಗೆ ಬೇಡಿಕೆ

Last Updated 23 ಸೆಪ್ಟೆಂಬರ್ 2021, 22:11 IST
ಅಕ್ಷರ ಗಾತ್ರ

ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದ ಸ್ನೇಹಿತನನ್ನೇ ಅಪಹರಿಸಿ, ಬಿಡುಗಡೆ ಮಾಡಲು ₹ 2 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪದಡಿ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪ್ರಶಾಂತ್, ಅರಿವೇಗನ್ ಹಾಗೂ ಸಂತೋಷ್ ಬಂಧಿತರು. ಮೂವರು ಸೇರಿಕೊಂಡು ಸ್ನೇಹಿತ ವಿನೀತ್ ಎಂಬುವರನ್ನು ಅಪಹರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಪೊಲೀಸರು ಹೇಳಿದರು.

‘ನವೋದ್ಯಮದಲ್ಲಿ ಯಶಸ್ವಿಯಾಗಿದ್ದ ವಿನೀತ್, ತನ್ನದೇ ಕಂಪನಿ ನಡೆಸುತ್ತಿದ್ದರು. ಕೆಲಸ ನಿರ್ವಹಣೆ ಸಂಬಂಧ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದ ಅವರಿಗೆ ₹ 5 ಕೋಟಿ ಬರಬೇಕಿತ್ತು. ಇದನ್ನು ತಿಳಿದುಕೊಂಡಿದ್ದ ಸ್ನೇಹಿತ ಪ್ರಶಾಂತ್, ವಿನೀತ್‌ ಅವರನ್ನು ಅಪಹರಿಸಿ ಹಣ ಕಿತ್ತುಕೊಳ್ಳಲು ಸಂಚು ರೂಪಿಸಿದ್ದ. ಈತನೂ ಸಾಫ್ಟ್‌ವೇರ್ ಎಂಜಿನಿಯರ್.’

ಊಟಕ್ಕೆ ಕರೆದು ಅಪಹರಣ: ‘ಔತಣಕೂಟದ ಸೋಗಿನಲ್ಲಿ ವಿನೀತ್‌ ಅವರನ್ನು ತಮ್ಮ ಬಳಿ ಕರೆಸಿಕೊಂಡಿದ್ದ ಆರೋಪಿಗಳು, ಒಟ್ಟಿಗೆ ಊಟ ಮಾಡಿದ್ದರು. ನಂತರ ಕಾರಿನಲ್ಲಿ ಅಪಹರಿಸಿಕೊಂಡು ತಮಿಳುನಾಡಿನತ್ತ ಹೋಗಿದ್ದರು. ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿದ್ದರು. ಹೋಟೆಲೊಂದರಲ್ಲಿ ವಿನೀತ್‌ ಅವರನ್ನು ಅಕ್ರಮ ಬಂಧನದಲ್ಲಿರಿಸಿದ್ದರು’ ಎಂದೂ ಪೊಲೀಸರು ಹೇಳಿದರು.

‘ಕುಟುಂಬದವರಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ವಿನೀತ್‌ ಅಪಹರಣ ಮಾಡಿದ್ದೇವೆ. ₹ 2 ಕೋಟಿ ಕೊಟ್ಟರೆ ಬಿಡುತ್ತೇವೆ’ ಎಂದಿದ್ದರು. ಗಾಬರಿಗೊಂಡ ಕುಟುಂಬದವರು ಠಾಣೆಗೆ ಬಂದು ದೂರು ನೀಡಿದ್ದರು.’

ಸುಳಿವು ನೀಡಿದ ಫಾಸ್ಟ್‌ಟ್ಯಾಗ್; ‘ಕೃತ್ಯಕ್ಕಾಗಿ ಆರೋಪಿಗಳು, ಸ್ನೇಹಿತರೊಬ್ಬರ ಕಾರು ಪಡೆದಿದ್ದರು. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಆರಂಭಿಸಲಾಯಿತು. ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೇಟ್‌ ಮೂಲಕ ಕಾರು ಹಾದು ಹೋಗಿದ್ದು ಫಾಸ್ಟ್‌ಟ್ಯಾಗ್‌ನಿಂದ ತಿಳಿಯಿತು. ತಮಿಳುನಾಡಿಗೆ ಹೋದ ವಿಶೇಷ ತಂಡ, ಹೋಟೆಲೊಂದರಲ್ಲಿ ಆರೋಪಿಗಳನ್ನು ಬಂಧಿಸಿತು. ವಿನೀತ್‌ ಅವರನ್ನು ಸುರಕ್ಷಿತವಾಗಿ ನಗರಕ್ಕೆ ಕರೆತಂದಿತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT