ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ದುರ್ಬಳಕೆ | ಓಲಾ ಕಂಪನಿಗೆ ಲಕ್ಷಾಂತರ ವಂಚಿಸಿದ ನಾಲ್ವರ ಬಂಧನ

ಗ್ರಾಹಕರಂತೆ ಕಾರು ಬುಕ್‌ ಮಾಡಿ ಚಾಲಕರಿಂದ ಮೋಸ
Last Updated 11 ಜೂನ್ 2020, 10:07 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರಂತೆ ಕಾರುಗಳನ್ನು ತಾವೇ ಬುಕ್‌ ಮಾಡಿ, ಎಲ್ಲಿಗೂ ಹೋಗದೆ ದಿನಕ್ಕೆ 15ರಿಂದ 20 ಟ್ರಿಪ್‌ ಮಾಡಿದ್ದೇವೆಂದು ಪ್ರೋತ್ಸಾಹಧನ ಪಡೆದು ಓಲಾ ಕಂಪನಿಗೆ ಲಕ್ಷಾಂತರ ಹಣ ವಂಚಿಸಿದ ನಾಲ್ವರನ್ನು ಕೇಂದ್ರ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಭರತ್‌ ನಗರದ ನಾಗೇಶ್‌ (36), ಹೊಸಕೆರೆಹಳ್ಳಿ ರವಿ (21) ಬಸಾಪುರದ ಮನು (27), ಕೆಂಪೇಗೌಡ ನಗರದ ಸತೀಶ (32) ಬಂಧಿತರು.

ಆರೋಪಿಗಳಿಂದ ₹ 23 ಲಕ್ಷ ಮೌಲ್ಯದ ಎರಡು ಇನ್ನೊವಾ ಕಾರು, ಒಂದು ಸ್ವಿಫ್ಟ್ ಕಾರು, 500 ಸಿಮ್‌ ಕಾರ್ಡ್, ಐಡಿ ಕಾರ್ಡ್‌ ಮುದ್ರಿಸುವ ಎರಡು ಪ್ರಿಂಟರ್‌, 16 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಓಲಾ ಕಂಪನಿಯ ಇಡೀ ವ್ಯವಹಾರ ತಂತ್ರಜ್ಞಾನದ ನೆರವಿನಿಂದ ನಡೆಯುತ್ತಿದೆ. ಈ ತಂತ್ರಜ್ಞಾನವನ್ನೇ ದುರ್ಬಳಕೆ ಮಾಡಿಕೊಂಡು ಆರೋಪಿಗಳು, ಕಂಪನಿಗೆ ವಂಚಿಸಿರುವ ವಿಷಯ ತನಿಖೆಯಿಂದ ಗೊತ್ತಾಗಿದೆ.

ವಂಚನೆ ಹೇಗೆ?: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ತೆಗೆದುಕೊಂಡು ಆರೋಪಿಗಳು ತಮ್ಮ ಕಾರುಗಳನ್ನು ಓಲಾ ಕಂಪನಿಗೆ ಸೇರಿಸಲು ಆನ್‌ಲೈನ್‌ ಮೂಲಕ ಕಳುಹಿಸಿದ್ದಾರೆ. ಬಳಿಕ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲು ತಮ್ಮ ಬಳಿ 50 ಬುಕ್ಕಿಂಗ್‌ ಐಡಿಗಳು ಇರುವುದಾಗಿ ನಂಬಿಸಿ, ಕಂಪನಿಯಿಂದ ತಮ್ಮ ಕಾರುಗಳಿಗೆ ಟ್ರಿಪ್‌ ಒದಗಿಸಲು ಅನುಮತಿಯನ್ನೂ ಪಡೆದುಕೊಂಡಿದ್ದಾರೆ.

ಕ್ಯಾಬ್‌ ಕಂಪನಿಗಳು ವ್ಯಾಪಾರ ಹೆಚ್ಚಿಸಲು ಚಾಲಕರಿಗೆ ಪ್ರೋತ್ಸಾಹಧನ, ಇತರ ಸೌಲಭ್ಯಗಳನ್ನು ನೀಡುತ್ತವೆ. ಕ್ಯಾಬ್‌ಗಳು ದಿನಕ್ಕೆ 15ರಿಂದ 20 ಟ್ರಿಪ್‌ ಮಾಡಿದರೆ ಸ್ಲ್ಯಾಬ್‌ಗೆ ತಕ್ಕಂತೆ ಸಾಕಷ್ಟು ಪ್ರೋತ್ಸಾಹಧನವನ್ನು ಕಂಪನಿಗಳು ಕೊಡುತ್ತವೆ.‌

ಆರೋಪಿ ಚಾಲಕರು ಬೇರೆ, ಬೇರೆ ಮೊಬೈಲ್‌ ಫೋನ್‌ಗಳ ಮೂಲಕ ಗ್ರಾಹಕರಂತೆ ತಾವೇ ಕ್ಯಾಬ್‌ಗಳನ್ನು ಬುಕ್‌ ಮಾಡಿದ್ದಾರೆ. ಆದರೆ, ಆ ಟ್ರಿಪ್‌ನಲ್ಲಿ ಕಾರು ನಿಂತ ಜಾಗದಿಂದ ಅಲುಗಾಡಿಯೇ ಇರುವುದಿಲ್ಲ. ಎಂಜಿನ್‌ ಕೂಡಾ ಸ್ಟಾರ್ಟ್‌ ಮಾಡದೆ, ಆರೋಪಿಗಳು ತಂತ್ರಜ್ಞಾನದ ಮೂಲಕ ಕಂಪನಿಯನ್ನು ವಂಚಿಸಿದ್ದಾರೆ.

ಗೂಗಲ್‌ನಲ್ಲಿ ಸಿಗುವ ‘ಜಿಪಿಎಸ್‌ ಮಾಕ್‌ ಆ್ಯಪ್‌’ ಅನ್ನ ಬಳಸಿ ಮಾಕ್‌ ಲೊಕೇಷನ್‌ಗಳನ್ನು (ಫೇಕ್ ಜಿಪಿಎಸ್‌ ಪಾಥ್) ತೋರಿಸಿಕೊಂಡು ಕಾರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಿದೆ ಎಂದು ಕಿಲೋ ಮೀಟರ್‌ ಜಂಪ್‌ ಮಾಡಿ ದಿನಕ್ಕೆ 15ರಿಂದ 20 ಟ್ರಿಪ್‌ಗಳನ್ನು ಬುಕ್‌ ಮಾಡಿ ಆರೋಪಿಗಳು ಕಂಪನಿಯಿಂದ ಪ್ರೋತ್ಸಾಹಧನ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT