ಶನಿವಾರ, ಫೆಬ್ರವರಿ 22, 2020
19 °C
ಹಿಂದೂ ಮುಖಂಡರ ಹತ್ಯೆಗೆ ನಡೆದಿತ್ತು ಭಾರಿ ಸಂಚು *ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳು

ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಸಂಚು: ಎಸ್‌ಡಿಪಿಐ ಕಾರ್ಯಕರ್ತರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪುರಭವನದ ಬಳಿ ಡಿ. 22ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಪರ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಆರು ಮಂದಿ ದುಷ್ಕರ್ಮಿಗಳನ್ನು ಕಲಾಸಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ.ನಗರದ ನಿವಾಸಿಗಳಾದ ಮೊಹಮ್ಮದ್ ಇರ್ಫಾನ್ (33), ಸೈಯದ್ ಅಕ್ಬರ್ (46), ಲಿಂಗರಾಜಪುರದ ಸೈಯದ್ ಸಿದ್ಧಿಕ್ (33), ಗೋವಿಂದಪುರದ ಅಕ್ಬರ್ ಪಾಷಾ (27), ಸನಾವುಲ್ಲ ಷರೀಫ್ (28) ಮತ್ತು ಶಿವಾಜಿನಗರದ ಸಾದಿಕ್ ಉಲ್ ಅಮೀನ್ (39) ಬಂಧಿತರು. ಎಲ್ಲರೂ ಎಸ್‌ಡಿಪಿಐ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.

ವರುಣ್ ಅವರನ್ನು ಹಿಂಬಾಲಿಸಿ ಎರಡು ಬೈಕ್ ನಲ್ಲಿ ಬಂದಿದ್ದ ಆರೋಪಿಗಳು ರಾಡ್ ಹಾಗೂ ಲಾಂಗ್‌ಗಳಿಂದ ವರುಣ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.

ವರುಣ್ ಮೇಲೆ ಹಲ್ಲೆಗೆ ವೈಯಕ್ತಿಕ ಕಾರಣವೇ ಇಲ್ಲ. ಆರೋಪಿಗಳಿಗೂ ವರುಣ್‌ಗೂ ಸಂಬಂಧವೇ ಇಲ್ಲ. ಸಿಎಎ ಪರವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಆತನ ಹತ್ಯೆಗೆ ಮುಂದಾಗಿರುವುದಾಗಿ  ವಿಚಾರಣೆಯ ವೇಳೆ ಆರೋಪಿಗಳು ತಿಳಿಸಿದ್ದಾರೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಹಲವು ಸ್ಫೋಟಕ ಮಾಹಿತಿ ಸಿಕ್ಕಿದೆ.

ಪೌರತ್ವ ಕಾಯ್ದೆ ಜನಜಾಗೃತಿ ಸಮಾವೇಶದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು.  ಡಿ. 22ರಂದು ಪುರಭವನ ಬಳಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಿದ್ದರು ಎಂಬ  ಮಾಹಿತಿ ಆರೋಪಿಗಳ ವಿಚಾರಣೆಯಿಂದ ಬಹಿರಂಗವಾಗಿದೆ.  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಅಂದು ನಡೆದ ಸಮಾವೇಶದ ನೇತೃತ್ವ ವಹಿಸಿದ್ದರು.

ಸಮಾವೇಶದ ರ‍್ಯಾಲಿ ವೇಳೆ ಕಲ್ಲು ತೂರಾಟ ನಡೆದಿತ್ತು. ಆರೋಪಿಗಳು ಕಲ್ಲುಗಳನ್ನು ತೂರಿ ಗುಂಪು ಚದುರಿಸುವ ಯೋಜನೆ ಹಾಕಿಕೊಂಡಿದ್ದರು. ಸಿಎಎ ಪರ ಸಭೆ ನಡೆದ ಸ್ಥಳದಲ್ಲಿ ಆರೋಪಿಗಳು ಏಳೆಂಟು ಕಲ್ಲುಗಳನ್ನು ಎಸೆದಿದ್ದರು. ಕಲ್ಲು ಬಿದ್ದಾಗ ಜನ ಚದುರುತ್ತಾರೆ. ಆಗ ಒಬ್ಬಂಟಿಯಾಗುವ ಮುಖಂಡನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ಆರೋಪಿಗಳು ಎಸೆದ ಕಲ್ಲು ಬೇರೆ ಬೇರೆ ಕಡೆ ಬಿದ್ದಿದ್ದವು. ನಂತರ ಕೇಸರಿ ಬಟ್ಟೆ ಧರಿಸಿದ್ದ ಆರೋಪಿಗಳು ವರುಣ್‌ನನ್ನು ಹಿಂಬಾಲಿಸಿದ್ದರು. ತಮ್ಮ ಇರುವಿಕೆ ಮರೆಮಾಚಲು ಮೊಬೈಲ್ ಆನ್ ಮಾಡಿ ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಮುಖ ಚಹರೆ ಮರೆ ಮಾಚಲು ಹೆಲ್ಮೆಟ್ ಧರಿಸಿದ್ದರು. ಕೃತ್ಯಕ್ಕೆ ಬಳಸಿದ್ದ ವಾಹನಗಳ ನಂಬರ್‌ಗೆ ಕಪ್ಪು ಮಸಿ ಹಚ್ಚಿದ್ದರು. ಕೃತ್ಯದ ಸಮಯದಲ್ಲಿ ಎರಡರಿಂದ ಮೂರು ಟಿ–ಶರ್ಟ್ ಧರಿಸಿದ್ದರು. ಕೃತ್ಯದ ನಂತರ ಎರಡು ಟಿ–ಶರ್ಟ್ ಬಿಚ್ಚಿಹಾಕಿ ರಸ್ತೆ ಮಧ್ಯೆ ಪೆಟ್ರೋಲ್ ಹಾಕಿ ಸುಟ್ಟಿದ್ದರು. ಮಚ್ಚುಗಳನ್ನು ನೈಸ್ ರಸ್ತೆಯ ಅಂಚೆಪಾಳ್ಯ ಕೆರೆಗೆ ಬಿಸಾಕಿದ್ದರು. ಹೆಲ್ಮೆಟ್ ಗಳನ್ನು ರಾಮಮೂರ್ತಿನಗರದ ಹೊಂಡಕ್ಕೆ ಬಿಸಾಕಿದ್ದರು ಎಂಬ ವಿಷಯವೂ ಗೊತ್ತಾಗಿದೆ.

ಆರೋಪಿಗಳು ಎಸ್‍ಡಿಪಿಐನಿಂದ ತಿಂಗಳಿಗೆ ₹10 ಸಾವಿರ ಪಡೆಯುತ್ತಿದ್ದರು. ಅಲ್ಲದೆ ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡುವಂತೆ ಸೂಚನೆ ಪಡೆದಿದ್ದರು ಎನ್ನುವ ವಿಚಾರ ತನಿಖೆಯ ವೇಳೆ ಬಯಲಿಗೆ ಬಂದಿದೆ.

ಬಂಧಿತರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು