ಬಿಬಿಎಂಪಿಯ ನೂತನ ಮೇಯರ್‌ಗೆ ಹೇಳಿ ನಿಮ್ಮ ಅಹವಾಲು

7
ಪ್ರಥಮ ಪ್ರಜೆಗೆ ಪ್ರಜಾ ಕಾರ್ಯಸೂಚಿ

ಬಿಬಿಎಂಪಿಯ ನೂತನ ಮೇಯರ್‌ಗೆ ಹೇಳಿ ನಿಮ್ಮ ಅಹವಾಲು

Published:
Updated:

ಬೆಂಗಳೂರು: ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿರುವ ನಗರವನ್ನು ಅವುಗಳಿಂದ ಬಿಡಿಸುವ ಬಗೆ ಹೇಗೆ? ಅದಕ್ಕಾಗಿ ಆದ್ಯತೆಯ ಕೆಲಸಗಳು ಏನಾಗಬೇಕು? ನಿಮ್ಮ ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ನೂತನ ಮೇಯರ್‌ ಗಂಗಾಂಬಿಕೆ ಅವರು ಕಾರ್ಯಸೂಚಿ ಸಿದ್ಧಪಡಿಸುವ ಕಾರ್ಯದಲ್ಲಿ ಭಾಗಿಯಾಗಿ.

ನಿಮ್ಮ ಸಲಹೆಗಳನ್ನು (ಹೆಸರು, ಭಾವಚಿತ್ರ ಸಹಿತ) ಕಳುಹಿಸಬೇಕಾದ ವಾಟ್ಸ್‌ ಆ್ಯಪ್‌ ಸಂಖ್ಯೆ: 95133 22930

 **

ಕಸ ವಿಲೇವಾರಿ ಮಾಡಿ

ನಗರದ ಹಲವೆಡೆ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರಿಂದ ಕಾಯಿಲೆಗಳು ಹರಡುತ್ತಿವೆ. ಇಂದಿನ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಪಾಲಿಕೆಯ ಆಡಳಿತಾಧಿಕಾರಿ ಆಗಿದ್ದಾಗ, ರೂಪಿಸಿದ್ದ ತ್ಯಾಜ್ಯ ವಿಲೇವಾರಿಯ ಮಾರ್ಗಸೂಚಿಯನ್ನು ಪಾಲಿಸಬೇಕು. ಕಸದ ಸಮಸ್ಯೆಯ ಕುರಿತು ಹೈಕೋರ್ಟ್ ಚಾಟಿ ಬೀಸುವ ಮುನ್ನ ಕ್ರಮಕ್ಕೆ ಮುಂದಾಗುವುದು ಸೂಕ್ತ. 
ಕೆ.ಪ್ರಭಾಕರ, ಬ್ಯಾಟರಾಯನಪುರ

*

ಮರಬಿದ್ದ ಜಾಗದಲ್ಲಿ ಸಸಿ ನೆಡಿ

ನಗರದಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ಹೆಚ್ಚಿದೆ. ಹೊಸ ಮೇಯರ್‌ ಅವರು ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರೆವುಗೊಳಿಸಬೇಕು. ಹೊಗೆಬಿಡುವ ಹಳೆಯ ವಾಹನಗಳನ್ನು ನಿಷೇಧಿಸಬೇಕು. ಮಳೆ–ಗಾಳಿಗೆ ಮರಗಳು ಉರುಳಿ ಬಿದ್ದ ಜಾಗದಲ್ಲಿ ಹೊಸ ಸಸಿಗಳನ್ನು ಕಡ್ಡಾಯವಾಗಿ ನೆಟ್ಟು ಪೋಷಿಸಬೇಕು. ಬೆಂಗಳೂರಿನ ಪರಿಸರದ ಆರೋಗ್ಯ ಹದಗೆಡದಂತೆ ಕ್ರಮ ವಹಿಸಬೇಕು. 
ಜ.ಬೋ.ಮಂಜುನಾಥ, ವಿಜಯನಗರ
**
ಭ್ರಷ್ಟಾಚಾರ ತಡೆಗಟ್ಟಿ

ಪಾಲಿಕೆಯ ಎಲ್ಲ ಕಚೇರಿಗಳಲ್ಲಿನ ಭ್ರಷ್ಟಾಚಾರ ತಡೆಗಟ್ಟಿ. ನಮ್ಮ ನಿಯತ್ತಿನ ದುಡಿಮೆಯ ತೆರಿಗೆ ಹಣವನ್ನು ಸದುಪಯೋಗ ಮಾಡಿ. ಪಾಲಿಕೆ ಸದಸ್ಯರು ತೆರಿಗೆ ಹಣದಲ್ಲಿ ದುಬಾರಿ ಸೌಲಭ್ಯಗಳನ್ನು ಪಡೆಯಬಾರದು. ಆಗ ಪಾಲಿಕೆಯ ಖಜಾನೆ ಶ್ರೀಮಂತವಾಗುತ್ತದೆ.

–ಸುರೇಶ ಕನ್ನಡಿಗ, ಜೀವನ್‌ ಬಿಮಾನಗರ

*

ಬೀದಿನಾಯಿಗಳನ್ನು ನಿಯಂತ್ರಿಸಿ

ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚುತ್ತಿದೆ. ನಾಯಿಗಳಿಗಾಗಿ ಪಾಲಿಕೆ ಪುನರ್ವಸತಿ ಕೇಂದ್ರ ತೆರೆಯಬೇಕು. ಅವುಗಳನ್ನು ಅಲ್ಲಿ ಪಾಲನೆ ಮಾಡಬೇಕು. ಮದುವೆ ಮನೆ ಮತ್ತು ಇತರೆ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಆ ಕೇಂದ್ರಕ್ಕೆ ಸಾಗಿಸುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಬೇಕಾದರೆ, ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆಯಲಿ

–ಎಸ್‌.ಗೋವಿಂದರಾಜುಲು ಪದ್ಮಸಾಲಿ, ರಾಜಾಜಿನಗರ

*

ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

ರಾಜಕಾಲುವೆಗಳು ಒತ್ತುವರಿಯಾಗಿವೆ. ನಗರ ಯೋಜನಾಬದ್ಧವಾಗಿ ವಿಸ್ತರಣೆಗೊಳ್ಳುತ್ತಿಲ್ಲ. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಇವು ಭವಿಷ್ಯದಲ್ಲಿ ಭಾರಿ ಅವಾಂತರಗಳನ್ನು ಸೃಷ್ಟಿಸಲಿವೆ. ಅನಧಿಕೃತವಾದ ಕಟ್ಟಡಗಳನ್ನು ‘ಅಕ್ರಮ–ಸಕ್ರಮ’ ಕಾಯ್ದೆಯಡಿ ಸಕ್ರಮ ಮಾಡುವುದು ಸರಿಯಲ್ಲ.

–ನಾರಾಯಣಮೂರ್ತಿ, ರಾಚೇನಹಳ್ಳಿ
*

ಬೀದಿನಾಯಿಗಳಿಂದ ಭಯವಾಗುತ್ತಿದೆ

ಬಹುತೇಕ ಪ್ರದೇಶಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ನಾವು ಹೊರಗೆ ಹೋಗಲು, ಮಕ್ಕಳನ್ನು ಆಟಕ್ಕಾಗಿ ಹೊರಗೆ ಕಳುಹಿಸಲು ಭಯವಾಗುತ್ತಿದೆ. ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಆದಷ್ಟು ಬೇಗ ಜಾರಿ ಮಾಡಿ

–ಶ್ವೇತಾ, ಉಲ್ಲಾಳ

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !