ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೇದಾರ್ ಹನಿಟ್ರ್ಯಾಪ್: ಮಹಿಳೆ ಸೇರಿ 10 ಮಂದಿ ಬಂಧನ

* ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ * ₹ 2 ಲಕ್ಷಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪಿಗಳು
Last Updated 5 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯವೊಂದರ ಜಮೇದಾರ್‌ರೊಬ್ಬರನ್ನು ಹನಿಟ್ರ್ಯಾ‍ಪ್ ಜಾಲಕ್ಕೆ ಸಿಲುಕಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ ಮಾಡಿದ್ದ ಆರೋಪದಡಿ ಇಬ್ಬರು ಮಹಿಳೆಯರು ಸೇರಿದಂತೆ 10 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಗೊಲ್ಲರಹಟ್ಟಿ ‍ಪೈಪ್‌ಲೈನ್ ರಸ್ತೆಯ ಎಂ. ಅನುರಾಧಾ (25), ದೊಡ್ಡಬಿದರಕಲ್ಲು ಶಿವಗಂಗಾ ಲೇಔಟ್‌ನ ಸಿದ್ದೇಶ್ (26), ಕಾಮಾಕ್ಷಿಪಾಳ್ಯ ರಂಗನಾಥಪುರದ ಗುಣ (23), ಇಂದಿರಾನಗರ ನೆಲಗದರನಹಳ್ಳಿಯ ಚೇತನ್ (19), ಗಂಗೋನಹಳ್ಳಿ ಮುಖ್ಯರಸ್ತೆಯ ಎಂ. ರವಿಕುಮಾರ್ (25), ಕಾಮಾಕ್ಷಿಪಾಳ್ಯ ಶ್ರೀರಾಮನಗರ ಪ್ರಶಾಂತ್‌ಕುಮಾರ್ (19), ಎಂ. ಕಾರ್ತಿಕ್‌ಕುಮಾರ್ (22), ಎಸ್‌. ಉಮಾಶಂಕರ್ (24), ಸೂರ್ಯರಾಜ್ ಅರಸ್ (20) ಹಾಗೂ ಮಲ್ಲತ್ತಹಳ್ಳಿ ಕೆಂಗುಂಟೆ ವೃತ್ತದ ವಿ. ವಿದ್ಯಾ ಅಲಿಯಾಸ್ ಕಾವ್ಯ (35) ಬಂಧಿತರು. ಇವರಿಂದ ₹ 1,500 ನಗದು ಹಾಗೂ ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಯಶವಂತಪುರ ನಿವಾಸಿಯಾಗಿರುವ 55 ವರ್ಷದ ದೂರುದಾರ, ನ್ಯಾಯಾಲಯದಲ್ಲಿ ಜಮೇದಾರ್ ಕೆಲಸ ಮಾಡುತ್ತಿದ್ದಾರೆ. ಪ್ರಕರಣವೊಂದರ ವಿಚಾರಣೆಗೆಂದು ಎರಡು ವರ್ಷಗಳ ಹಿಂದೆ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿ ಅನುರಾಧಾ, ದೂರುದಾರರಿಗೆ ಪರಿಚಯವಾಗಿದ್ದರು. ಕಷ್ಟವಿರುವುದಾಗಿ ಹೇಳಿದ್ದ ಆರೋಪಿ, ₹ 10,000 ಸಾಲ ಪಡೆದಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಹಾಗೂ ದೂರುದಾರರ ನಡುವೆ ಹೆಚ್ಚು ಒಡನಾಟ ಬೆಳೆದಿತ್ತು. ಇತ್ತೀಚೆಗೆ ಪುನಃ ಹಣ ಕೇಳಿದ್ದ ಅನುರಾಧಾ, ದೂರುದಾರರನ್ನು ತಮ್ಮ ವಿಳಾಸಕ್ಕೆ ಕರೆಸಿಕೊಂಡಿದ್ದರು. ಇದೇ ಸಂದರ್ಭದಲ್ಲೇ ಸ್ಥಳಕ್ಕೆ ಬಂದಿದ್ದ ಇತರೆ ಆರೋಪಿಗಳು, ದೂರುದಾರರನ್ನು ಅಕ್ರಮ ಬಂಧನದಲ್ಲಿರಿಸಿ ಬೆದರಿಸಿದ್ದರು. ‘ನೀನು ಅತ್ಯಾಚಾರ ಮಾಡಲು ಬಂದಿದ್ದೀಯ. ಈ ಸಂಗತಿಯನ್ನು ನಿನ್ನ ಮನೆಯವರಿಗೆ ಹೇಳುತ್ತೇವೆ. ಮಾಧ್ಯಮದವರಿಗೂ ತಿಳಿಸಿ, ಮಾನ ಹರಾಜು ಹಾಕುತ್ತೇವೆ. ಈ ರೀತಿ ಮಾಡಬಾರದೆಂದರೆ, ₹ 2 ಲಕ್ಷ ಕೊಡು’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು.’

‘ಹಣವಿಲ್ಲವೆಂದು ದೂರುದಾರ ಹೇಳಿದ್ದರಿಂದ ಅವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ₹ 5 ಸಾವಿರ ಕಿತ್ತುಕೊಂಡು ಬಿಟ್ಟು ಕಳುಹಿಸಿದ್ದರು. ಬಳಿಕ ದೂರುದಾರ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ವ್ಯವಸ್ಥಿತ ಸಂಚು: ‘ಬಂಧಿತ ಆರೋಪಿ ಸಿದ್ದೇಶ್ ಅಪರಾಧ ಹಿನ್ನೆಲೆಯುಳ್ಳವ. ಈತನ ವಿರುದ್ಧ ಬಾಗಲಗುಂಟೆ, ಮಾದನಾಯಕನಹಳ್ಳಿ ಹಾಗೂ ತುಮಕೂರಿನ ಕ್ಯಾತ್ಸಂದ್ರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಅನುರಾಧಾ, ಸಿದ್ದೇಶ್ ಹಾಗೂ ಇತರರು ವ್ಯವಸ್ಥಿತ ಸಂಚು ರೂಪಿಸಿ ಜಮೇದಾರ್ ಅವರನ್ನು ಹನಿಟ್ರ್ಯಾಪ್ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT