ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರನಗರ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್?

ತಾಂತ್ರಿಕ ವರದಿ ಪಡೆಯಲು ಸಚಿವ ಸಂಪುಟ ನಿರ್ದೇಶನ
Last Updated 29 ಜನವರಿ 2022, 20:50 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಯಾರಿಗೆ ವಹಿಸಬೇಕು ಎಂಬ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ತಾಂತ್ರಿಕ ವರದಿ ಪಡೆದು ಕೆಟಿಪಿಪಿ ಕಾಯ್ದೆಯನ್ನು ಅನುಸರಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಸಚಿವ ಸಂಪುಟ ನಿರ್ದೇಶನ ನೀಡಿದೆ.

ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಿರುವ ಸಚಿವ ಸಂಪುಟ, ಪರಿಷ್ಕೃತ ಅಂದಾಜು ಮೊತ್ತ ₹150.17 ಕೋಟಿಗೆ ಒಪ್ಪಿಗೆ ನೀಡಿದೆ.

ಟೆಂಡರ್‌ ಕರೆಯದೇ ಅದೇ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದರೆ ತಪ್ಪು ಸಂದೇಶ ಹೋಗುತ್ತದೆ. ಟೆಂಡರ್‌ ಕರೆದೇ ಕಾಮಗಾರಿ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಸಭೆಯಲ್ಲಿ ಪ್ರತಿಪಾದಿಸಿದರು. ಇದಕ್ಕೆ ಕಂದಾಯ ಸಚಿವ ಆರ್.ಅಶೋಕ ಸೇರಿದಂತೆ ಬೆಂಗಳೂರಿನ ಕೆಲವು ಸಚಿವರು ಧ್ವನಿಗೂಡಿಸಿದರು. ಹೀಗಾಗಿ, ತಾಂತ್ರಿಕ ವರದಿ ಪಡೆದೇ ಮುಂದುವರಿಯಲು ತೀರ್ಮಾನಿಸಲಾಯಿತು ಎಂದು ನಗರದ ಸಚಿವರೊಬ್ಬರು ’ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

ಟೆಂಡರ್‌ ಕರೆದೇ ಈ ಕಾಮಗಾರಿ ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಕೋಶವು ಈ ಹಿಂದೆಯೇ ವರದಿ ಸಲ್ಲಿ
ಸಿತ್ತು. ಸಾಮಾನ್ಯವಾಗಿ ತಾಂತ್ರಿಕ ವರದಿಯನ್ನು ತಾಂತ್ರಿಕ ಕೋಶದಲ್ಲೇ ಪಡೆಯಲಾಗುತ್ತದೆ. ತಾಂತ್ರಿಕ ಕೋಶ ಮತ್ತೆ ನಿಲುವು ಬದಲಿಸುವ ಸಾಧ್ಯತೆ ಕಡಿಮೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಹೆಚ್ಚುವರಿ ಕಾಮಗಾರಿಗಳ ನೆಪದಲ್ಲಿ ಮೂಲ ಗುತ್ತಿಗೆ ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚು ಮೊತ್ತದ ಕಾಮಗಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ (ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ) ವಹಿಸಲು ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್‌ ಅಡಿ ವಿನಾಯಿತಿ ನೀಡಬೇಕು ಹಾಗೂ ರಾಜ್ಯ ಸರ್ಕಾರವೇ ಅನುದಾನ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. 4 ಜಿ ಸೆಕ್ಷನ್‌ ಅಡಿಯಲ್ಲಿ ವಿನಾಯಿತಿ ನೀಡಲು ಹಣಕಾಸು ಇಲಾಖೆ ಒಪ್ಪಿರಲಿಲ್ಲ.

ಬಿಬಿಎಂಪಿ ಅನುದಾನ ಬಳಕೆ?: ಹಣಕಾಸು ಇಲಾಖೆಯು, ‘ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಬಿಎಂಪಿಯು ಸ್ವಂತ ಸಂಪನ್ಮೂಲದಿಂದ ಭರಿಸಬೇಕು ಅಥವಾ ಇತ್ತೀಚೆಗೆ ಅನುಮೋದನೆಗೊಂಡಿರುವ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಸೇರಿಸಲು ಕ್ರಮ ವಹಿಸಬೇಕು’ ಎಂದು ಸೂಚಿಸಿತ್ತು.

ನಗರಾಭಿವೃದ್ಧಿ ಇಲಾಖೆ ಕಳುಹಿಸಿರುವ ಪ್ರಸ್ತಾವನೆಯಲ್ಲಿರುವ ಡಿ (11) ಅಂಶಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬಿಬಿಎಂಪಿ ಅನುದಾನದಿಂದಲೇ ಹೆಚ್ಚುವರಿ ಕಾಮಗಾರಿ ನಡೆಸಬೇಕು ಎಂಬ ಅಂಶ ಪ್ರಸ್ತಾವನೆಯಲ್ಲಿದೆ. ಹೀಗಾಗಿ, ಹೆಚ್ಚುವರಿ ಕಾಮಗಾರಿಗೆ ಬಿಬಿಎಂಪಿಯೇ ಹಣ ಹೊಂದಿಸಬೇಕಾಗುತ್ತದೆ. ಪಾಲಿಕೆಯು ಗುತ್ತಿಗೆದಾರರಿಗೆ ₹2 ಸಾವಿರ ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬಿಬಿಎಂಪಿ ಮೇಲೆ ಮತ್ತೊಂದು ಹೊರೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪಶ್ಚಿಮ ಕಾರ್ಡ್‌ ರಸ್ತೆಗೆ ರಾಜಾಜಿನಗರದಲ್ಲಿ – ಮಂಜುನಾಥನಗರ ಮುಖ್ಯರಸ್ತೆ ಕೂಡುವಲ್ಲಿ ದ್ವಿಪಥ ಸಂಚಾರದ ಮೇಲ್ಸೇತುವೆ, ಶಿವನಗರದ 8ನೇ ಮತ್ತು 1ನೇ ಮುಖ್ಯ ರಸ್ತೆಗಳು ಕೂಡುವಲ್ಲಿ ದ್ವಿಮುಖ ಸಂಚಾರದ ಇಂಟಿಗ್ರೇಟೆಡ್‌ ಅಂಡರ್‌ ಪಾಸ್‌ ಮತ್ತು ಬಸವೇಶ್ವರ ನಗರದ ಮುಖ್ಯರಸ್ತೆ ಕೂಡುವಲ್ಲಿ ಏಕಮುಖ ಸಂಚಾರದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಪ್ಯಾಕೇಜ್‌ನ ಗುತ್ತಿಗೆಯನ್ನು ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ನೀಡಲಾಗಿದೆ. ಒಟ್ಟು ₹ 89.86 ಕೋಟಿ ವೆಚ್ಚದಈ ಪ್ಯಾಕೇಜ್‌ಗೆ 2015ರ ಫೆ.11ರಂದು ಅನುಮೋದನೆ ನೀಡಲಾಗಿತ್ತು.

ಮಂಜುನಾಥನಗರದ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ 2018ರ ಆ. 27ರಂದು ಲೋಕಾರ್ಪಣೆಗೊಂಡಿದೆ. ಶಿವನಗರ 8ನೇ ಮತ್ತು 1ನೇ ಮುಖ್ಯ ರಸ್ತೆ ಕೂಡುವಲ್ಲಿ ಇಂಟಿಗ್ರೇಟೆಡ್‌ ಅಂಡರ್‌ಪಾಸ್‌ ಬದಲಿಗೆ ಮೇಲ್ಸೇತುವೆಯನ್ನೇ ನಿರ್ಮಿಸಲಾಗಿದ್ದು, 2021ರ ಅ. 4ರಂದು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಬಸವೇಶ್ವರನಗರ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ ಗಡುವು ಮುಗಿದು ನಾಲ್ಕು ವರ್ಷಗಳಾದರೂ ಪೂರ್ಣಗೊಂಡಿಲ್ಲ.

ಶಿವನಗರ ಮುಖ್ಯರಸ್ತೆಗಳು ಕೂಡುವಲ್ಲಿನ ಮೇಲ್ಸೇತುವೆಯ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ ವಸತಿ ಸಚಿವ ವಿ.ಸೋಮಣ್ಣ ಹಾಗೂ ರಾಜಾಜಿನಗರ ಶಾಸಕ ಎಸ್‌. ಸುರೇಶ್‌ ಕುಮಾರ್‌, ಬಸವೇಶ್ವರನಗರದ ಮುಖ್ಯರಸ್ತೆ ಕೂಡುವಲ್ಲಿಯೂ ದ್ವಿಮುಖ ಸಂಚಾರದ ಮೇಲ್ಸೇತುವೆ ನಿರ್ಮಿಸುವಂತೆ ಕೋರಿಕೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಮುಖ್ಯಮಂತ್ರಿಯವರು, ಬಿಬಿಎಂಪಿ ಅಧಿಕಾರಿಗಳಿಗೆ ಮೌಖಿಕ ಆದೇಶವನ್ನೂ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT