ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ನಾಗೇಶ್ ವಿರುದ್ಧ ದೋಷಾರೋಪ ಪತ್ರ

Last Updated 14 ಜೂನ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮಕ್ಕಳ ಭವಿಷ್ಯವನ್ನು ಅತಂತ್ರಗೊಳಿಸಿದ್ದಾರೆ ಎಂದು ಆರೋಪಿಸಿರುವ ‘ಬಹುತ್ವ ಕರ್ನಾಟಕ’ ಸಂಘಟನೆಯು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಜನರ ದೋಷಾರೋಪ ಪಟ್ಟಿ ಬಿಡುಗಡೆಗೊಳಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿದೆ.

‘ಅವೈಜ್ಞಾನಿಕ ಜಾತಿವಾದಿ ಪಠ್ಯ ಪುಸ್ತಕ ಪರಿಷ್ಕರಣೆ, ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 29 ಉಲ್ಲಂಘನೆ, ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಕಾಯ್ದೆಯನ್ನು ಪಾಲಿಸದೇ ಪಠ್ಯವನ್ನು ಪರಿಷ್ಕರಣೆ ಮಾಡಿರುವುದು ಖಂಡನೀಯ’ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಸುದ್ದಿಗೋಷ್ಠಿಯಲ್ಲಿ ಆಕ್ರೋಶವ್ಯಕ್ತಪಡಿಸಿದರು.

‘ಪಠ್ಯಕ್ರಮ ಚೌಕಟ್ಟು ಅಡಿಯಲ್ಲಿ ಭಾರತವು ಹಲವಾರು ಪ್ರಾದೇಶಿಕ ಮತ್ತು ಸ್ಥಳೀಯ ಸಂಸ್ಕೃತಿಗಳಿಂದ ಬೆಸೆಯಲಾದ ಬಹು ಸಂಸ್ಕೃತಿ ಸಮಾಜವಾಗಿದೆ. ಶಿಕ್ಷಣ ವ್ಯವಸ್ಥೆಯು ಸಾಂಸ್ಕೃತಿಕ ಬಹುತ್ವಕ್ಕೆ ತಕ್ಕನಾಗಿರಬೇಕು ಎಂದು ಆ ಚೌಕಟ್ಟು ಸ್ಪಷ್ಟವಾಗಿ ಹೇಳಿದೆ’ ಎಂದರು.

‘ಪಿ.ಲಂಕೇಶ್, ಸಾ.ರಾ. ಅಬೂಬಕರ್ ಅವರ ಪಠ್ಯಗಳನ್ನು ಕೈಬಿಟ್ಟಿರುವುದು ಸರಿಯಲ್ಲ. ಡಾ.ಬಿ.ಆರ್. ಅಂಬೇಡ್ಕರ್‌ ಮತ್ತು ಬಸವಣ್ಣ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ತಿರುಚುವ ಮೂಲಕ ಪಠ್ಯ ಪರಿಷ್ಕರಣೆ ಪ್ರಕ್ರಿಯೆ ಎನ್‌ಸಿಎಫ್ ಮತ್ತು ಆರ್‌ಟಿಇ ಕಾಯ್ದೆಗಳ ಉಲ್ಲಂಘನೆಯಾಗಿದೆ. ಯಾವುದೇ ಆದೇಶವಿಲ್ಲದೇ ಪಠ್ಯ ಪರಿಷ್ಕರಣೆ ಮಾಡಿರುವುದು ‘ಮನು ಸಂಸ್ಕೃತಿ ಜಾರಿಯ ಮನ್ಸೂಚನೆ’ ಮತ್ತು ಸಂವಿಧಾನಕ್ಕೆ ಎಸಗಿದ ಅಪಚಾರ’ ಎಂದು ಯೋಗಾನಂದ ಆರೋಪಿಸಿದರು.

ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಹಿಂಪಡೆದುಕೊಂಡು ಬರಗೂರು ರಾಮಚಂದ್ರಪ್ಪ ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಬೇಕು. ಕೂಡಲೇ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಶಾಸಕ ಸ್ಥಾನದಿಂದ ಅಮಾನ್ಯಗೊಳಿಸಬೇಕು ಎಂದು ಆಗ್ರಹಿಸಿದರು.

ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯ ಸದಸ್ಯೆ ಡಾ.ಪ್ರಜ್ವಲ್‌ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT