ಬೆಂಗಳೂರು: ರಸ್ತೆ ಬದಿಯಲ್ಲೇ ಸುರಿದಿರುವ ಕಸ. ಮೂಗು ಮುಚ್ಚಿಕೊಂಡೇ ಸಾಗಬೇಕಾದ ಸ್ಥಿತಿ. ಇದನ್ನು ದಾಟಿ ಹೋದರೆ ಪಾದಚಾರಿ ಮಾರ್ಗ, ರಸ್ತೆಯಲ್ಲೇ ತರಕಾರಿ ಅಂಗಡಿಗಳು. ಸಾಲದು ಎಂಬಂತೆ ಅಡ್ಡಾದಿಡ್ಡಿ ಅಡ್ಡಾಡುವ ಬೀಡಾಡಿ ದನಗಳು.
ಥಣಿಸಂದ್ರ ಮುಖ್ಯರಸ್ತೆಯಲ್ಲಿನ ಅಧ್ವಾನ ಸ್ಥಿತಿ ಇದು. ಇದೇ ರಸ್ತೆಯಲ್ಲೇ ಇರುವ ಕಾಲೇಜುಗಳ ವಿದ್ಯಾರ್ಥಿಗಳು ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದಾರೆ. ನಾಗವಾರದವರೆಗೂ ಇದೇ ರೀತಿಯ ಹಲವು ಸಮಸ್ಯೆಗಳಿದ್ದು, ಬಿಬಿಎಂಪಿಯಾಗಲಿ, ಸಂಚಾರ ವಿಭಾಗದ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಕಸ ವಿಲೇವಾರಿಯನ್ನು ಮಾಡದೇ ಇರುವುದರಿಂದ ಸಂಪಿಗೆಹಳ್ಳಿ ಎಸಿಪಿ ಕಚೇರಿ, ಸಂಪಿಗೆಹಳ್ಳಿ ಪೊಲೀಸ್ ಠಾಣೆ, ಇಂದಿರಾ ಕ್ಯಾಂಟೀನ್, ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ, ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಗಳ ಸಮೀಪ, ಥಣಿಸಂದ್ರ ರೈಲ್ವೆ ಸೇತುವೆ, ಅಶ್ವತ್ಥನಗರ ಬಸ್ ನಿಲ್ದಾಣ, ಸಾರಾಯಿಪಾಳ್ಯ ಬಸ್ ನಿಲ್ದಾಣ, ಪೆಟ್ರೋಲ್ ಬಂಕ್, ಮಾಲ್‌ಗಳ ಮುಂಭಾಗ ಹೀಗೆ ಎಲ್ಲ ಕಡೆ ಕಸ ಎಸೆಯಲಾಗುತ್ತಿದೆ. ಮಳೆ ನೀರಿಗೆ ತ್ಯಾಜ್ಯ ಕೊಳೆತು ನಾರುತ್ತಿದೆ. ಇನ್ನು ಕೆಲವು ಕಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ವಾಯು ಮಾಲಿನ್ಯ ಉಂಟು ಮಾಡಲಾಗುತ್ತಿದೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಇರುವ ಪರ್ಯಾಯ ರಸ್ತೆ ಇದಾಗಿದ್ದು, ಕೆಲವು ಕಡೆಗಳಲ್ಲಿ ಪಾದಚಾರಿ ಮಾರ್ಗ ಸುಸ್ಥಿತಿಯಲ್ಲಿಲ್ಲ. ಪಾದಚಾರಿ ಮಾರ್ಗ ಚೆನ್ನಾಗಿರುವ ಕಡೆಗಳಲ್ಲಿ ಹಣ್ಣು, ತರಕಾರಿ ಇನ್ನಿತರ ಅಂಗಡಿಗಳು ಆಕ್ರಮಿಸಿಕೊಂಡಿವೆ. ಜನರು ಅಪಾಯ ಲೆಕ್ಕಿಸದೇ ರಸ್ತೆಗೆ ಇಳಿದು ಸಂಚರಿಸು ವಂತಾಗಿದೆ. ಇಷ್ಟು ಸಾಲದು ಎಂಬಂತೆ ಕೆಲವು ತಳ್ಳುಗಾಡಿಗಳನ್ನು ಪಾದಚಾರಿ ಮಾರ್ಗಕ್ಕಿಂತಲೂ ಮುಂದೆ ತಂದು ರಸ್ತೆಯಲ್ಲೇ ವ್ಯಾಪಾರ ಮಾಡಲಾಗುತ್ತಿದೆ.
‘ಕೆಲವು ಕಡೆಗಳಲ್ಲಿ ರಾತ್ರಿ ಹೊತ್ತಿನಲ್ಲಿ ಸದ್ದಿಲ್ಲದೇ ಬಂದು ಕಸ ಬಿಸಾಡಿ ಹೋಗುತ್ತಾರೆ. ಸಾರಾಯಿಪಾಳ್ಯದಲ್ಲಿ ಕಾನೂನಿನ ಯಾವುದೇ ಹೆದರಿಕೆ ಇಲ್ಲದೇ ಹಗಲು ಹೊತ್ತಿನಲ್ಲಿಯೇ ಬೈಕ್, ಕಾರುಗಳಲ್ಲಿ ಬಂದು ವಾಹನ ನಿಲ್ಲಿಸದೆಯೇ ಕಸ ಎಸೆದು ಹೋಗುತ್ತಾರೆ. ಇದರಿಂದ ಕೆಲವು ಬಾರಿ ರಸ್ತೆ ಮೇಲೆಯೇ ಕಸ ಬೀಳುತ್ತದೆ. ಆಹಾರ ಸಿಗಬಹುದು ಎಂದು ದನಗಳು ರಸ್ತೆಯಲ್ಲೇ ನಿಂತುಕೊಂಡು ಕಸ ಕೆದಕಿ ತಿನ್ನುತ್ತಿರುತ್ತ ವೆ. ಹಲವು ಬಾರಿ ಈ ಕಾರಣಕ್ಕೆ ಸಂಚಾರ ದಟ್ಟಣೆ ಆಗುತ್ತಿದೆ’ ಎಂದು ಸ್ಥಳೀಯ ವರ್ತಕರು ದೂರಿದರು.
‘ರಸ್ತೆಯಲ್ಲಿನ ಕಸ ಗುಡಿಸುವ ಯಂತ್ರ ಇದೆ. ಐದಾರು ತಿಂಗಳುಗಳಿಂದ ಇಲ್ಲಿಗೆ ಬಂದಿರಲಿಲ್ಲ. ದೂರು ನೀಡಿದ ಮೇಲೆ ಅಪರೂಪಕ್ಕೊಮ್ಮೆ ರಸ್ತೆ ಸ್ವಚ್ಛಗೊಳಿಸಲಾಗುತ್ತಿದೆ. ತ್ಯಾಜ್ಯ ಒಯ್ಯುವವರು ಎಲ್ಲಿ ಗುಜರಿ ವಸ್ತುಗಳು ಹೆಚ್ಚಿರುತ್ತವೆಯೋ ಅಲ್ಲಿ ಹೋಗುತ್ತಾರೆ. ಅವರಿಗೆ ಮಾರಾಟಕ್ಕೆ ಏನೂ ಸಿಗದ ಬರೀ ಹಸಿಕಸ ಇದ್ದಲ್ಲಿಗೆ ಬರುವುದೇ ಇಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
‘ನಾಗರಿಕರ ಜವಾಬ್ದಾರಿ’
‘ರಸ್ತೆಯಲ್ಲಿ ಕಸ ಎಸೆಯುವವರನ್ನು ಪತ್ತೆಮಾಡಲು ನಾವು ಪ್ರತಿ 100 ಮೀಟರ್‌ಗೆ ಸಿಬ್ಬಂದಿ ನಿಯೋಜಿಸಲು ಸಾಧ್ಯವಿಲ್ಲ. ನಾಗರಿಕರ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ನಗರವು ತೊಂದರೆ ಗೊಳಗಾಗುತ್ತದೆ. ಕಸ ಬಿಸಾಡದೇ ಇರುವುದು ಮತ್ತು ಬೇರೆಯವರು ಬಿಸಾಡದಂತೆ ತಡೆಯುವುದು ನಾಗರಿಕರ ಜವಾಬ್ದಾರಿ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಪ್ರತಿಕ್ರಿಯಿಸಿದರು.
ಜನರು ಏನಂತಾರೆ?
ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಿ
ಥಣಿಸಂದ್ರ ರಸ್ತೆಯಲ್ಲಿ ಯಾವುದೇ ನೀತಿ ನಿಯಮಗಳು ಪಾಲನೆಯಾಗುತ್ತಿಲ್ಲ. ಪಾದಚಾರಿ ಮಾರ್ಗಗಳು ಜನರಿಗೆ ನಡೆದಾಡಲು ಇವೆ ಎಂಬುದೇ ಮರೆತು ಹೋಗುವಂತೆ ಅಂಗಡಿಗಳು ಆಕ್ರಮಿಸಿಕೊಂಡಿವೆ. ತೀರ ಒತ್ತಡ ಹಾಕಿದಾಗ ಒಮ್ಮೆ ಬಂದು ಕಾಟಾಚಾರಕ್ಕೆ ಕೆಲವೇ ಅಂಗಡಿಗಳನ್ನು ತೆರವು ಮಾಡಿ ಹೋಗುತ್ತಾರೆ. ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದ ಮತ್ತೆ ಅಂಗಡಿಗಳು ತಲೆ ಎತ್ತುತ್ತವೆ. ಕರ್ನಾಟಕ ಕಾಲೇಜು, ರೇವಾ ಕಾಲೇಜುಗಳ ಸಮೀಪ ರಸ್ತೆ, ಪಾದಚಾರಿ ಮಾರ್ಗಗಳಲ್ಲಿಯೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು, ಸಂಚಾರ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಬೇಕು.
– ಆರ್. ನಾಗೇಶ್ ಕೋಗಿಲು, ಸ್ಥಳೀಯ ಬಿಎಸ್‌ಪಿ ಕಾರ್ಯಕರ್ತ
ಕಸ ವಿಲೇವಾರಿ ಮಾಡಿ
ರಸ್ತೆ ಬದಿಯಲ್ಲೇ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿದ್ದಾರೆ. ಬಿಬಿಎಂಪಿ ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡಬೇಕು. ಜೊತೆಗೆ ರಸ್ತೆ ಬದಿಯಲ್ಲಿ ಕಸ ಬಿಸಾಡುವವರಿಗೆ ದಂಡ ವಿಧಿಸಬೇಕು. ಅಲ್ಲದೇ ಥಣಿಸಂದ್ರ, ಸಾರಾಯಿಪಾಳ್ಯ ಸುತ್ತಮುತ್ತಲ ಪ್ರದೇಶಕ್ಕೆ ಇನ್ನೂ ಕಾವೇರಿ ನೀರು ಬಂದಿಲ್ಲ. ಇದರಿಂದ ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ನಿರಂತರ ಕಾಡುತ್ತಿದೆ. ಅದನ್ನು ಕೂಡ ಸರಿಪಡಿಸಲು ಕ್ರಮ ಕೈಗೊಳ್ಳಬೇಕು.
– ಅಕ್ಷಯ್ ಗೌಡ, ಸ್ಥಳೀಯ ವ್ಯಾಪಾರಿ
ಥಣಿಸಂದ್ರ ರಸ್ತೆ ದುರವಸ್ಥೆ ವಿಶೇಷ ವರದಿಗಾಗಿ. ಪ್ರಜಾವಾಣಿ ಚಿತ್ರ / ಕಿಶೋರ್ ಕುಮಾರ್ ಬೋಳಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.