ಬೆಂಗಳೂರು: ರಾಜ್ಯ ಸರ್ಕಾರ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುರಂಗ ಮಾರ್ಗಕ್ಕೆ ₹50 ಸಾವಿರ ಕೋಟಿ ವೆಚ್ಚವಾಗುವ ಅಂದಾಜಿದ್ದು, ನಗರದ ಪ್ರಮುಖ ಐದು ಆರ್ಟಿರಿಯಲ್ ರಸ್ತೆಗಳನ್ನು 20 ನಿಮಿಷದಲ್ಲಿ ಸಂಪರ್ಕಿಸಬಹುದಾಗಿದೆ.
ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆಗಳನ್ನು ಸಂಪರ್ಕಿಸುವ ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆಯ 30 ಕಿ.ಮೀ ಉದ್ದದ ಸುರಂಗ ಮಾರ್ಗದ ಯೋಜನೆಯ ರೂಪುರೇಷೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಿದ್ಧಪಡಿಸುತ್ತಿದೆ.
ಈ ಐದು ಆರ್ಟಿರಿಯಲ್ ರಸ್ತೆಗಳು ಹೊರ ವರ್ತುಲ ರಸ್ತೆ ಮೂಲಕ ಸಂಪರ್ಕಿಸಲಿದ್ದು, ನಗರದ ಪ್ರಮುಖ ಸಂಚಾರದಟ್ಟಣೆಯನ್ನು ನಿವಾರಿಸಲಿದೆ.
‘ಬೆಂಗಳೂರಿನಲ್ಲಿ ಸಂಚಾರದಟ್ಟಣೆಯನ್ನು ನಿಯಂತ್ರಿಸಲು ಸುರಂಗ ಮಾರ್ಗ ನಿರ್ಮಿಸುವುದೇ ಏಕೈಕ ಪರಿಹಾರವಾಗಿದೆ. ಮೇಲ್ಸೇತುವೆ, ಮೆಟ್ರೊ, ಧಾರ್ಮಿಕ ಕಟ್ಟಡಗಳು ರಸ್ತೆಗಳಲ್ಲಿದ್ದು, ಅವುಗಳ ನಡುವೆ ಹೊಸ ನಿರ್ಮಾಣ ಸಾಧ್ಯವಾಗುವುದಿಲ್ಲ’ ಎಂದು ಎಚ್‌ಎಚ್‌ಎಐನ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ತಿಳಿಸಿದರು.
‘ಯೋಜನೆಗೆ ಸುಮಾರು ₹50 ಸಾವಿರ ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ಇದಕ್ಕೆ ಹಣ ಭರಿಸಬೇಕಿದೆ. ಇದು ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಬಿಒಟಿ) ಮಾದರಿಯ ಯೋಜನೆಯಾಗಿದ್ದು, ಯೋಜನೆ ಅಸಾಧ್ಯವಾದುದೇನೂ ಅಲ್ಲ’ ಎಂದರು.
ಇತ್ತೀಚಿನ ದಿನಗಳಲ್ಲಿ ಎನ್‌ಎಚ್‌ಎಐ ಬೃಹತ್ ಮೊತ್ತದ ಮೂಲಸೌಕರ್ಯ ಯೋಜನೆಗಳಲ್ಲಿ ಹೈಬ್ರೀಡ್ ಅನ್ಯುಟಿ ಮಾಡೆಲ್ (ಎಚ್‌ಎಎಂ) ಅಳವಡಿಸಿಕೊಂಡಿದೆ. ಇದರಂತೆ, ಎನ್‌ಎಚ್‌ಎಐ ಶೇ 40ರಷ್ಟು ವೆಚ್ಚವನ್ನು ಭರಿಸಲಿದ್ದು, ಉಳಿದಿದ್ದನ್ನು ಗುತ್ತಿಗೆದಾರರು ಬಿಒಟಿ ಮಾದರಿಯಲ್ಲಿ ವೆಚ್ಚ ಮಾಡಲಿದ್ದಾರೆ. ಆದರೆ, ಈ ಸುರಂಗ ಮಾರ್ಗ ಎಚ್ಎಎಂ ಮಾದರಿಯಲ್ಲಿ ನಿರ್ಮಾಣವಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ಇಲ್ಲ.
ದೆಹಲಿಯಲ್ಲಿ 1.3 ಕಿ.ಮೀ ಉದ್ದ ಸುರಂಗ ಮಾರ್ಗವಿದ್ದು, ಇದು ಇಂಡಿಯಾ ಗೇಟ್, ಪುರಾನಾ ಖಿಲ್ಲಾ ರಸ್ತೆ, ಪ್ರಗತಿ ಮೈದಾನವನ್ನು ವರ್ತುಲ ರಸ್ತೆ ಮೂಲಕ ಸಂಪರ್ಕಿಸುತ್ತದೆ.
ಮುಂಬಯಿಯಲ್ಲಿ 7.75 ಕಿ.ಮೀ ಕೋಸ್ಟಲ್ ರಸ್ತೆ ನಿರ್ಮಾಣದ ಹಂತದಲ್ಲಿದ್ದು, ಮರೀನ್ ಡ್ರೈವ್, ಕಂದಿವಾಲಿ ಲಿಂಕ್ ರಸ್ತೆಯನ್ನು ಗಿರ್‌ಗಾವ್ ಚೌಪಟ್ಟಿ, ಮಲಬಾರ್ ಹಿಲ್ಸ್, ಪ್ರಿಯದರ್ಶಿನಿ ಪಾರ್ಕ್ ಸುರಂಗ ಮಾರ್ಗದೊಂದಿಗೆ ಸಂಪರ್ಕಿಸುತ್ತದೆ.
ಮುಂಬಯಿ–ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ವಿಶ್ವದ ಅಗಲವಾದ ಎರಡು ಸುರಂಗ ಮಾರ್ಗಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.