ಬೆಂಗಳೂರು: ತುಳಿತಕ್ಕೆ ಒಳಗಾಗಿರುವ ಗಾಣಿಗ ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಸಚಿವ ರಾಮಲಿಂಗಾರೆಡ್ಡಿ ಅವರ ಜತೆ ಚರ್ಚಿಸಿ, ಸಮುದಾಯದ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ ಮಂಗಳವಾರ ಆಯೋಜಿಸಿದ್ದ ಯಜಮಾನ್ ಜನೋಪಕಾರಿ ದೊಡ್ಡಣ್ಣ ಶೆಟ್ಟರ 103ನೇ ವಾರ್ಷಿಕ ಆರಾಧನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
‘ಗಾಣಿಗ ಅಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಶೇಖರ್ ಹಾಗೂ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ ಅಧ್ಯಕ್ಷ ಎಸ್.ಸುರೇಶ್ ಅವರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ. ಇಬ್ಬರನ್ನು ಕರೆಸಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.
‘ದೀಪ ಉರಿಯುವಾಗ ಎಣ್ಣೆ, ಬತ್ತಿ ಏನೂ ಕಾಣುವುದಿಲ್ಲ. ಕಾಣುವುದು ಬೆಳಕು ಮಾತ್ರ. ಗಾಣಿಗ ಸಮುದಾಯ ತಯಾರಿಸುವ ಎಣ್ಣೆ, ದೀಪ ಹಾಗೂ ಮನುಷ್ಯನನ್ನು ತಂಪಾಗಿಸಲು ತಲೆಗೂ ಬೇಕು. ಸಮುದಾಯ ಶ್ರಮದ ಮೂಲಕ ಬದುಕು ಕಟ್ಟಿಕೊಂಡಿದೆ’ ಎಂದು ಹೇಳಿದರು.
‘ಯಾವುದೇ ಮನುಷ್ಯ ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಹರಕೆ ಹೊತ್ತಿರುವುದಿಲ್ಲ. ಹುಟ್ಟಿದ ನಂತರ ಜಾತ್ಯತೀತವಾಗಿ ಬದುಕಬೇಕು. ವೃತ್ತಿ, ಸಮುದಾಯ ಉಳಿಸಿಕೊಳ್ಳಲು ಸಂಘಟಿತರಾಗಿ. ದೊಡ್ಡಣ್ಣ ಶೆಟ್ಟರು ಬ್ರಿಟಿಷರ ಆಡಳಿತ ಅವಧಿಯಲ್ಲಿಯೇ ನಗರದ ಹೃದಯ ಭಾಗದಲ್ಲಿ ಧರ್ಮಾತ್ಮ ಸಂಸ್ಥೆ ಕಟ್ಟಿ ಸಮಾಜದ ಎಲ್ಲ ಸಮುದಾಯಗಳ ನೆರವಿಗೆ ನಿಂತ ಮಹಾನುಭಾವ. ದೇವರು ಯಾರಿಗೆ ವರ, ಶಾಪ ಏನನ್ನೂ ಕೊಡುವುದಿಲ್ಲ. ಸಿಗುವ ಅವಕಾಶದಲ್ಲಿ ಉಪಕಾರ ಮಾಡಿ’ ಎಂದು ತಿಳಿಸಿದರು.
ಇದೇ ವೇಳೆ ಸಮುದಾಯದ ನಾಯಕ ವಿ.ಆರ್.ಸುದರ್ಶನ್ ಅವರು ಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆಗೆ ₹ 10 ಕೋಟಿ ಅನುದಾನ ನೀಡಬೇಕು ಎಂದು ಉಪಮುಖ್ಯಮಂತ್ರಿಗೆ ಮನವಿ ಮಾಡಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಉದಯ ಸಿ. ಗರುಡಾಚಾರ್, ಮುಖಂಡರಾದ ನಿರಂಜನ್ ಗಾಣಿಗ, ಜಿ.ಎ.ಉಮಾದೇವಿ, ಶ್ರೀಧರ್ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ದೊಡ್ಡಣ್ಣ ಶೆಟ್ಟರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.