ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ | ಎಎಸ್‌ಐ ಸಮಯಪ್ರಜ್ಞೆ: ಚಾಲಕ, ಪ್ರಯಾಣಿಕರು ಪಾರು

Published : 20 ಸೆಪ್ಟೆಂಬರ್ 2024, 16:00 IST
Last Updated : 20 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಬೆಂಗಳೂರು: ಶಾಂತಿನಗರದ ಬಳಿ ಬಿಎಂಟಿಸಿ ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದನ್ನು ಗಮನಿಸಿದ ಸಂಚಾರ ವಿಭಾಗದ ಎಎಸ್‌ಐ, ಬಸ್‌ನ ಒಳಕ್ಕೆ ಹೋಗಿ ಹ್ಯಾಂಡ್ ಬ್ರೇಕ್ ಹಾಕಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ಎಎಸ್‌ಐ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಹಲಸೂರು ಗೇಟ್ ಸಂಚಾರ ಠಾಣೆಯ ಎಎಸ್‌ಐ ರಘುಕುಮಾರ್ ಅನಾಹುತ ತಪ್ಪಿಸಿದವರು.

ಶಾಂತಿನಗರದ ಜೋಡಿರಸ್ತೆಯಲ್ಲಿ ಚಾಲಕ ವೀರೇಶ್ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ವೀರೇಶ್ ಚಾಲಕನ ಸೀಟಿನಲ್ಲೇ ಒಂದು ಕಡೆ ವಾಲಿದ್ದರು. ಹೀಗಾಗಿ, ಬಸ್ ನಿಧಾನವಾಗಿ ಚಲಿಸುತ್ತಿತ್ತು. ಆ ವೇಳೆ ಶಾಂತಿನಗರ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಘುಕುಮಾರ್ ಅವರು ಅದನ್ನು ಗಮನಿಸಿದ್ದರು. ತಕ್ಷಣವೇ ಅವರು ಡ್ರೈವರ್‌ ಸೀಟು ಭಾಗದಲ್ಲಿರುವ ಬಾಗಿಲು ತೆರೆದು ಸಿನಿಮೀಯ ಶೈಲಿಯಲ್ಲಿ ಒಳಕ್ಕೆ ಹೋಗಿ ಚಾಲಕನ ಸೀಟಿನ ಪಕ್ಕದಲ್ಲಿದ್ದ ಹ್ಯಾಂಡ್ ಬ್ರೇಕ್‌ ಹಾಕಿ ಬಸ್ ಅನ್ನು ನಿಲ್ಲಿಸಿದ್ದರು. ಬಸ್‌ನ ನಿರ್ವಾಹಕನ ಸಹಾಯದಿಂದ ವೀರೇಶ್‌ ಅವರನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಅವರು ಅಪಾಯದಿಂದ ಪಾರಾಗಿದ್ದಾರೆ. 

ಬಸ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ರಘುಕುಮಾರ್ ಅವರು ಹ್ಯಾಂಡ್ ಬ್ರೇಕ್ ಹಾಕದಿದ್ದರೆ ಬಸ್ ಇತರೆ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಂಭವವಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಂಚಾರ ಪೊಲೀಸ್‌ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಮತ್ತು ಚಾಲಕ ವೀರೇಶ್ ಅವರ ಪ್ರಾಣ ಉಳಿದಿದೆ ಎಂದು ಬಸ್‌ನಲ್ಲಿದ್ದವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT