ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಮಾರುಕಟ್ಟೆ ಸ್ಥಗಿತ, ಎಲೆಕೋಸು ಬೆಳೆ ನಾಶಪಡಿಸಿದ ರೈತ

Last Updated 3 ಏಪ್ರಿಲ್ 2020, 22:10 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಸಂಚಾರ ಮತ್ತು ರೈತರ ಮಾರುಕಟ್ಟೆ ಸ್ಥಗಿತಗೊಂಡಿದ್ದ ಪರಿಣಾಮ ರೈತರೊಬ್ಬರು ತಮ್ಮ ತೋಟದಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಯನ್ನು ಮಾರಾಟಮಾಡಲು ಸಾಧ್ಯವಾಗದೆ ನಾಶಪಡಿಸಿದ್ದಾರೆ.

ರಾಜಾನುಕುಂಟೆ ಸಮೀಪದ ಅದ್ದೆ ವಿಶ್ವನಾಥಪುರ ಗ್ರಾಮದ ರೈತ ವಿ.ಆರ್.ನಾರಾಯಣರೆಡ್ಡಿ ಅವರು, ಅರಕೆರೆ ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಸುಮಾರು ₹ 70 ಸಾವಿರ ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಇನ್ನೇನು ಬೆಳೆಯನ್ನು ಕಟಾವು ಮಾಡುವ ವೇಳೆಗೆ ಸಂಚಾರ ಮತ್ತು ಮಾರುಕಟ್ಟೆ ಸ್ಥಗಿತಗೊಂಡು, ಕೂಲಿಯಾಳುಗಳ ಸಮಸ್ಯೆಯೂ ಎದುರಾಯಿತು. ಇದರಿಂದ ಮಾರಾಟಕ್ಕೆ ಅವಕಾಶವಾಗದೆ ಟ್ರ್ಯಾಕ್ಟರ್‌ನಿಂದ ಬೆಳೆಯನ್ನು ನಾಶಪಡಿಸಿದ್ದಾರೆ.

‘ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯಿಲ್ಲ. ಇದರ ಜೊತೆಗೆ ಇತ್ತೀಚೆಗೆ ಲಾಕ್‌ ಡೌನ್‌ನಿಂದ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕಳೆದ 15 ದಿನಗಳಿಂದೀಚೆಗೆ 7 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೀಬೆಹಣ್ಣಿನ ಬೆಳೆಯೂ ಹಾಳಾಗಿ, 3 ಟನ್‌ನಷ್ಟು ಸೀಬೆಹಣ್ಣಿನ ಫಸಲು ಹಣ್ಣಾಗಿ ನೆಲಕ್ಕೆ ಉದುರಿ ಸುಮಾರು ₹90 ಸಾವಿರ ನಷ್ಟವಾಯಿತು. ಈಗ ಎಲೆಕೋಸು ಬೆಳೆಯೂ ಮಾರಾಟವಾಗದೆ ಒಂದೂವರೆ ಲಕ್ಷ ನಷ್ಟವಾಗಿದೆ’ ಎಂದು ನಾರಾಯಣರೆಡ್ಡಿ ದೂರಿದರು.

ಟೊಮೆಟೊ, ದ್ರಾಕ್ಷಿ ಮತ್ತಿತರ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಬೀದಿಗೆ ಸುರಿದಮೇಲೆ ಎಚ್ಚೆತ್ತುಕೊಂಡ ಸರ್ಕಾರ, ಈಗ ರೈತರು ಬೆಳೆದಿರುವ ತರಕಾರಿಗಳನ್ನು ಮಾರುಕಟ್ಟೆಗೆ ತರಲು ಸಂಚಾರಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಘೋಷಿಸಿದೆ. ಸರ್ಕಾರ ಈ ರೀತಿ ಮನಬಂದಂತೆ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದರಿಂದ ರೈತರು ಗೊಂದಲದಲ್ಲಿ ಸಿಲುಕಿದ್ದಾರೆ ಎಂದರು.

ಇಲ್ಲಿಯವರೆಗೆ ಆಗಿರುವ ನಷ್ಟದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಇದನ್ನು ಭರಿಸುವವರು ಯಾರು? ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ತುರ್ತಾಗಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT