ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಿ ಜಾಗಕ್ಕೆ ಶೋಧ

ಕಬ್ಬನ್‌ಪಾರ್ಕ್‌ನಲ್ಲಿ ಕಟ್ಟಡ: ವಿವಾದದಿಂದ ಹೈಕೋರ್ಟ್‌ ದೂರ
Last Updated 5 ಡಿಸೆಂಬರ್ 2019, 1:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಬ್ಬನ್‌ ಪಾರ್ಕ್‌ನಲ್ಲಿ ಏಳು ಅಂತಸ್ತಿನ ಹೈಕೋರ್ಟ್‌ನ ವಿಸ್ತರಿತ ಕಟ್ಟಡವನ್ನು ನಿರ್ಮಿಸುವ ಪ್ರಸ್ತಾಪಕ್ಕೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಬದಲಿ ಸ್ಥಳಕ್ಕಾಗಿ ಶೋಧ ನಡೆಸಲಾರಂಭಿದೆ.

‘ಈ ವಿಷಯದಲ್ಲಿ ಹೈಕೋರ್ಟ್‌ನ ಹೆಸರನ್ನು ಅನಗತ್ಯವಾಗಿ ಎಳೆದುತರಲಾಗಿದೆ. ನ್ಯಾಯಾಲಯದ ಅಧಿಕಾರಿಗಳಿಗೆ ಇದರಿಂದ ಬಹಳ ಬೇಸರವಾಗಿದೆ. ಹೀಗಾಗಿ ರಿಜಿಸ್ಟ್ರಾರ್‌ ಜನರಲ್‌ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಬದಲಿ ಜಾಗ ಒದಗಿಸಲು ಕೇಳಿಕೊಂಡಿದ್ದಾರೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಚುನಾವಣಾ ಆಯುಕ್ತರ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಹೈಕೋರ್ಟ್‌ನ ವಿಸ್ತರಿತ ಕಟ್ಟಡ ನಿರ್ಮಿಸುವ ಕುರಿತಂತೆ 2014ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ರಿಜಿಸ್ಟ್ರಾರ್‌ ಜನರಲ್‌ ಅವರು ಅರ್ಜಿ ಸಲ್ಲಿಸುವುದಕ್ಕೆ ಅಕ್ಟೋಬರ್‌ನಲ್ಲಿಹೈಕೋರ್ಟ್‌ ಅವಕಾಶ ಕಲ್ಪಿಸಿತ್ತು.

‘ಈ ಕಟ್ಟಡ ನಿರ್ಮಿಸುವುದಕ್ಕಾಗಿ ಲೋಕೋಪಯೋಗಿ ಇಲಾಖೆ ರೂಪಿಸಿದ್ದ ಮೂಲ ಯೋಜನೆಯಲ್ಲಿ 17 ಮರಗಳನ್ನು ಕಡಿಯಬೇಕಿತ್ತು. ಹೈಕೋರ್ಟ್‌ ಮಧ್ಯಪ್ರವೇಶದಿಂದಾಗಿ ಈ ಮರಗಳಿಗೆ ಕೊಡಲಿ ಬೀಳುವುದು ತಪ್ಪಿತ್ತು. ಆದರೆ, ಈ ಕಟ್ಟಡ ನಿರ್ಮಿಸಲು ಹೈಕೋರ್ಟ್‌ ಪಾರಂಪರಿಕ ಕಟ್ಟಡವಿರುವ ಈ ಸ್ಥಳವನ್ನು ಗುರುತಿಸಿದೆ ಎಂಬ ತಪ್ಪು ಅಭಿಪ್ರಾಯ ಸಾರ್ವಜನಿಕರ ಮನದಲ್ಲಿ ಮೂಡುವಂತಾಗಿತ್ತು’ ಎಂದು ಮೂಲಗಳು ಹೇಳಿವೆ.

ಈ ವಿವಾದವನ್ನು ದೂರ ಸರಿಸುವ ನಿಟ್ಟಿನಲ್ಲಿ ರಿಜಿಸ್ಟ್ರಾರ್‌ ಜನರಲ್‌ ಅವರು ಹೈಕೋರ್ಟ್‌ನ ವಿಸ್ತರಿತ ಕಟ್ಟಡ ನಿರ್ಮಾಣಕ್ಕಾಗಿ 2.7 ಎಕರೆ ಜಮೀನು ಒದಗಿಸಿಕೊಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ‘ಉದ್ದೇಶಿತ ನಿವೇಶನವು ಹೈಕೋರ್ಟ್‌ಗೆ ಸಮೀಪದಲ್ಲೇ ಇರಬೇಕು, ಅದು ಯಾವುದೇ ವಲಯ ನಿಯಮಗಳನ್ನು ಉಲ್ಲಂಘಿಸುವಂತಿರಬಾರದು’ ಎಂಬುದಷ್ಟೇ ರಿಜಿಸ್ಟ್ರಾರ್‌ ಜನರಲ್‌ ಅವರ ಷರತ್ತಾಗಿದೆ ಎಂದೂ ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರೂ ದೃಢಪಡಿಸಿದ್ದಾರೆ. ‘ನಮಗೊಂದು ಪತ್ರ ಬಂದಿದೆ. ಇಂಧನ ಭವನದಲ್ಲೂ ಹೆಚ್ಚುವರಿ ಸ್ಥಳಾವಕಾಶ ಕೊಡಲು ಹೈಕೋರ್ಟ್‌ ಕೋರಿಕೆ ಸಲ್ಲಿಸಿದೆ, ಕಡತ ಪರಿಶೀಲನೆಯಲ್ಲಿದೆ’ ಎಂದು ಅವರು ಹೇಳಿದರು.

‘ಈ ಹಿಂದೆಯೂ ಸರ್ಕಾರ ಒಂದು ನಿವೇಶನ ಗುರುತಿಸಿತ್ತು. ಆದರೆ, ಆ ನಿವೇಶನ ದೂರವಾಯಿತು ಎಂಬ ಕಾರಣ ನೀಡಿನ್ಯಾಯಾಲಯದ ಅಧಿಕಾರಿಗಳು ಅದನ್ನು ತಿರಸ್ಕರಿಸಿದ್ದರು. ಈಗ ಸಲ್ಲಿಸಿದ ಪತ್ರದಂತೆ ಹೈಕೋರ್ಟ್‌ ಸಮೀಪದಲ್ಲೇ ಇಷ್ಟು ವಿಶಾಲ ನಿವೇಶನ ಸಿಗುವುದು ಕಷ್ಟ. ಜಂಟಿ ಸಭೆಯಲ್ಲಿ ಇದರ ಬಗ್ಗೆ ಸೌಹಾರ್ದಯುತಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಕಬ್ಬನ್‌ ಪಾರ್ಕ್‌ನಲ್ಲಿ ಉದ್ದೇಶಿತ ಏಳು ಅಂತಸ್ತಿನ ಕಟ್ಟಡ ನಿರ್ಮಾಣ ವಿರುದ್ಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಗುರುವಾರ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT