ಸೋಮವಾರ, ಆಗಸ್ಟ್ 8, 2022
24 °C

ಡಿ.ಜೆ.ಹಳ್ಳಿ ಹಿಂಸಾಚಾರ: 115 ಆರೋಪಿಗಳಿಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿ.ಜೆ.ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ 115 ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ತನಿಖೆ ಪೂರ್ಣಗೊಳಿಸಲು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್‌ಐಎ) ಹೆಚ್ಚುವರಿ ಕಾಲಾವಕಾಶ ನೀಡಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಬದಿಗಿರಿಸಿದೆ.

ಅರ್ಜಿದಾರ ಮುಜಮಲ್ ಪಾಷಾ ಮತ್ತು ಇತರರನ್ನು 2020ರ ಆಗಸ್ಟ್ 12ರಂದು ಬಂಧಿಸಲಾಗಿತ್ತು. ಕಾನೂನಿನ ಪ್ರಕಾರ 90 ದಿನಗಳಲ್ಲಿ ಅಂದರೆ ನವೆಂಬರ್‌ 9ರೊಳಗೆ ತನಿಖೆ ಪೂರ್ಣಗೊಳ್ಳಬೇಕಿತ್ತು. ಅಷ್ಟರಲ್ಲಿ ನವೆಂಬರ್ 3ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಎನ್‌ಐಎ, ಹೆಚ್ಚುವರಿ ಸಮಯಾವಕಾಶ ಕೋರಿತು. ಮನವಿ ಅಂಗೀಕರಿಸಿದ ವಿಶೇಷ ನ್ಯಾಯಾಲಯ, ಅವಧಿ ವಿಸ್ತರಿಸಿ ಆದೇಶಿಸಿತ್ತು.

2021ರ ಜನವರಿಯಲ್ಲಿ ಆರೋಪಿಗಳು ಸಲ್ಲಿಸಿದ ಡಿಫಾಲ್ಟ್‌ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

‘ಸಮಯ ವಿಸ್ತರಿಸುವ ಬಗ್ಗೆ ಆರೋಪಿಗಳ ಮಾಹಿತಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಈ ಪ್ರಕ್ರಿಯೆಯನ್ನು ಈ ಪ್ರಕರಣದಲ್ಲಿ ಅನುಸರಿಸಿಲ್ಲ’ ಎಂದು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

‘ತಲಾ ₹2 ಲಕ್ಷದ ವೈಯಕ್ತಿಕ ಬಾಂಡ್ ಜತೆಗೆ ಇಬ್ಬರ ಶ್ಯೂರಿಟಿ ನೀಡಬೇಕು. ವಿಚಾರಣಾ ನ್ಯಾಯಾಲಯ ಮತ್ತು ತನಿಖಾಧಿಕಾರಿ ಕರೆದಾಗ ಹಾಜರಾಗಬೇಕು’ ಎಂಬ ಷರತ್ತುಗಳನ್ನು ವಿಧಿಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು