ಸೋಮವಾರ, ಅಕ್ಟೋಬರ್ 18, 2021
27 °C

‘ಗಾಂಧಿಗೆ ‘ರಾಷ್ಟ್ರಪಿತ’ ಸಂಬೋಧನೆ ಸೂಕ್ತವಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಹಾತ್ಮ ಗಾಂಧೀಜಿಯವರಿಗೆ ‘ರಾಷ್ಟ್ರಪಿತ’ ಎಂದು ಸಂಬೋಧಿಸುತ್ತಿರುವುದು ಸರಿಯಲ್ಲ. ಅದು ತಪ್ಪಾದ ಬಳಕೆ. ಏಕೆಂದರೆ ಗಾಂಧೀಜಿ ಜನಿಸುವ ಮುನ್ನವೇ ಈ ದೇಶ ಇತ್ತು’ ಎಂದು ರಾಜ್ಯಸಭಾ ಸದಸ್ಯ ಸ್ವಪನ್‌ ದಾಸ್‌ ಗುಪ್ತಾ ತಿಳಿಸಿದರು.

ಮಂಥನ ಬೆಂಗಳೂರು ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್‌ ಕೇಂದ್ರ ಕಾರ್ಯಕಾರಿಣಿ ಸದಸ್ಯ ರಾಮ್‌ ಮಾಧವ್‌ ಅವರ ‘ದಿ ಹಿಂದುತ್ವ ಪ್ಯಾರಡೈಮ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. 

‘ಗಾಂಧಿ ಅವರನ್ನು ‘ಸ್ವಾತಂತ್ರ್ಯ ಭಾರತದ ರಾಷ್ಟ್ರಪಿತ’, ‘ರಾಷ್ಟ್ರೀಯ ಚಳವಳಿಯ ನೇತಾರ’ ಎಂದು ಕರೆಯುವುದು ಸೂಕ್ತ. ಅದು ನಿಜ ಕೂಡ. ಅವರು 20ನೇ ಶತಮಾನದ ಶ್ರೇಷ್ಠ ಭಾರತೀಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದರು. 

‘ಭಾರತವನ್ನು ಜನ್ಮ ಹಾಗೂ ಕರ್ಮಭೂಮಿ ಎಂದು ಭಾವಿಸುವವರೇ ನಿಜವಾದ ಹಿಂದೂಗಳು ಎಂದು ವೀರ ಸಾವರ್ಕರ್‌ ಪ್ರತಿಪಾದಿಸುತ್ತಿದ್ದರು. ಯುರೋಪಿಯನ್‌ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ರಾಷ್ಟ್ರೀಯತೆಯ ಮಾನದಂಡ ತುಂಬಾ ಭಿನ್ನ’ ಎಂದು ತಿಳಿಸಿದರು. 

ಲೇಖಕ ರಾಮ್‌ ಮಾಧವ್‌, ‘ನಾವೆಲ್ಲಾ ಸಿದ್ಧಾಂತದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಭಾರತವು ಕಲ್ಪನೆಗಳ ನಾಡು. ಜಗತ್ತಿಗೆ ಅಹಿಂಸೆ ಮತ್ತು ಸತ್ಯಾಗ್ರಹದಂತಹ ಪರಿಕಲ್ಪನೆಗಳನ್ನು ಕೊಡುಗೆಯಾಗಿ ನೀಡಿದ ದೇಶ ನಮ್ಮದು. ಸಿದ್ಧಾಂತವೊಂದು ಜನರಿಗೆ ಅರ್ಥವಾಗಿ ಅದು ಕಾರ್ಯಗತಗೊಳ್ಳಲು ವರ್ಷಗಳೇ ಬೇಕಾಗುತ್ತದೆ. ಕಾರ್ಲ್‌ ಮಾರ್ಕ್ಸ್‌ ಹಾಗೂ ಫ್ರೆಡೆರಿಕ್‌ ಏಂಗೆಲ್ಸ್‌ ಅವರು ‘ದಾಸ್‌ ಕ್ಯಾಪಿಟಲ್‌’ ಕೃತಿ ರಚಿಸಿ 50 ವರ್ಷಗಳ ಬಳಿಕ ಸೋವಿಯತ್‌ ರಷ್ಯಾದಲ್ಲಿ ಕಮ್ಯುನಿಸ್ಟ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ದೀನದಯಾಳ್‌ ಉಪಾಧ್ಯಾಯ ಅವರು ಭಾರತೀಯತೆಯನ್ನು ಪ್ರತಿಪಾದಿಸಿದರು. ಅವರ ಪರಿಕಲ್ಪನೆಗಳು ಜಾರಿಗೊಳ್ಳಲು ದಶಕಗಳೇ ಬೇಕಾಯಿತು. ದೇಶದ ಈಗಿನ ಆಡಳಿತದಲ್ಲಿ ಅವರ ಚಿಂತನೆಗಳು ಎದ್ದುಕಾಣುತ್ತಿವೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು