ಸೋಮವಾರ, ಫೆಬ್ರವರಿ 24, 2020
19 °C
ರಾಜಗೋಪಾಲನಗರದ ಹೆಗ್ಗನಹಳ್ಳಿಯಲ್ಲಿ ಘಟನೆ l ಹಲ್ಲೆಗೊಳಗಾದ ಪತಿ, ಮಗಳ ಸ್ಥಿತಿ ಗಂಭೀರ

ಮನೆ ಮಾಲೀಕನ ಪತ್ನಿ ಕೊಂದು ಬಾಡಿಗೆದಾರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಮನೆ ಬಾಡಿಗೆದಾರನೊಬ್ಬ ಮಾಲೀಕನ ಪತ್ನಿಯನ್ನು ಕೊಂದು, ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಗೋಪಾಲ ನಗರದ ಹೆಗ್ಗನಹಳ್ಳಿ ಎಂಟನೇ ಕ್ರಾಸ್‍ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಲಕ್ಷ್ಮೀ (34) ಕೊಲೆಯಾದ ಮಹಿಳೆ. ಖಾಸಗಿ ಕಂಪನಿಯ ಉದ್ಯೋಗಿ, ಚಿತ್ರದುರ್ಗದ ಹೊಸದುರ್ಗದ ರಂಗಧಾಮಯ್ಯ (37) ‌ಆತ್ಮಹತ್ಯೆ ಮಾಡಿಕೊಂಡ ಬಾಡಿಗೆದಾರ.

‘ಆತ್ಮಹತ್ಯೆಗೂ ಮೊದಲು ಮನೆ ಮಾಲೀಕ ಮತ್ತು ಮಗಳ ಮೇಲೆಯೂ ರಂಗಧಾಮಯ್ಯ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಮಾಲೀಕ ಶಿವರಾಜ್ (44) ಮತ್ತು ಮಗಳು ಚೈತ್ರಾ (17) ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಶಿವರಾಜ್– ಲಕ್ಷ್ಮೀ ದಂಪತಿ ಎರಡು ಅಂತಸ್ತಿನ ಕಟ್ಟಡ ಹೊಂದಿದ್ದು, ಅವರ ಮಗ ಹಾಸ್ಟೆಲ್‍ನಲ್ಲಿ ಓದುತ್ತಿದ್ದಾನೆ. ಮಗಳು ಖಾಸಗಿ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದಾಳೆ. ದಂಪತಿ ಕಟ್ಟಡದ ಒಂದನೇ ಮಹಡಿಯಲ್ಲಿ ವಾಸವಾಗಿದ್ದಾರೆ. ಮೇಲಂತಸ್ತಿನ ಎರಡು ಬಾಡಿಗೆ ಮನೆಗಳ ಪೈಕಿ ಒಂದರಲ್ಲಿ ಬಿಹಾರದ ಯುವಕರು ಇದ್ದಾರೆ. ಮತ್ತೊಂದರಲ್ಲಿ ಒಂದೂವರೆ ವರ್ಷದಿಂದ ರಂಗಧಾಮಯ್ಯ ನೆಲೆಸಿದ್ದ’ ಎಂದು ಪೊಲೀಸರು ಹೇಳಿದರು.

ಒಂದೂವರೆ ವರ್ಷದ ಹಿಂದೆ ರಂಗಧಾಮಯ್ಯನ ಪತ್ನಿ ಮೃತಪಟ್ಟಿದ್ದರು. ಅಂದಿನಿಂದ ಶಿವರಾಜ್ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಶಿವರಾಜ್‌– ಲಕ್ಷ್ಮೀ ದಂಪತಿ ಜೊತೆ ಆತ್ಮೀಯತೆ ಹೊಂದಿದ್ದ. ಲಕ್ಷ್ಮೀ ಅವರು ರಂಗ ಧಾಮಯ್ಯನ ಬಟ್ಟೆ ಒಗೆಯುತ್ತಿದ್ದರು. ಊಟ ಕೂಡಾ ಕೊಡುತ್ತಿದ್ದರು. ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಇದು ಗೊತ್ತಾದ ನಂತರ ಪತ್ನಿಯನ್ನು ಶಿವರಾಜ್‌ ಪ್ರಶ್ನಿಸಿ, ಹಲವು ಬಾರಿ ನಿಂದಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಕೃತ್ಯದ ಬಳಿಕ ಕೈಯಲ್ಲಿದ್ದ ಚಾಕು ಹಿಡಿದೇ ತನ್ನ ಕೊಠಡಿಗೆ ತೆರಳಿದ ರಂಗಧಾಮಯ್ಯ ತನ್ನ ಹೊಟ್ಟೆಗೆ ಚುಚ್ಚಿಕೊಂಡಿದ್ದಾನೆ. ನಂತರ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೂ ಪೊಲೀಸರು ತಿಳಿಸಿದರು.

‘ಬೆಳಿಗ್ಗೆ ಸಹೋದ್ಯೋಗಿಯೊಬ್ಬರು ಲಕ್ಷ್ಮೀ ಅವರಿಗೆ ಹಲವು ಬಾರಿ ಕರೆ ಮಾಡಿದ್ದರು. ಆದರೆ, ಪ್ರತಿಕ್ರಿಯಿಸದ ಕಾರಣ 11 ಗಂಟೆ ಸುಮಾರಿಗೆ ಬಂದು ನೋಡಿದಾಗ ಲಕ್ಷ್ಮೀ, ಶಿವರಾಜ್ ಮತ್ತು ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರು ಕೂಗಿಕೊಂಡಿದ್ದಾರೆ. 11.15ರ ಸುಮಾರಿಗೆ ಪೊಲೀಸ್ ಸಹಾಯವಾಣಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಿಂದ ಶಿವರಾಜ್ ಮತ್ತು ಚೈತ್ರಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪಾರ್ಶ್ವವಾಯು ವಾಯುಪೀಡಿತರಾಗಿರುವ ಶಿವರಾಜ್‌, ಎಡಗೈ ಮತ್ತು ಎಡಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಪತ್ನಿ ಮತ್ತು ಮಗಳ ಮೇಲೆ ರಂಗಧಾಮಯ್ಯ ಹಲ್ಲೆ ನಡೆಸುವಾಗ ಅಸಹಾಯಕರಾಗಿದ್ದಾರೆ. ರಂಗಧಾಮಯ್ಯ ತನ್ನ ಮೇಲೆಯೂ ಹಲ್ಲೆ ನಡೆಸಿ ತೆರಳಿದ ಬಳಿಕ, ಪತ್ನಿಯ ಶವದ ಎದುರು ಕುಳಿತು ಗೋಳಾಡಿದ್ದಾರೆ. ಪೊಲೀಸರು ಬಂದಾಗ ಮಾತನಾಡಲು ಕೂಡಾ ಸಾಧ್ಯವಾಗದೆ ಕಣ್ಣೀರು ಹಾಕಿದ್ದಾರೆ.

‘ಶಿವರಾಜ್‌ ಅವರೇ ಪತ್ನಿಯನ್ನು ಕೊಲೆ ಮಾಡಿರಬೇಕು ಎಂದು ಮೊದಲು ಶಂಕೆ ವ್ಯಕ್ತವಾಗಿತ್ತು. ಆದರೆ, ಅವರಿಂದ ಈ ಕೃತ್ಯ ಎಸಗಲು ಸಾಧ್ಯವಿಲ್ಲ ಎಂದು ಗೊತ್ತಾಗಿ, ಸ್ಥಳೀಯರ ಬಳಿ ವಿಚಾರಿಸಿದಾಗ ರಂಗಧಾಮಯ್ಯನ ಬಗ್ಗೆ ಮಾಹಿತಿ ಸಿಕ್ಕಿತು. ಆತನ ಕೊಠಡಿಯಲ್ಲಿ ನೋಡಿದಾಗ ಸಾವಿಗೆ ಶರಣಾಗಿದ್ದ’ ಎಂದು ಪೊಲೀಸರು ಹೇಳಿದರು.

ಚಾಕುವಿನಿಂದ ಇರಿದು ಅಮಾನುಷ ಕೃತ್ಯ

‘ಗಾರ್ಮೆಂಟ್ಸ್‌ನಲ್ಲಿ ಲಕ್ಷ್ಮೀ ಕೆಲಸ ಮಾಡುತ್ತಿದ್ದರು. ಶಿವರಾಜ್ ತಮ್ಮ ಕಟ್ಟಡದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಆರು ಗಂಟೆಗೆ ಲಕ್ಷ್ಮೀ ಹಾಲು ತಂದು ಮನೆಯಲ್ಲಿಟ್ಟಿದ್ದರು. ಏಳು ಗಂಟೆ ಸುಮಾರಿಗೆ ಮನೆಗೆ ಬಂದ ರಂಗಧಾಮಯ್ಯ, ಲಕ್ಷ್ಮೀ ಜೊತೆ ಜಗಳ ಮಾಡಿದ್ದಾನೆ. ಈ ವೇಳೆ, ಎಡ ಕಿವಿಗೆ ಬಲವಾಗಿ ರಂಗಧಾಮಯ್ಯ ಹೊಡೆದ ಪರಿಣಾಮ, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯ ಚೀರಾಟ ಕೇಳಿ ಶಿವರಾಜ್ ಮತ್ತು ಚೈತ್ರಾ ಕೊಠಡಿಯಿಂದ ಹೊರಬಂದಿದ್ದಾರೆ. ಆಗ ಚೈತ್ರಾಳಿಗೂ ರಂಗಧಾಮಯ್ಯ ಚಾಕುವಿನಿಂದ ತಲೆಗೆ ಹೊಡೆದು, ಗೋಡೆಗೆ ಗುದ್ದಿದ್ದಾನೆ. ಆಕೆ ಕುಸಿದುಬಿದ್ದಿದ್ದಾಳೆ. ನಂತರ ಶಿವರಾಜ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಆ ಬಳಿಕ ತನ್ನ ಕೊಠಡಿಗೆ ತೆರಳಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು