ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಕ್ಯೂಆರ್‌ ಕೋಡ್ ಟಿಕೆಟ್‌ ವಿತರಣೆ ವ್ಯವಸ್ಥೆ ಶೀಘ್ರ

ಐದು ತಿಂಗಳಲ್ಲಿ ಹೊಸ ವ್ಯವಸ್ಥೆ ಅಳವಡಿಕೆಗೆ ಚಿಂತನೆ
Last Updated 2 ಏಪ್ರಿಲ್ 2021, 19:35 IST
ಅಕ್ಷರ ಗಾತ್ರ

ಬೆಂಗಳೂರು: ಜನ ಸಂಪರ್ಕವನ್ನು ಆದಷ್ಟು ತಗ್ಗಿಸುವ ನಿಟ್ಟಿನಲ್ಲಿ ಮೆಟ್ರೊ ರೈಲು ಪ್ರಯಾಣಿಕರಿಗೆ ಟೋಕನ್‌ ವಿತರಣೆ ಸ್ಥಗಿತಗೊಳಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈಗ ಪರ್ಯಾಯ ಮಾರ್ಗವೊಂದನ್ನು ಕಂಡುಕೊಂಡಿದೆ.

ಜನಸಂಪರ್ಕವೂ ತಪ್ಪಬೇಕು, ಪ್ರಯಾಣಿಕರಿಗೆ ಹೆಚ್ಚು ತೊಂದರೆಯೂ ಆಗಬಾರದು ಎಂಬ ಉದ್ದೇಶದಿಂದ ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ವಿತರಣೆ ವ್ಯವಸ್ಥೆಯನ್ನು ತರಲು ನಿಗಮ ಮುಂದಾಗಿದೆ.

‘ಮೆಟ್ರೊ ರೈಲು ಪ್ರಯಾಣದಲ್ಲಿ ಸಂಪೂರ್ಣ ನಗದು ರಹಿತ ವ್ಯವಸ್ಥೆ ತರಲು ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಕ್ಯೂಆರ್‌ ಕೋಡ್ ಆಧಾರಿತ ವ್ಯವಸ್ಥೆ ಉತ್ತಮ ಮಾರ್ಗ. ಈ ವ್ಯವಸ್ಥೆ ಅಳವಡಿಸುವ ಉದ್ದೇಶದಿಂದ ಅರ್ಹ ಕಂಪನಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

‘ಟೆಂಡರ್‌ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಐದು ತಿಂಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಅವರು ತಿಳಿಸಿದರು.

ಹೈದರಾಬಾದ್‌ನಲ್ಲಿ ಕೂಡ ಕ್ಯೂಆರ್ ಕೋಡ್ ವ್ಯವಸ್ಥೆ ಇದ್ದು, ಮೊಬೈಲ್‌ನಲ್ಲೇ ಸ್ಕ್ಯಾನ್ ಮಾಡಿ, ಪ್ರಯಾಣಿಕರು ಸಂಚರಿಸುತ್ತಾರೆ. ನಮ್ಮ ಮೆಟ್ರೊದಲ್ಲಿಯೂ ಇಂತಹ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದರು.

ಟೋಕನ್ ವಿತರಣೆ ಸದ್ಯಕ್ಕಿಲ್ಲ:

ನಗರದಲ್ಲಿ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಳ್ಳುತ್ತಿದ್ದು, ‘ನಮ್ಮ ಮೆಟ್ರೊ’ದಲ್ಲಿ ಸದ್ಯಕ್ಕೆ ಟೋಕನ್‌ ವಿತರಣೆ ಮಾಡುವ, ಪೂರ್ಣ ಸಾಮರ್ಥ್ಯದೊಂದಿಗೆ (ಎಲ್ಲ ಸೀಟುಗಳ ಭರ್ತಿ) ಸಂಚಾರ ಆರಂಭಿಸುವ ಸಾಧ್ಯತೆ ಮತ್ತೆ ಕ್ಷೀಣಿಸಿದೆ.

ಒಂದೆರಡು ತಿಂಗಳುಗಳ ಹಿಂದೆ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದಾಗ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ರೈಲಿನಲ್ಲಿ ಕೆಲವು ನಿರ್ಬಂಧ ತೆರವುಗೊಳಿಸಿ, ಸಂಪೂರ್ಣ ಆಸನಗಳ ಭರ್ತಿಯೊಂದಿಗೆ ಕಾರ್ಯಾಚರಣೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಕೇಂದ್ರದ ಆದೇಶ ಬರುವಷ್ಟರಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಿರ್ಬಂಧ ತೆರವು ಸದ್ಯಕ್ಕೆ ಆಗುವುದಿಲ್ಲ ಎಂದು ನಿಗಮದ ಮೂಲಗಳು ಹೇಳಿವೆ.

‘ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲವು ಕಂಪನಿಗಳಲ್ಲಿ ಮತ್ತೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಪ್ರಾರಂಭವಾಗಿದೆ. ನಿರ್ಬಂಧ ತೆರವಿಗೆ ಪ್ರಸ್ತಾವ ಸಲ್ಲಿಸಿದ್ದು, ಮತ್ತೊಮ್ಮೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದೆವು. ಆದರೆ, ಪರಿಸ್ಥಿತಿ ನೋಡಿದರೆ ಈಗಿರುವ ವ್ಯವಸ್ಥೆಯೇ ಮುಂದುವರಿಯುವುದು ಬಹುತೇಕ ನಿಶ್ಚಿತ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT