ಮಗನ ಸ್ನೇಹಿತರ ಬಳಸಿಕೊಂಡು ಕಳ್ಳತನ

7
ವಿಜಯನಗರದ ಈಜುಕೊಳದಲ್ಲಿ ಕಳವು

ಮಗನ ಸ್ನೇಹಿತರ ಬಳಸಿಕೊಂಡು ಕಳ್ಳತನ

Published:
Updated:

ಬೆಂಗಳೂರು: ಮಗನ ಸ್ನೇಹಿತರನ್ನು ಬಳಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿ ಅಬ್ರಹಾರ್‌ (46) ಎಂಬಾತ, ವಿಜಯನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪಾದರಾಯನಪುರದ ಹೊಸಹಳ್ಳಿ ಮುಖ್ಯರಸ್ತೆಯ ನಿವಾಸಿ ಅಬ್ರಹಾರ್, ಕಳ್ಳತನಕ್ಕೆಂದೇ ಗ್ಯಾಂಗ್‌ ಕಟ್ಟಿಕೊಂಡಿದ್ದ. ವಿಜಯನಗರದ ಸಾರ್ವಜನಿಕ ಈಜುಕೊಳಕ್ಕೆ ಹೋಗುತ್ತಿದ್ದವರ ಪರ್ಸ್‌ ಹಾಗೂ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ. ಆತನ ಗ್ಯಾಂಗ್‌ನಲ್ಲಿದ್ದ ಫರ್ವೀಜ್ ಪಾಷ್ ಹಾಗೂ ಇಮ್ತಿಯಾಜ್ ಪಾಷಾನನ್ನು ಬಂಧಿಸಲಾಗಿದೆ. ಕಳ್ಳತನಕ್ಕೆ ಸಹಕರಿಸುತ್ತಿದ್ದ ಆರೋಪದಡಿ ಮೂವರು ಬಾಲಕರನ್ನು ವಶಕ್ಕೆ ಪಡೆದು ಬಾಲ
ಮಂದಿರಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು. 

‘ಅಬ್ರಾರ್‌ಗೆ ಮಗನಿದ್ದಾನೆ. ಆತನನ್ನು ಭೇಟಿಯಾಗಲೆಂದು ಸ್ನೇಹಿತರು ಆಗಾಗ ಮನೆಗೆ ಹೋಗುತ್ತಿದ್ದರು. ಆ ಸ್ನೇಹಿತರಿಗೆ ಹಣದ ಆಮಿಷವೊಡ್ಡುತ್ತಿದ್ದ ಆರೋಪಿ, ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದ. ಈ ಬಗ್ಗೆ ಬಾಲಕರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

‘ಐವರು ಆರೋಪಿಗಳು, ಒಟ್ಟಿಗೆ ಈಜುಕೊಳಕ್ಕೆ ಹೋಗುತ್ತಿದ್ದರು. ಮೂವರು ಹೊರಗಿದ್ದರೆ, ಇನ್ನಿಬ್ಬರು ಒಳಗಿರುತ್ತಿದ್ದರು. ಈಜಲು ಹೋಗುತ್ತಿದ್ದ ಸಾರ್ವಜನಿಕರು, ಬಟ್ಟೆ ಹಾಗೂ ವಸ್ತುಗಳನ್ನು ಒಂದೆಡೆ ಇಟ್ಟು ಕೊಳಕ್ಕೆ ಇಳಿಯುತ್ತಿದ್ದರು. ಅದನ್ನು ಗಮನಿಸುತ್ತಿದ್ದ  ಆರೋಪಿಗಳು, ಸಿಗ್ನಲ್‌ ಕೊಟ್ಟು ಹೊರಗಿದ್ದವರನ್ನು ಒಳಗೆ ಕರೆಸುತ್ತಿದ್ದರು. ಅವರೇ ಮೊಬೈಲ್ ಹಾಗೂ ಪರ್ಸ್‌ ಕದ್ದುಕೊಂಡು ಹೋಗುತ್ತಿದ್ದರು’ ಎಂದು ಹೇಳಿದರು.

‘ವಿಜಯನಗರ ನಿವಾಸಿ ಅರುಣ್‌ ಎಂಬುವರ ಎರಡು ಮೊಬೈಲ್‌ಗಳನ್ನು ಆರೋಪಿಗಳು ಕದ್ದಿದ್ದರು. ಆ ಬಗ್ಗೆ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಈಜುಕೊಳದ ಬಳಿ ಸಿಬ್ಬಂದಿಯನ್ನು ಮಫ್ತಿಯಲ್ಲಿ ನಿಯೋಜಿಸಲಾಗಿತ್ತು. ಕಳ್ಳತನ ಎಸಗಲು ಬಂದಿದ್ದ ಇಬ್ಬರು ಬಾಲಕರು ಸಿಕ್ಕಿಬಿದ್ದಿದ್ದರು. ಅವರು ನೀಡಿದ್ದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ವಿವರಿಸಿದರು.

ಹೊರ ಜಿಲ್ಲೆಗಳಿಗೆ ಮಾರಾಟ: ಆರೋಪಿಗಳು, ಎರಡು ತಿಂಗಳಿನಿಂದ ಕಳ್ಳತನ ಎಸಗುತ್ತಿದ್ದರು. ಜತೆಗೆ, ಸುಲಿಗೆ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಕದ್ದ ಮೊಬೈಲ್‌ಗಳನ್ನು ಹೊರ ಜಿಲ್ಲೆಗಳಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ಹೇಳಿದರು. 

ಆರೋಪಿಗಳಿಂದ ಬೆಲೆಬಾಳುವ 18 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದೇವೆ. ಅವುಗಳನ್ನು ಖರೀದಿಸಿದ್ದ ವ್ಯಕ್ತಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !