ಮಂಗಳವಾರ, ನವೆಂಬರ್ 24, 2020
19 °C
₹ 2.12 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ; ದಂಪತಿ ಸೇರಿ ಮೂವರ ಬಂಧನ

ಆಟೊದಲ್ಲಿ ಸುತ್ತಾಡಿಮನೆ ಗುರುತಿಸಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಹಾಗೂ ಹೊರ ಜಿಲ್ಲೆಗಳ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ ದಂಪತಿ ಸೇರಿ ಮೂವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ ₹2.12 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಬೈರತಿಬಂಡೆಯ ಜೆ. ಬಾಬು ಅಲಿಯಾಸ್ ಮಾರ್ಕೆಟ್ (33), ಆತನ ಪತ್ನಿ ಜಯಂತಿ ಕುಟ್ಟಿಯಮ್ಮ (29) ಹಾಗೂ ಹೆಗಡೆನಗರದ ಮೊಹಮ್ಮದ್ ತೌಫಿಕ್ ಅಲಿಯಾಸ್ ಪೆಟ್ರೋಲ್ (25) ಬಂಧಿತರು.

‘ತಮಿಳುನಾಡಿನ ಬಾಬು ಹಾಗೂ ಜಯಂತಿ, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಬಾಬು ಆಟೊ ಚಲಾಯಿಸುತ್ತಿದ್ದ. ಪತ್ನಿ ಜೊತೆ ಆಟೊದಲ್ಲಿ ಸುತ್ತಾಡುತ್ತಿದ್ದ ಆತ, ಮನೆಗಳನ್ನು ಗುರುತಿಸುತ್ತಿದ್ದ. ನಂತರ ನಕಲಿ ಕೀ ಬಳಸಿ ಮನೆಗಳ ಬಾಗಿಲು ತೆರೆದು ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಅಶೋಕನಗರ, ವಿವೇಕನಗರ ಹಾಗೂ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ದಂಪತಿ ಕೃತ್ಯ ಎಸಗಿದ್ದು ಪತ್ತೆಯಾಗಿದೆ. ಅವರಿಬ್ಬರಿಂದ ₹ 62 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ಜೈಲಿಗೆ ಹೋಗಿ ಬಂದ ಬಳಿಕವೂ ಕಳವು; ‘ಇನ್ನೊಂದು ಪ್ರಕರಣದಲ್ಲಿ ಮೊಹಮ್ಮದ್ ತೌಫಿಕ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ ಆತ, ಪುನಃ ಕೃತ್ಯ ಎಸಗಿದ್ದ. ಬೆಂಗಳೂರು, ನೆಲಮಂಗಲ, ತುಮಕೂರಿನ ಮನೆಗಳಲ್ಲಿ ಕಳವು ಮಾಡಿದ್ದ’ ಎಂದು ಪೊಲೀಸರು ಹೇಳಿದರು. ‘23 ಕಳ್ಳತನ ಪ್ರಕರಣಗಳಲ್ಲಿ ತೌಫಿಕ್ ಭಾಗಿಯಾಗಿರುವುದು ಪತ್ತೆಯಾಗಿದೆ. ಆತನಿಂದ ₹ 1.5 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.