ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಕೊಡದಿದ್ದಕ್ಕೆ 1,980 ಕೆ.ಜಿ ಗೋಡಂಬಿ ಕದ್ದ!

ವೈಯಾಲಿಕಾವಲ್ ಪೊಲೀಸರಿಗೆ ಸೆರೆ ಸಿಕ್ಕ ಡ್ರೈಫ್ರೂಟ್ಸ್‌ ಮಾರಾಟಗಾರ l ₹ 16 ಲಕ್ಷ ಮೌಲ್ಯದ ಮಾಲು ಜಪ್ತಿ
Last Updated 24 ಆಗಸ್ಟ್ 2018, 19:01 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಕೀ ಬಳಸಿ ಪರಿಚಿತರ ಗೋದಾಮಿನಿಂದ 1,980 ಕೆ.ಜಿ ಗೋಡಂಬಿ ಕಳವು ಮಾಡಿದ್ದ ಪ್ರಶಾಂತ್ ತಾನಾಜಿ ಪಾಟೀಲ (25) ಎಂಬಾತ ವೈಯಾಲಿಕಾವಲ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವನಾದ ಪ್ರಶಾಂತ್, ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದು ಅತ್ತಿಗುಪ್ಪೆಯ ಬಸವೇಶ್ವರ ಲೇಔಟ್‌ನಲ್ಲಿ ನೆಲೆಸಿದ್ದ. ಡ್ರೈಫ್ರೂಟ್ ಉದ್ಯಮಿ ರಾಜೇಶ್ ಕಾಮತ್ ಎಂಬುವರಿಂದ ಸಗಟು ದರದಲ್ಲಿ ಒಣ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿ ಖರೀದಿಸಿ ನಗರದ ಅಂಗಡಿಗಳಿಗೆ ಲಾಭಕ್ಕೆ ಮಾರಾಟ ಮಾಡುತ್ತಿದ್ದ.‌ ಇತ್ತೀಚೆಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಆತ, ಆ.21ರ ರಾತ್ರಿ ರಾಜೇಶ್ ಅವರ ಗೋದಾಮಿನಿಂದಲೇ ₹ 16 ಲಕ್ಷ ಮೌಲ್ಯದ ಮಾಲು ಕದ್ದೊಯ್ದಿದ್ದ. ಅದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಕೀ ಕದ್ದು ನಕಲು: ಸುಮಾರು 20 ವರ್ಷಗಳಿಂದ ಈ ವ್ಯವಹಾರ ನಡೆಸುತ್ತಿರುವ ಸುಬ್ರಹ್ಮಣ್ಯನಗರದ ರಾಜೇಶ್, ವೈಯಾಲಿಕಾವಲ್‌ 12ನೇ ಮುಖ್ಯ ರಸ್ತೆಯಲ್ಲಿ ‘ಓಂ ಶ್ರೀ ಟ್ರೇಡರ್ಸ್‌’ ಗೋದಾಮು ಹೊಂದಿದ್ದಾರೆ. ಗೋಡಂಬಿ ಖರೀದಿ ನೆಪದಲ್ಲಿ ಆ.20ರ ಬೆಳಿಗ್ಗೆ ಅಲ್ಲಿಗೆ ತೆರಳಿದ್ದ ಆರೋಪಿ, ‘ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ₹ 5 ಲಕ್ಷ ಸಾಲ ಬೇಕು’ ಎಂದು ರಾಜೇಶ್ ಬಳಿ ಕೇಳಿದ್ದ. ಸದ್ಯ ತಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು ಅವರು ಹೇಳಿದ್ದರು.

ಕೆಲ ದಿನಗಳ ಹಿಂದೆ ತೀರ್ಥಹಳ್ಳಿ, ಮಂಗಳೂರು ಹಾಗೂ ಕಾರ್ಕಳದಿಂದ 3,060 ಕೆ.ಜಿ ಗೋಡಂಬಿ ತರಿಸಿದ್ದ ರಾಜೇಶ್, ಆ ಪೈಕಿ 1,080 ಕೆ.ಜಿಯಷ್ಟು ಮಾಲನ್ನು ಅದೇ ದಿನ ಮಾರಾಟ ಮಾಡಿದ್ದರು. ಈ ವಿಚಾರ ತಿಳಿದ ಆರೋಪಿ, ಹಣವಿದ್ದರೂ ಸಾಲ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ಕುಪಿತಗೊಂಡಿದ್ದ. ಆಗ ಗೋದಾಮಿನಲ್ಲಿ ಉಳಿದಿದ್ದ ಮಾಲನ್ನು ಕಳವು ಮಾಡಲು ನಿರ್ಧರಿಸಿದ್ದ.

ಮರುದಿನ ಬೆಳಿಗ್ಗೆ ಪುನಃ ಅಲ್ಲಿಗೆ ತೆರಳಿದ್ದ ಆರೋಪಿ, ರಾಜೇಶ್‌ಗೆ ಗೊತ್ತಾಗದಂತೆ ಗೋದಾಮಿನ ಕೀ ತೆಗೆದುಕೊಂಡಿದ್ದ. ಎರಡೇ ತಾಸಿನಲ್ಲಿ ನಕಲಿ ಕೀ ಮಾಡಿಸಿಕೊಂಡು, ಅಸಲಿ ಕೀಯನ್ನು ಪುನಃ ಅದೇ ಸ್ಥಳದಲ್ಲಿ ಇಟ್ಟಿದ್ದ. ಮಧ್ಯಾಹ್ನ 3.30ರವರೆಗೆ ವಹಿವಾಟು ನಡೆಸಿ ರಾಜೇಶ್ ಗೋದಾಮಿನ ಬಾಗಿಲು ಬಂದ್‌ ಮಾಡಿಕೊಂಡು ಹೋಗಿದ್ದರು.

ರಾತ್ರಿ 11 ಗಂಟೆ ಸುಮಾರಿಗೆ ತನ್ನ ಸರಕು ಸಾಗಣೆ ವಾಹನ ತೆಗೆದುಕೊಂಡು ಬಂದ ಆರೋಪಿ, ನಕಲಿ ಕೀ ಬಳಸಿ ಗೋದಾಮಿಗೆ ನುಗ್ಗಿದ್ದ. ಗೋಡಂಬಿಯ ಮೂಟೆಗಳನ್ನು ವಾಹನದಲ್ಲಿ ಹಾಕಿಕೊಂಡು ಹೊರಟು ಹೋಗಿದ್ದ. ರಾಜೇಶ್ ಬುಧವಾರ ಮಧ್ಯಾಹ್ನ ಗೋದಾಮಿಗೆ ತೆರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ವೈಯಾಲಿಕಾವಲ್ ಠಾಣೆಗೆ ದೂರು ಕೊಟ್ಟಿದ್ದರು.

ಸಾಲ ಕೇಳಿದ್ದೇ ಸುಳಿವು: ‘ಆರೋಪಿಯ ಚಲನವಲನಗಳು ಆ ರಸ್ತೆಯ ಸಿ.ಸಿ.ಟಿ.ವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದವು. ಆದರೆ, ದೃಶ್ಯ ಅಸ್ಪಷ್ಟವಾಗಿದ್ದರಿಂದ ಚಹರೆ ಕಾಣಿಸುತ್ತಿರಲಿಲ್ಲ. ರಾಜೇಶ್ ಅವರನ್ನು ವಿಚಾರಿಸಿದಾಗ, ‘ಪ್ರಶಾಂತ್ ಸಾಲ ಕೇಳಿಕೊಂಡು ಎರಡು ದಿನ ಗೋದಾಮಿನ ಬಳಿ ಬಂದಿದ್ದ. ಆತನ ಮೇಲೆ ಅನುಮಾನವಿದೆ’ ಎಂದರು. ‘ಟವರ್ ಡಂಪ್’ ತನಿಖೆ ನಡೆಸಿದಾಗ, ಕೃತ್ಯ ನಡೆದ ಸಮಯದಲ್ಲಿ ಪ್ರಶಾಂತ್‌ನ ಮೊಬೈಲ್ ಗೋದಾಮಿನ ಸಮೀಪದ ಟವರ್‌ನಿಂದಲೇ ಸಂಪರ್ಕ ಪಡೆದಿತ್ತು. ಆ ನಂತರ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT