ಬೆಂಗಳೂರು: ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದ ಆರೋಪಿಯನ್ನು ಸುಬ್ರಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಕೃಷ್ಣ ಆಭರಣ ಅಂಗಡಿ ಮಾಲೀಕರು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ತೆರಳಿದ್ದರು. ವಾಪಸ್ ಬಂದು ನೋಡಿದಾಗ ಮನೆಯ ಮೊದಲ ಮಹಡಿಯ ಕಿಟಕಿಯ ಕಬ್ಬಿಣದ ಗ್ರಿಲ್‌ಗಳನ್ನು ಮೀಟಿ, ಮನೆಯೊಳಗಿದ್ದ ಚಿನ್ನ, ವಜ್ರ, ಬೆಳ್ಳಿ ಹಾಗೂ ನಗದು ಕಳವು ಮಾಡಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ದೊರೆತ ಸುಳಿವು ಆಧರಿಸಿ, ಕಳ್ಳತನ ನಡೆದ 12 ಗಂಟೆಯಲ್ಲೇ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಆರೋಪಿಗಳಾದ ಸನ್ಯಾಸಿಮಠ ನಂದೀಶ್, ಎಚ್.ಎಂ.ನಂದೀಶ್ ಮತ್ತು ಪ್ರತಾಪ್ ಕುಮಾರ ಅವರನ್ನು ಬಂಧಿಸಿ, 1 ಕೆ.ಜಿ. 8.02 ಗ್ರಾಂ ತೂಕದ ಚಿನ್ನ, ವಜ್ರದ ಆಭರಣ, ಬೆಳ್ಳಿ ವಸ್ತುಗಳು, ಎಂಟು ವಾಚ್‌ಗಳು, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡು, ಹೆಲ್ಮೆಟ್, ₹ 18 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
‘ಆಭರಣ ಅಂಗಡಿ ಮಾಲೀಕರ ಮನೆಯಲ್ಲಿ ಸನ್ಯಾಸಿ ಮಠ ಪತ್ನಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದೇ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆಯಿಂದ ಉದ್ಯಮಿಯ ಕುಟುಂಬ ತೀರ್ಥಯಾತ್ರೆ ಹೊರಟಿರುವ ಮಾಹಿತಿ ದೊರಕಿತ್ತು. ಈ ವಿಚಾರ ತಿಳಿದಿದ್ದ ಸನ್ಯಾಸಿ ಮಠ, ತನ್ನ ಸಂಬಂಧಿಕರ ಜತೆ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಕದ್ದ ಎಲ್ಲಾ ಚಿನ್ನವನ್ನು ತನ್ನ ಕೊಠಡಿಯಲ್ಲಿ ಇಟ್ಟಿದ್ದ’ ಎಂದು ಹೇಳಿದ್ದಾರೆ.
‘ಕಳ್ಳತನದ ವಿಚಾರ ಆರೋಪಿಯ ಪತ್ನಿಗೆ ಗೊತ್ತಿರಲಿಲ್ಲ. ಕೃತ್ಯ ಎಸಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಸನ್ಯಾಸಿಮಠ ನಂದೀಶ್ ಕುಟುಂಬ ಸಮೇತ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಾಪಸ್ ಬರುವ ವೇಳೆ ತುಮಕೂರು ಜಿಲ್ಲೆಯ ಹುಳಿಯಾರು ಬಳಿ ಬಂಧಿಸಲಾಯಿತು. ಕೇಶಮುಂಡನ ಮಾಡಿಸಿಕೊಂಡಿರುವ ಆರೋಪಿ, ದೇವರ ಹುಂಡಿಗೆ ₹ 20 ಸಾವಿರ ಕಾಣಿಕೆ ಸಹ ಹಾಕಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಕೃತ್ಯಕ್ಕೆ ಸಹಕರಿಸಿದ ಎಚ್.ಎಂ. ನಂದೀಶ್ ಮತ್ತು ಪ್ರತಾಪ್ ಕುಮಾರ್‌ನನ್ನು ಬಂಧಿಸಲಾಯಿತು. ಇವರಿಂದ ₹ 18 ಸಾವಿರ ನಗದು ಸೇರಿದಂತೆ ₹1.09 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಯಿತು. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.