ಗುರುವಾರ , ಅಕ್ಟೋಬರ್ 24, 2019
21 °C
ಮುಖವಾಡ ಧರಿಸಿ ಚಿನ್ನಾಭರಣ ಕದ್ದಿದ್ದ ಶಂಕೆ * ಬಾಣಸವಾಡಿಯಲ್ಲೂ ಕಳ್ಳತನ

ನ್ಯಾಯಾಲಯಕ್ಕೆ ಆರೋಪಿ ಶರಣು

Published:
Updated:

ಬೆಂಗಳೂರು: ಬೆಕ್ಕು ಹಾಗೂ ನಾಯಿ ಮುಖವಾಡ ಧರಿಸಿ ಚೆನ್ನೈನ ಲಲಿತಾ ಆಭರಣ ಮಳಿಗೆಯಲ್ಲಿ ಚಿನ್ನಾಭರಣ ಕದ್ದಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಮುರುಗನ್ ಎಂಬಾತ ಬೆಂಗಳೂರಿನ ಮೆಯೋಹಾಲ್‌ ನ್ಯಾಯಾಲಯಕ್ಕೆ ಶುಕ್ರವಾರ ಶರಣಾಗಿದ್ದಾನೆ.

ಆಭರಣ ಮಳಿಗೆ ಕಳವು ಪ್ರಕರಣ ಸಂಬಂಧ ಆರೋಪಿ ಸುರೇಶ್ ಎಂಬಾತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಮುರುಗನ್‌ ಇರಬಹುದೆಂಬ ಅನುಮಾನದ ಮೇರೆಗೆ ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಅದರ ಬೆನ್ನಲ್ಲೇ, ಬಾಣಸವಾಡಿ ಠಾಣೆ ವ್ಯಾಪ್ತಿ ಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲೂ ಆರೋಪಿ ಆಗಿರುವ ಮುರುಗನ್ ಬೆಂಗಳೂರಿಗೆ ಬಂದು ವಕೀಲರ ಸಮೇತ ನ್ಯಾಯಾಲಯದ ಎದುರು ಹಾಜರಾದ. ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಜೈಲಿಗೂ ಹೋಗಿ ಬಂದಿದ್ದ: ‘ಬೆಂಗಳೂರು ನಿವಾಸಿಯಾದ ಮುರುಗನ್, ಈ ಹಿಂದೆ ಹಲವು ಮನೆಗಳಲ್ಲಿ ಕಳವು ಮಾಡಿದ್ದ. ಕೆಲ ವರ್ಷಗಳ ಹಿಂದೆಯೇ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಹೊರಗೆ ಬಂದಿದ್ದ ಆತ ಪುನಃ ಕಳ್ಳತನ ಮಾಡಲಾರಂಭಿಸಿದ್ದ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

‘ಚೆನ್ನೈನ ಲಲಿತಾ ಆಭರಣ ಮಳಿಗೆ ಕಳ್ಳತನ ಪ್ರಕರಣದಲ್ಲಿ ಮುರುಗನ್‌ ಭಾಗಿ ಯಾಗಿದ್ದ ಬಗ್ಗೆ ಅಲ್ಲಿಯ ಪೊಲೀಸರಿಗೆ ಅನುಮಾನವಿದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟರಲ್ಲೇ ಆತ ಕೋರ್ಟ್‌ಗೆ ಶರಣಾಗಿದ್ದಾನೆ’ ಎಂದರು.

‘ಆತನನ್ನು ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಲಾಗುವುದು. ಚೆನ್ನೈ ಪೊಲೀಸರೂ ಆತನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ’ ಎಂದು ತಿಳಿಸಿದರು.  

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)