ಶನಿವಾರ, ನವೆಂಬರ್ 23, 2019
17 °C
ದಂತ ವೈದ್ಯೆ, ಆಕೆಯ ‍ಪತಿ ವಿರುದ್ಧ ಕಾಂಗ್ರೆಸ್‌ ಮುಖಂಡ ದೇವರಾಜ್‌ ಪತ್ನಿಯಿಂದ ದೂರು

ನಗದು, ಒಡವೆ ಪಡೆದು ವಂಚನೆ

Published:
Updated:

ಬೆಂಗಳೂರು: ‘ಮೂವತ್ತು ವರ್ಷಗಳಿಂದ ಪರಿಚಿತರಾಗಿರುವ ದಂತ ವೈದ್ಯೆ ಮತ್ತು ಆಕೆಯ ಪತಿ ₹ 85 ಲಕ್ಷ ನಗದು ಮತ್ತು ₹ 40 ಲಕ್ಷ ಮೌಲ್ಯದ ಒಡವೆಗಳನ್ನು ವಂಚಿಸಿದ್ದಾರೆ’ ಎಂದು ಆರೋಪಿಸಿ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಕಾಂಗ್ರೆಸ್‌ನ ಮಾಜಿ ಶಾಸಕ ಆರ್.ವಿ ದೇವರಾಜ್ ಅವರ ಪತ್ನಿ ಮಮತಾ ದೂರು ನೀಡಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ದಂಪತಿಯರಾದ ಎಚ್‌.ಎನ್‌. ಶ್ರೀದೇವಿ ಮತ್ತು ಸದಾಶಿವ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ಚೆಕ್‌ ಬೌನ್ಸ್‌: ‘ಮನೆ ಕಟ್ಟಲು, ಅನಾರೋಗ್ಯ, ಮಗಳಿಗೆ ಮದುವೆ ಹೀಗೆ ಸುಳ್ಳು ಹೇಳಿ 2015ರಿಂದ ಹಂತ ಹಂತವಾಗಿ ಹಣ ಮತ್ತು ಒಡವೆಗಳು ದಂಪತಿ ಪಡೆದಿದ್ದಾರೆ. ಮರಳಿಸುವಂತೆ ಕೇಳಿದಾಗ ಅ. 3ರಂದು ಶ್ರೀದೇವಿ ₹ 30 ಲಕ್ಷದ ಮತ್ತು ಆಕೆಯ ಪತಿ ₹ 40 ಲಕ್ಷದ ಚೆಕ್‌ ನೀಡಿದ್ದಾರೆ. ಆದರೆ, ಆ ಎರಡೂ ಚೆಕ್‌ಗಳು ಬೌನ್ಸ್‌ ಆಗಿವೆ. ಅಲ್ಲದೆ, ನನ್ನ ಆಪ್ತರನ್ನೂ ಪರಿಚಯಿಸಿಕೊಂಡು ಅವರಿಂದಲೂ ದಂಪತಿ ಸಾಲ ಪಡೆದು ಕೊಂಡಿದ್ದಾರೆ’ ಎಂದು ದೂರಿನಲ್ಲಿ ಮಮತಾ ತಿಳಿಸಿದ್ದಾರೆ.

‘ಹಣ ವಾಪಸು ನೀಡುವಂತೆ ಕೇಳಿದಾಗ ದಂಪತಿ ಅವಾಚ್ಯವಾಗಿ ನಿಂದಿ ಸಿದ್ದಾರೆ. ಅಲ್ಲದೆ, ‘ಏನು ಬೇಕಾದರೂ ಮಾಡಿಕೊಳ್ಳಿ. ಹಣ ಕೊಡುವುದಿಲ್ಲ. ಸಾಲ ಹಿಂದಿರುಗಿಸುವಂತೆ ಒತ್ತಾಯಿಸಿ ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಾರೆ’ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.

‘ಪತಿ ದೇವರಾಜ್‌ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ರಾಜಕೀಯವಾಗಿ ಅವರು ಉನ್ನತ ಸ್ಥಾನದಲ್ಲಿದ್ದಾರೆ. ಸಮಾಜದಲ್ಲಿ ನಮ್ಮ ಘನತೆ, ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ವಂಚನೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಮಮತಾ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)