ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪ್ರಕರಣ ಹೆಚ್ಚಳವಾದರೂ ಆಸ್ಪತ್ರೆ ದಾಖಲಾತಿಯಿಲ್ಲ

ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ l ಮುನ್ನೆಚ್ಚರಿಕೆ ಕ್ರಮವಾಗಿ 2 ಸಾವಿರಕ್ಕೂ ಅಧಿಕ ಹಾಸಿಗೆಗಳು ಮೀಸಲು
Last Updated 3 ಜೂನ್ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ವಾರದಿಂದ ಏರಿಕೆ ಕಂಡರೂ ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದಾಗಿ ಆಸ್ಪತ್ರೆಗಳಲ್ಲಿ ಶೇ 99.79 ರಷ್ಟು ಹಾಸಿಗೆಗಳು ಖಾಲಿಯಿವೆ. ಇಷ್ಟಾಗಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಕೋಟಾದಡಿ ಎರಡು ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಿಕೊಳ್ಳಲಾಗಿದೆ.

10 ದಿನಗಳಲ್ಲಿ 1,785 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. 1,346 ಮಂದಿ ಚೇತರಿಸಿಕೊಂಡಿದ್ದಾರೆ. ಹೊಸ ಪ್ರಕರಣಗಳ ಸಂಖ್ಯೆ 200ರ ಗಡಿಯ ಆಸುಪಾಸಿಗೆ ಏರಿಕೆಯಾಗಿದ್ದರೂ ಸೋಂಕಿತರಲ್ಲಿ ನಿತ್ಯ ಎರಡರಿಂದ ಐದು ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ದಾಖಲಾಗುತ್ತಿರುವವರಿಗೆ ಸಾಮಾನ್ಯ ಹಾಸಿಗೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕ ಸೋಂಕಿತರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ.

ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟಿರುವ 2,395 ಹಾಸಿಗೆಗಳಲ್ಲಿ 2,390 ಹಾಸಿಗೆಗಳು ಖಾಲಿ ಉಳಿದಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ (ಟ್ರಯಾಜ್ ಸೆಂಟರ್) ಸೋಂಕಿತರನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ನಗರದಲ್ಲಿ 48 ಟ್ರಯಾಜ್ ಸೆಂಟರ್‌ಗಳಿವೆ.

ಕೋವಿಡ್ ಎರಡನೇ ಅಲೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಸೇರಿದಂತೆ ವಿವಿಧ ಮಾದರಿಯ ಹಾಸಿಗೆಗಳು ಸಿಗದೆ, ಸಮಸ್ಯೆ ಗಂಭೀರ ಸ್ವರೂಪ ಪಡೆದು, ಕೋವಿಡ್ ಪೀಡಿತರಿಗೆ ಆಸ್ಪತ್ರೆ ದಾಖಲಾತಿಯೇ ಸಮಸ್ಯೆಯಾಗಿತ್ತು.ಸರ್ಕಾರವು ಕೋವಿಡ್ ಮೂರನೇ ಅಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ರೂಪಿಸಿತ್ತು. ಸರ್ಕಾರಿ ಕೋಟಾದಡಿ ಶಿಫಾರಸು ಆಧಾರದಲ್ಲಿ ಚಿಕಿತ್ಸೆ ನೀಡಲು ಶೇ 75ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿ, ಆದೇಶ ಹೊರಡಿಸಿತ್ತು. ಇದರಿಂದಾಗಿ ಕೋವಿಡ್‌ ಚಿಕಿತ್ಸೆಗೆ ನಗರದಲ್ಲಿ 6 ಸಾವಿರಕ್ಕೂ ಅಧಿಕ ಹಾಸಿಗೆಗಳು ದೊರೆತಿದ್ದವು.

ಹಾಸಿಗೆ ಮೀಸಲು:ಮೂರನೇ ಅಲೆಯ ಸಂದರ್ಭದಲ್ಲಿ ದಿನವೊಂದಕ್ಕೆ ವರದಿಯಾಗುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆಯು ನಗರದಲ್ಲಿ 30 ಸಾವಿರದವರೆಗೆ ಹೆಚ್ಚಳ ಕಂಡಿದ್ದರೂ ಸೋಂಕಿತರಲ್ಲಿ ಶೇ 98ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗಿದ್ದರು. ಆದರೂ ಮೀಸಲು ಹಾಸಿಗೆಗಳನ್ನು ಚಿಕಿತ್ಸೆಗೆ ಉಳಿಸಿಕೊಳ್ಳಲಾಗಿದೆ.

‘ಮೂರು ನಾಲ್ಕು ದಿನಗಳಿಗೊಮ್ಮೆ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರಯೋಗಾಲಯದ ವರದಿಗಳು ವಿಳಂಬವಾಗುತ್ತಿವೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಸದ್ಯಕ್ಕೆ ಆತಂಕ ಪಡುವ ಪರಿಸ್ಥಿತಿಯಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ’ ಎಂದುಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ತಿಳಿಸಿದರು.

‘ಕೋವಿಡ್ ಎರಡನೇ ಅಲೆಯಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಶ್ವಾಸಕೋಶಕ್ಕೆ ಹಾನಿ ಮಾಡಿತ್ತು. ಇದರಿಂದ ಹೆಚ್ಚಿನವರು ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಮೂರನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದರೂ ಸೋಂಕಿನ ತೀವ್ರತೆ ಕಡಿಮೆಯಿತ್ತು. ಈಗ ಪ್ರಕರಣ ಕೊಂಚ ಏರಿಕೆಯಾದರೂ ಆಸ್ಪತ್ರೆ ದಾಖಲಾತಿ ಕಡಿಮೆಯಿದೆ’ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT