ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಮಹಾಯೋಜನೆಗೆ ಇಲ್ಲ ಮುಕ್ತಿ

ಆರ್‌ಎಂಪಿ 2031: ಸಿದ್ಧತೆ ಆರಂಭವಾಗಿ ಸಂದಿದೆ ಮೂರು ವರ್ಷ l ಅಂತಿಮ ತೀರ್ಮಾನಕ್ಕೆ ಮೀನಮೇಷ
Last Updated 15 ಡಿಸೆಂಬರ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ‘ಪರಿಷ್ಕೃತ ಮಹಾಯೋಜನೆ(ಆರ್‌ಎಂಪಿ)2031’ ನ್ನು ಅಂತಿಮಗೊಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿ
11 ತಿಂಗಳುಗಳು ಉರುಳಿವೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಬಿಡಿಎ ಸರಿಸುಮಾರು ಎರಡು ವರ್ಷಗಳ ಪ್ರಯತ್ನದಿಂದ ರೂಪಿಸಿರುವ ‘ಆರ್‌ಎಂಪಿ 2031’ ಸರ್ಕಾರ ಒಪ್ಪಿದೆಯೋ ಅಥವಾತಿರಸ್ಕರಿಸಿದೆಯೋ ಎಂಬ ಬಗ್ಗೆಯೂ ಸ್ಪಷ್ಟತೆಯೇ ಇಲ್ಲ.

‘ಆರ್‌ಎಂಪಿಯ ಪೂರ್ವತಯಾರಿ ಆರಂಭಿಸಿ ಇಂದಿಗೆ ಸರಿಯಾಗಿ ಮೂರು ವರ್ಷಗಳು ಕಳೆದವು. ನಾವು ಸರ್ಕಾರದ ಸೂಚನೆ ಮೇರೆಗೆ ಆರ್‌ಎಂಪಿಯನ್ನು ಸಿದ್ಧಪಡಿಸಿಕೊಟ್ಟಿದ್ದೇವೆ. 2019ರ ಜ.17ರಂದೇ ಇದನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದೇವೆ. ಆ ಬಳಿಕ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಧಿಕಾರವು 2017ರ ನವೆಂಬರ್‌ 25ರಂದು ಯೋಜನೆಯ ಕರಡನ್ನು ವೆಬ್‌ಸೈಟ್‌ನಲ್ಲಿ (www.bdabanga*ore.org) ಪ್ರಕಟಿಸಿತ್ತು. ಸಾರ್ವಜನಿಕರಿಂದ 13,046 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಪರಿಶೀಲಿಸಿದ್ದ ಬಿಬಿಎಂಪಿ ವಿಶೇಷ ಆಯುಕ್ತರ ನೇತೃತ್ವದ ಸಮಿತಿ ಯೋಜನೆಗೆ ಅಂತಿಮ ರೂಪ ನೀಡಿತ್ತು.

ಬಿಡಿಎ ಪರಿಷ್ಕೃತ ನಗರ ಮಹಾಯೋಜನೆ ಬಗ್ಗೆ ಸಾರ್ವಜನಿಕರು ಎತ್ತಿರುವ ಆಕ್ಷೇಪಣೆಗಳಿಗೆ
ಸ್ಪಷ್ಟನೆ ನೀಡದೆಯೇ ಕರಡನ್ನು ಅಂತಿಮಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿ ‘ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ’ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಹಾಗಾಗಿ, ಕರಡು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರ ಆಕ್ಷೇಪಣೆಗಳನ್ನುಸಮರ್ಪಕವಾದ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ನಿರ್ದೇಶನದ ಮೇರೆಗೆ, ಯೋಜನೆಯ ಕರಡನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಲು ಸರ್ಕಾರ 2018ರ ಮಾರ್ಚ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್‌.ಪಾಟೀಲ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ಒಮ್ಮೆಯೂ ಸಭೆಯನ್ನೇ ನಡೆಸಿರಲಿಲ್ಲ. ಈ ನಡುವೆ, ಬಿಡಿಎ ಆರ್‌ಎಂಪಿ 2031ರ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಆರ್‌ಎಂಪಿ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಳೆಯದಿರುವುದು ಆಕ್ಷೇಪಣೆ ಸಲ್ಲಿಸಿದವರ ಆತಂಕಕ್ಕೂ ಕಾರಣವಾಗಿದೆ.

‘ವಲಯ ನಿಬಂಧನೆಗೆ ಸಂಬಂಧಿಸಿದಂತೆ ನಮ್ಮ ಆಕ್ಷೇಪಣೆ ಸ್ವೀಕೃತವಾಗಿದೆಯೋ, ತಿರಸ್ಕೃತವಾಗಿದೆಯೋ ತಿಳಿಯುತ್ತಿಲ್ಲ’ ಎಂದು ಆಕ್ಷೇಪಣೆ ಸಲ್ಲಿಸಿದವರೊಬ್ಬರು ‘ಪ್ರಜಾವಾಣಿಗೆ’ ತಿಳಿಸಿದರು.

‘ಆಕ್ಷೇಪಣೆ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಈ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದ ಬಳಿಕ
ವಷ್ಟೇ ತಿಳಿಯುತ್ತದೆ. ರಾಜ್ಯಪತ್ರದಲ್ಲಿ ಪ್ರಕಟವಾದ ಬಳಿಕ ಆರ್‌ಎಂಪಿಯನ್ನು ಬಿಡಿಎ ವೆಬ್‌ಸೈಟ್‌ನಲ್ಲೂ ಪ್ರಕಟಿಸುತ್ತೇವೆ. ಸದ್ಯಕ್ಕೆ ಈ ವಿಚಾರದಲ್ಲಿ ನಾವು ಏನೂ ಮಾಡಲಾಗದು’ ಎಂದು ಬಿಡಿಎ ಅಧಿಕಾರಿ ತಿಳಿಸಿದರು.

‘ನಗರ ಮಹಾಯೋಜನೆ ನಗರದ ಸಮಗ್ರ ಅಭಿವೃದ್ಧಿಯ ರೂಪರೇಷೆ. ಇದನ್ನು ತಯಾರಿಸುವ ಕಾರ್ಯ ಪಾರದರ್ಶಕವಾಗಿರಬೇಕು ಎಂಬುದಷ್ಟೇ ನಮ್ಮ ಆಶಯ. ಆರ್‌ಎಂಪಿ ಕರಡಿಗೆ ಸಂಬಂಧಿಸಿದ ಆಕ್ಷೇಪಣೆಗಳು ಯಾವುವು, ಅವುಗಳ ಬಗ್ಗೆ ಏನು ನಿರ್ಧಾರ ಕೈಗೊಳ್ಳಲಾಗಿದೆ ಎಂಬುದನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದೆವು. ಆದರೆ, ಈ ಬಗ್ಗೆ ಸರ್ಕಾರಕ್ಕಾಗಲೀ, ಪ್ರಾಧಿಕಾರಕ್ಕಾಗಲೀಆಸಕ್ತಿ ಇದ್ದಂತೆ ತೋರುತ್ತಿಲ್ಲ’ ಎಂದು ಸಿಟಿಜನ್ಸ್‌ ಆ್ಯಕ್ಷನ್ ಫೋರಂನಎನ್‌.ಎಸ್.ಮುಕುಂದ್‌ ಹೇಳಿದರು.

‘ಆರ್‌ಎಂಪಿ ವಲಯ ನಿಬಂಧನೆ ಮಾರ್ಪಾಡು ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ನಗರಕ್ಕೆ ಎಷ್ಟು ನೀರು ಬೇಕು, ಎಲ್ಲೆಲ್ಲಿ ಎಷ್ಟು ತ್ಯಾಜ್ಯ ನೀರು ಉತ್ಪತ್ತಿ ಎಷ್ಟಾಗುತ್ತದೆ. ಅವುಗಳ ಸಂಸ್ಕರಣೆ ಘಟಕ (ಎಸ್‌ಟಿಪಿ) ಸ್ಥಾಪಿಸಲು ಎಲ್ಲಿ ಜಾಗ ಕಾಯ್ದಿರಿಸಬೇಕು ಎಂಬಬಗ್ಗೆಯೂ ಸ್ಪಷ್ಟ ರೂಪರೇಷೆ ಇರಬೇಕು. ಪ್ರತಿ ವಾರ್ಡ್‌ನಲ್ಲಿ ಬೀದಿ ವ್ಯಾಪಾರಿಗಳಿಗೆ, ವಲಸೆ ಕಾರ್ಮಿಕರಿಗೆ ಜಾಗ ಕಾಯ್ದಿರಿಸಬೇಕು. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸ್ಪಂದಿಸದಿದ್ದರೆ ಅದು ನಗರ ಮಹಾಯೋಜನೆ ಹೇಗಾಗುತ್ತದೆ’ ಎಂದು ಅವರು ಪ್ರಶ್ನಿಸಿದರು.

‘ಆರ್‌ಎಂಪಿ 2031’ ಹಾದಿ

*2016ರ ಡಿಸೆಂಬರ್‌ 16: ಬೆಂಗಳೂರು ನಗರ ಯೋಜನೆ ಸಮಿತಿ (ಬಿಎಂಪಿಸಿ) ಸಮ್ಮುಖದಲ್ಲಿ ಆರ್‌ಎಂಪಿ 2031ರ ಪೂರ್ವತಯಾರಿಯ ಪ್ರಾತ್ಯಕ್ಷಿಕೆ ನೀಡಿದ ಬಿಡಿಎ. 2017ರ ಜುಲೈ ಅಂತ್ಯದೊಳಗೆ ಕರಡು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸೂಚನೆ.

*2016 ಡಿಸೆಂಬರ್‌ 30: ನಗರದ ಚಿತ್ರಣ 2031ರ ವೇಳೆಗೆ ನಗರದ ಸನ್ನಿವೇಶಗಳು ಹೇಗಿರುತ್ತವೆ? ನಗರದ
ಅಭಿವೃದ್ಧಿಗೆ ಏನೆಲ್ಲ ಆಯ್ಕೆಗಳಿವೆ, ಏನೆಲ್ಲ ಸಿದ್ಧತೆ ಅಗತ್ಯ ಎಂಬ ವಿವರ ಬಿಡಿಎ ವೆಬ್‌ಸೈಟ್‌ನಲ್ಲಿ
(http://bdabanga*ore.org) ಪ್ರಕಟ.

*ಸಾರ್ವಜನಿಕ ಸಲಹೆ ಆಹ್ವಾನಿಸಲು ಬಿಬಿಎಂಪಿಯ 8 ವಲಯಗಳಲ್ಲಿ (2017ರ ಜನವರಿ 12ರಿಂದ 27ರವರೆಗೆ) ಸಭೆ

*ಸಭೆಗಳಲ್ಲಿ ಹಾಗೂ ಇಮೇಲ್‌ ಮೂಲಕ 509 ಸಲಹೆ ಸ್ವೀಕಾರ

*2017 ಜೂನ್‌ 9: ಪ್ರಾಧಿಕಾರದಲ್ಲಿ ಸಭೆಯಲ್ಲಿ ಯೋಜನೆಯ ಕರಡು ಮಂಡನೆ

*2017ರ ನವೆಂಬರ್‌ 25: ಯೋಜನೆಯ ಕರಡು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು 60 ದಿನ ಅವಕಾಶ

*ಸಾರ್ವಜನಿಕರಿಂದ 13,046 ಆಕ್ಷೇಪಣೆ ಸಲ್ಲಿಕೆ

*2018 ಫೆ. 12: ಆರ್‌ಎಂಪಿ 2031 ಕುರಿತು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ ಸಲ್ಲಿಸಿದ ಪಿಐಎಲ್ ಸಂಬಂಧ ಬಿಡಿಎಗೆ ಹೈಕೋರ್ಟ್‌ ನೋಟಿಸ್‌. ಆಕ್ಷೇಪಣೆ ಸರಿಯಾಗಿ ವಿಲೇ ಮಾಡುವಂತೆ ಹೈಕೋರ್ಟ್‌ ಸೂಚನೆ

*2018 ಮಾರ್ಚ್‌: ಆಕ್ಷೇಪಣೆ ಮರುಪರಿಶೀಲನೆಗೆ ಬಿ.ಎಸ್‌.ಪಾಟೀಲ ನೇತೃತ್ವದಲ್ಲಿ ಸಮಿತಿ ರಚನೆ. ಒಮ್ಮೆಯೂ ಸಭೆ ನಡೆಸದ ಸಮಿತಿ

*2019 ಜ. 17: ಬಿಡಿಎಯಿಂದನಗರಾಭಿವೃದ್ಧಿ ಇಲಾಖೆಗೆ ‘ಆರ್‌ಎಂಪಿ 2031’ ಅಂತಿಮ ವರದಿ ಸಲ್ಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT