ಸೋಮವಾರ, ಫೆಬ್ರವರಿ 17, 2020
29 °C
ಸಂಚಾರ ದಟ್ಟಣೆಯಲ್ಲಿ ಮತ್ತೆ ಸಿಲುಕಿಕೊಳ್ಳುತ್ತಿರುವ ಬಸ್‌ಗಳು l ನಿರ್ದಿಷ್ಟ ಪಥದಲ್ಲಿ ಖಾಸಗಿ ವಾಹನಗಳು

ಪ್ರತ್ಯೇಕ ಪಥದಲ್ಲಿ ಬಸ್‌ಗಳಿಗೇ ಜಾಗವಿಲ್ಲ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಸಂಚಾರದಟ್ಟಣೆ ಕಡಿಮೆ ಮಾಡಲು ಬಿಬಿಎಂಪಿ ಮತ್ತು ಬಿಎಂಟಿಸಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದರ ಭಾಗವಾಗಿ ಹೊರವರ್ತುಲ ರಸ್ತೆಯಲ್ಲಿ ಜಾರಿಗೆ ತಂದಿರುವ ಬಸ್‌ ಆದ್ಯತಾ ಪಥದಲ್ಲಿ ಬಿಎಂಟಿಸಿ ಬಸ್‌ಗಳು ದಾರಿಗಾಗಿ ತಡಕಾಡುತ್ತಿವೆ.

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರ ಟಿನ್ ಫ್ಯಾಕ್ಟರಿ ತನಕ ಹೊರವರ್ತುಲ ರಸ್ತೆಯಲ್ಲಿ ಬಸ್‌ಗಾಗಿ ಆದ್ಯತಾ ಪಥವನ್ನು ಬಿಬಿಎಂಪಿ ಸಿದ್ಧಪಡಿಸಿದೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಚಾಲಕರಿಗೆ ಬಿಎಂಟಿಸಿ ತರಬೇತಿಯನ್ನೂ ನೀಡಿದೆ. ಅಲ್ಲದೇ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡಲು ಪ್ರಚಾರವನ್ನೂ ಮಾಡುತ್ತಿದೆ.

ಈ ಪ್ರತ್ಯೇಕ ಪಥದಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ನವೆಂಬರ್ 15ರಂದು ನಗರ ಪೊಲೀಸ್ ಕಮಿಷನರ್ ಆದೇಶವನ್ನೂ ಹೊರಡಿಸಿದ್ದಾರೆ. ಅದರ ಪ್ರಕಾರ, ಬಿಎಂಟಿಸಿ ಬಸ್‌ಗಳನ್ನು ಬಿಟ್ಟು ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇರಿದಂತೆ ತುರ್ತು ಸೇವಾ ವಾಹನಗಳು ಈ ಪಥದಲ್ಲಿ ಸಂಚರಿಸಬಹುದು. ಬೇರಾವ ಖಾಸಗಿ ಅಥವಾ ಸರ್ಕಾರಿ ವಾಹನಗಳು ಈ ಪಥವನ್ನು ಪ್ರವೇಶಿಸುವಂತಿಲ್ಲ.

ಅಧಿಸೂಚನೆ ಪ್ರಕಟವಾದ ಬಳಿಕ ಕೆಲವೇ ದಿನಗಳು ಮಾತ್ರ ಬಿಎಂಟಿಸಿ ಬಸ್‌ಗಳು ಈ ರಸ್ತೆಯಲ್ಲಿ ನಿರಾಯಾಸವಾಗಿ ಸಂಚರಿಸಿದವು. ಪ್ರತ್ಯೇಕ ಪಥದಿಂದ ಬಸ್‌ಗಳ ಸಂಚಾರದ ಅವಧಿ ಗಂಟೆಗೆ 7 ನಿಮಿಷ ಉಳಿತಾಯವಾಗುತ್ತಿದೆ ಎಂದು ಬಿಎಂಟಿಸಿ ಅಂದಾಜನ್ನೂ ಮಾಡಿತ್ತು. ಇದೀಗ ಮತ್ತೆ ಹಳೆಯ ಸ್ಥಿತಿಗೇ ಸಂಚಾರ ವ್ಯವಸ್ಥೆ ಹೊರಳುವ ಎಲ್ಲ ಲಕ್ಷಣಗಳು ಕಾಣಿಸಿವೆ.

ವಾರದ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ರಕ್ಕಸ ರೂಪ ಪಡೆದುಕೊಳ್ಳುತ್ತಿದೆ. ಆದ್ಯತಾ ಪಥದಲ್ಲೇ ಬಿಎಂಟಿಸಿ ಬಸ್‌ಗಳು ಸಂಚರಿಸಿದರೂ ದಟ್ಟಣೆಯನ್ನು ಸೀಳಿಕೊಂಡು ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ. ದಟ್ಟಣೆ ಸಂದರ್ಭದಲ್ಲಿ ವಾಹನ ಚಾಲಕರೂ ದಂಡದ ಬಗ್ಗೆ ಯೋಚನೆ ಮಾಡುವಷ್ಟು ತಾಳ್ಮೆ ಉಳಿಸಿಕೊಂಡಿರುವುದಿಲ್ಲ. ಹೀಗಾಗಿ, ಆದ್ಯತಾ ಪಥ ಕೂಡ ಖಾಸಗಿ ವಾಹನಗಳಿಂದ ತುಂಬಿ ಹೋಗುತ್ತಿದೆ.

‘ಈ ಪಥಕ್ಕೆ ಬರುವ ಖಾಸಗಿ ವಾಹನಗಳನ್ನು ತಡೆದು ದಂಡ ಹಾಕಬೇಕಾದ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಪ್ರತಿನಿತ್ಯ ಸರಾಸರಿ ಕನಿಷ್ಠ 7 ಲಕ್ಷ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಎಲ್ಲಾ ವಾಹನ ಸವಾರರಿಗೆ ಪೊಲೀಸರು ದಂಡ ಹಾಕುವುದು ಸಾಧ್ಯವೇ’ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ಯೋಜನೆ ಆರಂಭಿಸಿದಾಗ ಆದ್ಯತೆ ಪಥದೊಳಗೆ ಬೇರೆ ವಾಹನಗಳು ನುಸುಳುವುದನ್ನು ತಡೆಯಲು ಕಬ್ಬಿಣದ ಬೊಲ್ಲಾರ್ಡ್‌ಗಳನ್ನು ಬಿಬಿಎಂಪಿ ಅಳವಡಿಸಿತ್ತು. ಖಾಸಗಿ ವಾಹನಗಳು  ಬೊಲ್ಲಾರ್ಡ್‌ಗಳಿಗೇ ಡಿಕ್ಕಿ ಹೊಡೆದು ಸರಣಿ ಅಪಘಾತಗಳು ಉಂಟಾಗಿ ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಯಾಗಿತ್ತು. ಹೀಗಾಗಿ, ಆ ಬೊಲ್ಲಾರ್ಡ್‌ಗಳನ್ನು ಬಿಬಿಎಂಪಿ ತೆಗೆದು ಹಾಕಿದೆ. ಬಸ್‌ ಪಥಕ್ಕೆ ಬಣ್ಣ ಬಳಿದು ಬೇರೆ ವಾಹನಗಳ ಸಂಚಾರ ನಿಷೇಧ ಎಂಬ ಫಲಕಗಳನ್ನು ಹಾಕಲಾಗಿದೆ. ಆದರೆ, ಆದ್ಯತಾ ಪಥವನ್ನು ಖಾಸಗಿ ವಾಹನಗಳು ಆವರಿಸುವುದು ತಪ್ಪುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು