ಪೊಲೀಸರ ಮುಖಕ್ಕೇ ಪೆಪ್ಪರ್ ಸ್ಪ್ರೇ ಹೊಡೆದ ಕಳ್ಳರು!

7
ಯೂಟ್ಯೂಬ್‌ ನೋಡಿ ಬೈಕ್ ಕದಿಯುತಿದ್ದ ಸೋದರರು

ಪೊಲೀಸರ ಮುಖಕ್ಕೇ ಪೆಪ್ಪರ್ ಸ್ಪ್ರೇ ಹೊಡೆದ ಕಳ್ಳರು!

Published:
Updated:

ಬೆಂಗಳೂರು: ಯೂಟ್ಯೂಬ್‌ನಲ್ಲಿ ವಾಹನ ಕಳ್ಳತನದ ವಿಡಿಯೊಗಳನ್ನು ನೋಡಿ ದುಬಾರಿ ಬೆಲೆಯ ಬೈಕ್‌ಗಳನ್ನು ಕದಿಯುತ್ತಿದ್ದ ಸೋದರರಿಬ್ಬರು, ತಮ್ಮನ್ನು ಹಿಡಿಯಲು ಬಂದ ಪೊಲೀಸರ ಮುಖಕ್ಕೇ ಪೆ‍ಪ್ಪರ್‌ಸ್ಪ್ರೇ ಹೊಡೆದು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಮಂಜುನಾಥ ಪಾಟೀಲ (20) ಹಾಗೂ ರಾಘವೇಂದ್ರ ಪಾಟೀಲ (19) ಬಂಧಿತ ಸೋದರರು. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಹಾಲನಾಯಕನಹಳ್ಳಿಯಲ್ಲಿ ನೆಲೆಸಿದ್ದ ಇವರು, ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳಿಂದ ನಾಲ್ಕು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಳ್ಳಂದೂರು ಠಾಣೆಯ ಕಾನ್‌ಸ್ಟೆಬಲ್‌ಗಳಾದ ಹನುಮಂತಪ್ಪ ಹಾಗೂ ರಾಮಪ್ಪ ಎಸ್.ಕಾಂಬ್ಳೆ ಸೆ.3ರ ನಸುಕಿನಲ್ಲಿ (3.30) ಕಸವನಹಳ್ಳಿ ರಸ್ತೆಯ ಓನರ್ಸ್ ಕೋರ್ಸ್‌ ಲೇಔಟ್‌ನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಮಾರ್ಗವಾಗಿ ಪಲ್ಸರ್‌ ಬೈಕ್‌ನಲ್ಲಿ ಬಂದ ಸೋದರರಿಬ್ಬರು, ಪೊಲೀಸರನ್ನು ನೋಡುತ್ತಿದ್ದಂತೆಯೇ ಯು–ತಿರುವು ಪಡೆದುಕೊಂಡರು.

ಇದರಿಂದ ಅನುಮಾನಗೊಂಡ ಸಿಬ್ಬಂದಿ, ಕೂಡಲೇ ಚೀತಾ ಬೈಕ್‌ನಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ. ಆಗ ಜೇಬಿನಿಂದ ಬಾಟಲಿ ತೆಗೆದ ಆರೋಪಿಗಳು, ಹನುಮಂತಪ್ಪ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಂತದಲ್ಲಿ ರಾಮಪ್ಪ ಅವರು ರೈಫಲ್ ತೋರಿಸಿ ಶರಣಾಗುವಂತೆ ಸೂಚಿಸಿದ್ದಾರೆ.

ರೈಫಲ್ ನೋಡುತ್ತಿದ್ದಂತೆಯೇ ಗಾಬರಿಗೆ ಬಿದ್ದ ಆರೋಪಿಗಳು, ಪೆಪ್ಪರ್ ಸ್ಪ್ರೇ ಬಾಟಲಿ ಹಾಗೂ ಚಾಕುವನ್ನು ನೆಲಕ್ಕೆ ಎಸೆದು ಶರಣಾಗಿದ್ದಾರೆ. ಇದೇ ಸಮಯದಲ್ಲಿ ಎಎಸ್‌ಐ ಶಿವಲಿಂಗಪ್ಪ ಹಾಗೂ ಹೆಡ್‌ಕಾನ್‌ಸ್ಟೆಬಲ್‌ ಚಂದ್ರಶೇಖರ್ ಸಹ ಗಸ್ತು ಮುಗಿಸಿಕೊಂಡು ಹೊಯ್ಸಳ ವಾಹನದಲ್ಲಿ ಅದೇ ಸ್ಥಳಕ್ಕೆ ಬಂದಿದ್ದಾರೆ. ಆರೋಪಿಗಳನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ಬೈಕ್ ಕಳ್ಳರು ಎಂಬುದು ಗೊತ್ತಾಗಿದೆ.

ಯೂಟ್ಯೂಬ್‌ ನೋಡಿ ಸಂಚು: ಹೊರ ದೇಶಗಳಲ್ಲಿ ಕಳ್ಳರು ಯಾವ ರೀತಿ ವಾಹನ ಕದಿಯುತ್ತಾರೆ ಹಾಗೂ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದನ್ನು ಯೂಟ್ಯೂಬ್‌ನಲ್ಲಿ ನೋಡಿಕೊಂಡು ಕಳವು ತಂತ್ರ ರೂಪಿಸಿದ್ದು ಈ ಸೋದರರ ವಿಶೇಷ. 

‘ಬೆಳ್ಳಂದೂರು, ಎಚ್‌ಎಎಲ್ ಹಾಗೂ ಮಾರತ್ತಹಳ್ಳಿಯ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು ಹೆಚ್ಚಾಗಿ ನೆಲೆಸಿದ್ದಾರೆ. ಪಾರ್ಕಿಂಗ್ ಸೌಲಭ್ಯ ಇಲ್ಲದ ಕಾರಣ ಬಹುತೇಕರು ರಸ್ತೆ ಬದಿಯೇ ಬೈಕ್‌ಗಳನ್ನು ನಿಲ್ಲಿಸಿರುತ್ತಾರೆ. ಊಟ ಪಾರ್ಸಲ್ ಕೊಡಲು ಹೋಗುವಾಗ ಆ ಬೈಕ್‌ಗಳನ್ನು ನೋಡಿ ಕದಿಯಲು ಸಂಚು ರೂಪಿಸುತಿದ್ದೆವು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !