ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಪಾತಗಳ ಬಳಿ ತಡೆಬೇಲಿಗೆ ಚಿಂತನೆ

Last Updated 4 ಜುಲೈ 2018, 19:58 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ರಾಜ್ಯದ ಪ್ರಮುಖ ಜಲಪಾತಗಳ ಬಳಿ ತಡೆಬೇಲಿ (ಬ್ಯಾರಿಕೇಡ್‌) ಅಳವಡಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

‘ಜಲಪಾತಗಳ ಬಳಿ ಪ್ರವಾಸಿ ಮಿತ್ರ, ಪೊಲೀಸ್‌ ಹಾಗೂ ಮಾರ್ಗದರ್ಶಕರನ್ನು ನಿಯೋಜಿಸಲಾಗಿದೆ. ಹಾಗಿದ್ದರೂ ಹಲವಾರು ಅವಘಡಗಳು ಸಂಭವಿಸಿವೆ. ಇಂಥ ಅನಿರೀಕ್ಷಿತ ಅವಘಡಗಳನ್ನು ತಪ್ಪಿಸಲು ತಡೆಬೇಲಿ ಹಾಕಲಾಗುತ್ತದೆ. ಜಲಪಾತಗಳನ್ನು ಪ್ರವಾಸಿಗರು ದೂರದಲ್ಲೇ ನೋಡಿ ಖುಷಿಪಡಬೇಕು’ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಬಿ.ರಾಮು ತಿಳಿಸಿದರು.

‘ಈ ಹಿಂದೆ ಇಲಾಖೆಯು ಸೆಲ್ಫಿ ನಿಷೇಧಿತ ವಲಯ, ಈಜು ನಿಷೇಧಿತ ಪ್ರದೇಶ, ಛಾಯಾಗ್ರಹಣ ನಿಷೇಧಿತ ಪ್ರದೇಶ ಎಂದೆಲ್ಲಾ ಫಲಕ ಹಾಕಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗಾಗಿ ಗಂಭೀರ ಅನಾಹುತಗಳಾಗಿವೆ’ ಎಂದು ಅವರು ಉದಾಹರಿಸಿದರು.

‘ರಾಜ್ಯದ 25 ಪ್ರಮುಖ ಜಲಪಾತಗಳಲ್ಲಿ ಈ ಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಗಗನಚುಕ್ಕಿ, ಭರಚುಕ್ಕಿ, ಜೋಗ ಮತ್ತು ಅಬ್ಬಿ ಜಲಪಾತಗಳಿಗೆ ತಡೆಬೇಲಿ ಹಾಕಲಾಗುತ್ತಿದೆ. ಕೆಲವೆಡೆ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಜಲಪಾತದ ಮಾರ್ಗ ವಿವರಣೆ, ಭೇಟಿಯ ಸಮಯ, ಸ್ಥಳ, ಇಲ್ಲಿ ಪಾಲಿಸಬೇಕಾದ ನಿಯಮಗಳು ಇತ್ಯಾದಿ ವಿವರಗಳನ್ನೊಳಗೊಂಡ ಫಲಕಗಳನ್ನೂ ಹಾಕಲಾಗುವುದು. ಜಲಪಾತದ ಬಳಿ ಕೆಲವೆಡೆ ಖಾಸಗಿಯವರಿಗೆ ಸೇರಿದ ಸ್ಥಳವಿದೆ. ಅಲ್ಲಿ ಕೆಲವು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಅಲ್ಲಿ ಸುರಕ್ಷತೆಯ ಹೊಣೆಯೂ ಖಾಸಗಿಯವರದ್ದೇ ಆಗಿರುತ್ತದೆ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲೂ ಏನೂ ಮಾಡಲಾಗುವುದಿಲ್ಲ’ ಎಂದು ಅವರು ಹೇಳಿದರು.

ಇಲಾಖೆಯ ಈ ನಿರ್ಧಾರಕ್ಕೆ ಪ್ರವಾಸಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಕ್ರಮವನ್ನು ಸ್ವಾಗತಿಸಿದರೆ, ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪೂರ್ಣ ಪ್ರಮಾಣದಲ್ಲಿ ತಡೆಬೇಲಿ ಹಾಕುವುದು ಸರಿಯಲ್ಲ. ಸುರಕ್ಷಿತ ಪ್ರದೇಶದಲ್ಲಿ ಜೀವರಕ್ಷಕ ಜಾಕೆಟ್‌ಗಳು ಮತ್ತು ರಕ್ಷಣಾ ತಜ್ಞರ ನೆರವಿನೊಂದಿಗೆ ನೀರಿಗಿಳಿಯಲು ಬಿಡಬೇಕು’ ಎಂದು ನೇಚರ್‌ ಅಡ್ಮೈರ್‌ ಅಡ್ವೆಂಚರ್‌ ಸಂಸ್ಥೆಯ ಸಂಸ್ಥಾಪಕ ದೇವ್‌ ಬಾಲಾಜಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT