ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಹರಡದಂತೆ ತಡೆಯಲು ಕ್ರಮ: ಈ ಬಾರಿಯೂ ನಿರ್ಬಂಧಿತ ಕರಗ

ಉತ್ಸವ ಸಮಿತಿ ರಚಿಸಲು ನಿರ್ಧಾರ
Last Updated 5 ಏಪ್ರಿಲ್ 2021, 14:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡಿರುವುದರಿಂದ, ಐತಿಹಾಸಿಕ ಕರಗ ಮಹೋತ್ಸವವನ್ನು ಈ ಬಾರಿಯೂ ನಿರ್ಬಂಧಿತ ವಾತಾವರಣದಲ್ಲಿ ನಡೆಸಲು ಸಿದ್ಧತೆ ನಡೆದಿದೆ.

ಕರಗ ಉತ್ಸವ ಆಚರಣೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆಯುಸೋಮವಾರ ನಡೆಯಿತು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಗೌರವ ಗುಪ್ತ, ‘ಕೋವಿಡ್‌ ಹರಡದಂತೆ ತಡೆಯಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ದೇವಸ್ಥಾನದ ಒಳಗೆ ಮಾತ್ರ ಕರಗ ಆಚರಿಸಲು ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

‘ಪ್ರತಿಷ್ಠಿತ ಕರಗ ಉತ್ಸವವನ್ನು ಹಿಂದಿನಿಂದಲೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಧಿವತ್ತಾದ ಪೂಜಾ ಕಾರ್ಯಗಳು ಹಾಗೂ ರಾತ್ರಿ ವೈಭವೋಪೇತ ಮೆರವಣಿಗೆ ನಡೆಸುವ ಪ್ರತೀತಿ ಇದೆ. ಕಳೆದ ವರ್ಷ ಕೋವಿಡ್ ಸೋಂಕು ವ್ಯಾಪಿಸಿದ್ದರಿಂದ ದೇವಸ್ಥಾನದಲ್ಲಿ ಮಾತ್ರ ಕರಗ ಆಚರಿಸಲು ಅನುಮತಿ ನೀಡಲಾಗಿತ್ತು. ಕಳೆದ ವರ್ಷ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿತ್ತು. ಆ ಸಮಿತಿಯವರೇ ಹಬ್ಬದ ಉಸ್ತುವಾರಿ ನೋಡಿಕೊಂಡಿದ್ದರು. ಈ ಬಾರಿ ವ್ಯವಸ್ಥಾಪನಾ ಸಮಿತಿ ಇಲ್ಲ. ಹಾಗಾಗಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ. ಉತ್ಸವ ಸಮಿತಿ ರಚಿಸಲು ನಗರ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಲಿದ್ದಾರೆ’ ಎಂದರು.

‘ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಕೆಲ ನಿಯಮ ಮತ್ತು ನಿರ್ಭಂಧಗಳನ್ನು ವಿಧಿಸಿದ್ದು, ಅದು ಏ. 20 ರವರೆಗೆ ಜಾರಿಯಲ್ಲಿರಲಿದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಿಬಂಧನೆಗಳನ್ನು ಬಿಗಿಗೊಳಿಸುವ ಅಗತ್ಯವಿದೆ. ಕೋವಿಡ್ ಹರಡುವಿಕೆಯ ಪರಿಸ್ಥಿತಿಯನ್ನು ನೋಡಿಕೊಂಡು, ಉತ್ಸವವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಯವರು ಹಾಗೂ ಉತ್ಸವ ಸಮಿತಿ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಈ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಈ ಉತ್ಸವ ಆಚರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಬಿ.ಗರುಡಾಚಾರ್, ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ಬಿಬಿಎಂಪಿಯ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಡಿ.ರಂದೀಪ್, ಮನೋಜ್ ಜೈನ್, ಜಂಟಿ ಆಯುಕ್ತರಾದ ವೀರಭದ್ರಸ್ವಾಮಿ, ಶಿವಸ್ವಾಮಿ, ಪಲ್ಲವಿ, ಪೊಲೀಸ್ ಅಧಿಕಾರಿಗಳು, ದೇವಸ್ಥಾನದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

***

‘ಏ. 19ರಿಂದ 27ರವರೆಗೆ ಕರಗ’

‘ಕರಗ ಉತ್ಸವ ನಡೆಯುವ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆ ಬಿ ವರ್ಗದ ದೇವಾಲಯಗಳಡಿಯಲ್ಲಿ ಬರಲಿದೆ. ಈ ಬಾರಿ ಇಲ್ಲಿನ ಕರಗ ಉತ್ಸವ ಏ. 19 ರಿಂದ 27 ರವರೆಗೆ ನಡೆಯಲಿದೆ. ಕೋವಿಡ್‌ ಸಂದರ್ಭದಲ್ಲೂ ಕರಗವನ್ನು ಅಚ್ಚುಕಟ್ಟಾಗಿ ನಡೆಸಲು ಉತ್ಸವ ಸಮಿತಿ ರಚಿಸುತ್ತೇವೆ. ಕೋವಿಡ್‌ ಹರಡುವಿಕೆಯ ಪರಿಸ್ಥಿತಿ ನೋಡಿಕೊಂಡು ಮುಜರಾಯಿ ಇಲಾಖೆಯ ಜೊತೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಿದ್ದೇವೆ’ ಎಂದು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT