ಗುರುವಾರ , ಅಕ್ಟೋಬರ್ 21, 2021
27 °C

‘ಚಿನ್ನಾ... ಚಿನ್ನಾ...’ ಎನ್ನುತ್ತಲೇ ಹನಿಟ್ರ್ಯಾಪ್ ಮಾಡಿದ ಯುವತಿ; ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತರಕಾರಿ ವ್ಯಾಪಾರಿಯೊಬ್ಬರನ್ನು ‘ಹನಿಟ್ರ್ಯಾಪ್‌’ ಜಾಲಕ್ಕೆ ಬೀಳಿಸಿ ಸುಲಿಗೆ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ಮೂವರನ್ನು ಮೈಕೊ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

‘ನೇಹಾ ಫಾತಿಮಾ, ತಸ್ಲೀಮ್ ಬಾಷಾ ಹಾಗೂ ಮೊಹಮ್ಮದ್ ಅರ್ಬಾಜ್ ಬಂಧಿತರು. 36 ವರ್ಷದ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹ 16 ಸಾವಿರ ನಗದು, ಕಾರು, ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತರಕಾರಿ ಮಳಿಗೆಯಲ್ಲಿ ಪರಿಚಯ; ‘ದೂರುದಾರ ತರಕಾರಿ ಮಳಿಗೆ ಇಟ್ಟುಕೊಂಡಿದ್ದಾರೆ. ಸೆ. 29ರಂದು ಮಳಿಗೆಗೆ ಬಂದಿದ್ದ ಆರೋಪಿ ನೇಹಾ ಫಾತಿಮಾ ಆತ್ಮಿಯವಾಗಿ ಮಾತನಾಡಿ ಪರಿಚಯಿಸಿಕೊಂಡಿದ್ದಳು. ಇಬ್ಬರು ಪರಸ್ಪರ ಮಾತುಕತೆ ನಡೆಸಿ, ಮೊಬೈಲ್ ನಂಬರ್ ವಿನಿಯಮ ಮಾಡಿಕೊಂಡಿದ್ದರು. ನಂತರ ಹಲವು ಬಾರಿ ಮೊಬೈಲ್‌ನಲ್ಲಿ ಮಾತನಾಡಿದ್ದರು. ಚಾಟಿಂಗ್ ಸಹ ಮಾಡುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

‘ಸಲುಗೆಯಿಂದ ಮಾತನಾಡುತ್ತಿದ್ದ ಮಹಿಳೆ, ಖಾಸಗಿಯಾಗಿ ಭೇಟಿಯಾಗೋಣವೆಂದು ಹೇಳಿದ್ದಳು. ಅದನ್ನು ನಂಬಿದ್ದ ದೂರುದಾರ, ಬಿಟಿಎಂ ಬಡಾವಣೆಯ 2ನೇ ಹಂತದ ಎನ್‌.ಎಸ್‌. ಪಾಳ್ಯ ಬಳಿ ಇರುವ ಕಟ್ಟಡವೊಂದರ 2ನೇ ಮಹಡಿಯಲ್ಲಿರುವ ಮನೆಗೆ ಹೋಗಿದ್ದರು. ಅವರನ್ನು ಸ್ವಾಗತಿಸಿ ಮನೆಯೊಳಗೆ ಕರೆದುಕೊಂಡಿದ್ದ ಮಹಿಳೆ, ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದಳು.’

‘ಇಬ್ಬರೂ ಸೇರಿ ಬಿಯರ್‌ ಕುಡಿಯಲಾರಂಭಿಸಿದ್ದರು. ಇದೇ ಸಂದರ್ಭದಲ್ಲೇ ಮಹಿಳೆ, ‘ಇದು ನನ್ನ ಮನೆ. ಇಲ್ಲಿ ಯಾರೂ ಬರುವುದಿಲ್ಲ. ಇಬ್ಬರೂ ಒಟ್ಟಿಗೆ ಸಮಯ ಕಳೆಯೋಣ. ಬಟ್ಟೆಗಳನ್ನು ಬಿಚ್ಚಿ’ ಎಂದಿದ್ದಳು. ಅದನ್ನು ನಂಬಿದ್ದ ದೂರುದಾರ, ಬಟ್ಟೆ ಬಿಚ್ಚಲಾರಂಭಿಸಿದ್ದರು.’

‘ಮೊದಲೇ ಸಂಚು ರೂಪಿಸಿದ್ದಂತೆ, ಇತರೆ ಆರೋಪಿಗಳು ಮನೆಗೆ ಬಂದು ಬಾಗಿಲು ಬಡಿದಿದ್ದರು. ಸಂತ್ರಸ್ತನೇ ಬಾಗಿಲು ತೆರೆದಿದ್ದರು. ಒಳನುಗ್ಗಿದ್ದ ಆರೋಪಿಗಳು, ‘ನನ್ನ ತಂಗಿ ಜೊತೆ ಏನು ಮಾಡುತ್ತಿದ್ದಿಯಾ? ಆಕೆಯ ಬಾಳು ಹಾಳು ಮಾಡಲು ಬಂದಿದಿಯಾ’ ಎಂದು ಹೆದರಿಸಿದ್ದರು. ನಂತರ, ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು’ ಎಂದೂ ಪೊಲೀಸರು ವಿವರಿಸಿದರು.

ಸುಲಿಗೆ ಮಾಡಿ, ₹ 10 ಲಕ್ಷಕ್ಕೆ ಬೇಡಿಕೆ: ‘ದೂರುದಾರ ಬಳಿ ಇದ್ದ ₹ 5 ಸಾವಿರ ನಗದು, ಮೊಬೈಲ್, ಎಟಿಎಂ ಕಾರ್ಡನ್ನು ಆರೋಪಿಗಳು ಕಿತ್ತುಕೊಂಡಿದ್ದರು. ಮೊಬೈಲ್‌ನಲ್ಲಿದ್ದ ಫೋನ್‌ ಪೇ ಆ್ಯಪ್‌ನಿಂದ ₹ 32 ಸಾವಿರ ವರ್ಗಾವಣೆ ಮಾಡಿಕೊಂಡಿದ್ದರು’ ಎಂದೂ ಪೊಲೀಸರು ಹೇಳಿದರು.

‘ನಿಮ್ಮ ವಿಡಿಯೊ ನಮ್ಮ ಬಳಿ ಇದೆ. ಅದನ್ನು ನಿಮ್ಮ ಸಂಬಂಧಿಕರಿಗೆ ಕಳುಹಿಸಿ ಹೆಸರು ಹಾಳು ಮಾಡುತ್ತೇವೆ. ಈ ರೀತಿ ಮಾಡಬಾರದೆಂದರೆ ₹ 10 ಲಕ್ಷ ತಂದುಕೊಡು’ ಎಂದೂ ಆರೋಪಿಗಳು ಬೇಡಿಕೆ ಇಟ್ಟಿದ್ದರು. ನಂತರ, ದೂರುದಾರ ತಂದಿದ್ದ ಕಾರಿನ ಸಮೇತ ಆರೋಪಿಗಳು ಪರಾರಿಯಾಗಿದ್ದರು’ ಎಂದೂ ವಿವರಿಸಿದರು.

‘ಸಂತ್ರಸ್ತ ದೂರು ನೀಡುತ್ತಿದ್ದಂತೆ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹನಿಟ್ರ್ಯಾಪ್ ಜಾಲ ಪತ್ತೆಯಾಯಿತು. ಸದ್ಯ ಮೂವರಷ್ಟೇ ಸಿಕ್ಕಿಬಿದ್ದಿದ್ದು, ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು