ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡಕ್ಕೆ ಮಣಿದ ಬಿಎಂಟಿಸಿ: ಇಂದಿನಿಂದ ಟಿಕೆಟ್

ಕಿಲೋ ಮೀಟರ್ ಆಧಾರದಲ್ಲಿ ಫ್ಲಾಟ್ ದರ ನಿಗದಿ
Last Updated 25 ಮೇ 2020, 20:02 IST
ಅಕ್ಷರ ಗಾತ್ರ

ಬೆಂಗಳೂರು: ದಿನದ ಪಾಸ್ ಬದಲಿಗೆಪ್ರಯಾಣಿಕರಿಗೆ ಈ ಹಿಂದಿನಂತೆ ಮಂಗಳವಾರದಿಂದ ಟಿಕೆಟ್ ವಿತರಿಸಲು ಬಿಎಂಟಿಸಿ ನಿರ್ಧರಿಸಿದೆ. ಅಲ್ಲದೇ, ಹಣ ಕೊಡುವುದು ಮತ್ತು ಚಿಲ್ಲರೆ ವಾಪಸ್ ಕೊಡುವುದನ್ನು ಕಡಿಮೆ ಮಾಡಲು ಕಿಲೋ ಮೀಟರ್ ಆಧಾರದಲ್ಲಿ ಫ್ಲಾಟ್‌ ದರ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಲಾಕ್‌ಡೌನ್ ಸಡಿಲದ ನಂತರ ಬಸ್ ಸಂಚಾರ ಆರಂಭಿಸಿದ್ದ ಬಿಎಂಟಿಸಿ, ಪ್ರಯಾಣಿಕರಿಂದ ₹70 ಪಡೆದು ದಿನದ ಪಾಸ್ ವಿತರಿಸುತ್ತಿತ್ತು. ₹10 ದರ ಇರುವ ದೂರಕ್ಕೂ ಪ್ರಯಾಣಿಕರು ₹70 ಪಾವತಿಸಬೇಕಾಗಿತ್ತು. ಇದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಸ್ಥೆಯು ಪ್ರಯಾಣಿಕರ ಸುಲಿಗೆ ಮಾಡುತ್ತಿದೆ ಎಂದು ಕಿಡಿಕಾರಿದ್ದರು.

ಟಿಕೆಟ್ ವಿತರಿಸುವ ಜತೆಗೆಫ್ಲಾಟ್ ದರ ವ್ಯವಸ್ಥೆ ತರಲು ಸರ್ಕಾರದಿಂದ ಒಪ್ಪಿಗೆ ಪಡೆದುಕೊಂಡಿದೆ. ಫ್ಲಾಟ್ ದರ ಎಂದರೆ ಪ್ರಯಾಣ ದರ ₹11 ಅಥವಾ ₹9 ಇದ್ದರೆ ಅದನ್ನು ₹10ಕ್ಕೆ ನಿಗದಿ ಮಾಡಲಾಗಿದೆ.

‘ಸ್ಟೇಜ್ ಲೆಕ್ಕದಲ್ಲಿ ಇದ್ದ ಪ್ರಯಾಣ ದರವನ್ನು ಕಿಲೋ ಮೀಟರ್ ಆಧಾರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ವಿವಿಧ 16 ಮೌಲ್ಯಗಳಲ್ಲಿ ಇದ್ದ ಪ್ರಯಾಣ ದವರನ್ನು 6 ಮೌಲ್ಯಗಳಿಗೆ ಇಳಿಸಲಾಗಿದೆ. ದರವು 5ರ ಗುಣಕದಲ್ಲಿ ಇರುವುದರಿಂದ ಚಿಲ್ಲರೆ ಸಮಸ್ಯೆ ಕಡಿಮೆಯಾಗಲಿದೆ. ಆಗಾಗ ಹಣ ಸ್ವೀಕರಿಸುವುದು, ವಾಪಸ್ ಕೊಡುವುದು ತಪ್ಪಲಿದೆ’ ಎಂದು ಬಿಎಂಟಿಸಿ ತಿಳಿಸಿದೆ.

‘ಮಂಗಳವಾರದಿಂದ 3,500 ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಒಂದು ಬಸ್‌ನಲ್ಲಿ ಗರಿಷ್ಠ 30 ಜನ ಪ್ರಯಾಣಿಸಬಹುದು. ನಿಂತು ಪ್ರಯಾಣಿಸಲು ಅವಕಾಶ ಇಲ್ಲ. ಪ್ರಯಾಣಿಕರು ಮುಖಗವಸು ಧರಿಸುವುದು ಮತ್ತು ಶುಚಿತ್ವ ಕಾಪಾಡುವುದು ಕಡ್ಡಾಯ. ಈ ಹಿಂದಿನಂತೆ ಮಾಸಿಕ, ವಾರದ ಮತ್ತು ದಿನದ ಪಾಸ್ ವ್ಯವಸ್ಥೆ ಮುಂದುವರಿಯಲಿದೆ’ ಎಂದು ಹೇಳಿದೆ.

ಪ್ರಯಾಣಿಕರ ವೇದಿಕೆ ಸ್ವಾಗತ:ಬಿಎಂಟಿಸಿ‍ಟಿಕೆಟ್ ವಿತರಿಸುವ ವ್ಯವಸ್ಥೆಯನ್ನು ಮರು ಜಾರಿ ಮಾಡಿರುವುದನ್ನು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸ್ವಾಗತಿಸಿದೆ.

’ಪ್ರಯಾಣ ದರವನ್ನು ಕಿಲೋ ಮೀಟರ್ ಆಧಾರದಲ್ಲಿ 5ರ ಗುಣಕದಲ್ಲಿ ನಿಗದಿ ಮಾಡಿರುವುದು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲಿದೆ. ₹5 ದರವನ್ನು ಕನಿಷ್ಠ 10 ಕಿಲೋ ಮೀಟರ್‌ಗೆ ನಿಗದಿ ಮಾಡುವುದು ಒಳ್ಳೆಯದು. ಬಿಎಂಟಿಸಿಗೆ ಸರ್ಕಾರ ಕೂಡ ಸೂಕ್ತ ಸಹಕಾರ ನೀಡಬೇಕು’ ಎಂದು ಹೇಳಿದೆ.

‘‍ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಪ್ರವೇಶದ್ವಾರದಲ್ಲೇ ಸ್ಯಾನಿಟೈಸರ್ ವಿತರಿಸುವ ವ್ಯವಸ್ಥೆ ಆಗಬೇಕು’ ಎಂದು ಒತ್ತಾಯಿಸಿದೆ.

ಡಿಜಿಟಲ್ ಟಿಕೆಟ್

ಎಲ್ಲಾ ಬಸ್‌ಗಳಲ್ಲೂ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ಸದ್ಯ ಈ ವ್ಯವಸ್ಥೆ 750 ಬಸ್‌ಗಳಲ್ಲಿ ಅಳವಡಿಕೆಯಾಗಿದೆ.ಮುಂದಿನ ಎರಡು ವಾರಗಳಲ್ಲಿ ಎಲ್ಲಾ ಬಸ್‌ಗಳಲ್ಲೂ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT