ಶನಿವಾರ, ಮಾರ್ಚ್ 6, 2021
21 °C

‘ಸ್ಕಿಮ್ಮರ್’ ಬಳಸಿ ಖಾತೆಗೆ ಕನ್ನ; ಚಿಲಿ ಪ್ರಜೆಗಳಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಟಿಎಂ ಘಟಕಗಳಲ್ಲಿ ಸ್ಕಿಮ್ಮರ್ ಉಪಕರಣ ಹಾಗೂ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕದ್ದು ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಚಿಲಿ ದೇಶದ ಪ್ರಜೆಗಳಿಬ್ಬರನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.

‘ನಗರದ ಹಲವು ಎಟಿಎಂ ಘಟಕಗಳಲ್ಲಿ ಆರೋಪಿಗಳು ಸ್ಕಿಮ್ಮರ್ ಅಳವಡಿಸಿ ಮಾಹಿತಿ ಕದ್ದು ಗ್ರಾಹಕರ ಖಾತೆಗೆ ಕನ್ನ ಹಾಕಿದ್ದರು. ಆ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಇದೇ 9ರವರೆಗೆ ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಮತ್ತಷ್ಟು ಮಾಹಿತಿ ತಿಳಿಯಲಿದೆ’ ಎಂದು ಮಾಹಿತಿ ನೀಡಿದರು.

ಸೆಕ್ಯುರಿಟಿ ಇಲ್ಲದ ಕಡೆ ಕೃತ್ಯ: ‘ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಘಟಕಗಳನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಹಣ ಡ್ರಾ ಮಾಡಿಕೊಳ್ಳುವ ನೆಪದಲ್ಲಿ ಬೆಳಿಗ್ಗೆ ಘಟಕಗಳಿಗೆ ಹೋಗಿ, ಸ್ಕಿಮ್ಮರ್ ಉಪಕರಣ ಅಳವಡಿಸುತ್ತಿದ್ದರು. ಸಂಜೆ ಪುನಃ ಹೋಗಿ ಉಪಕರಣ ವಾಪಸ್ ತರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಉಪಕರಣದಲ್ಲಿ ಸಂಗ್ರಹವಾಗುತ್ತಿದ್ದ ಕಾರ್ಡ್‌ಗಳ ಮಾಹಿತಿಯನ್ನು ಲ್ಯಾಪ್‌ಟಾಪ್‌ಗೆ ಅಪ್‌ಲೋಡ್‌ ಮಾಡಿ, ನಕಲಿ ಕಾರ್ಡ್‌ಗಳಿಗೆ ತುಂಬುತ್ತಿದ್ದರು. ನಂತರ ಆ ಕಾರ್ಡ್ ಬಳಸಿ ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಈ ಕೃತ್ಯದಲ್ಲಿ ಇನ್ನು ಹಲವರು ಭಾಗಿಯಾಗಿರುವ ಅನುಮಾನವಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದು ವಿವರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು