ಶುಕ್ರವಾರ, ಅಕ್ಟೋಬರ್ 29, 2021
20 °C
ರಾತ್ರಿ ಬಿರುಸು ಪಡೆದುಕೊಂಡ ವರ್ಷಧಾರೆ; ಜನಜೀವನ ಅಸ್ತವ್ಯಸ್ತ

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದೆಲ್ಲೆಡೆ ಭಾನುವಾರ ಗುಡುಗು, ಸಿಡಿಲು ಹಾಗೂ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮನೆಗಳಿಗೆ ನೀರು ನುಗ್ಗಿದ್ದರಿಂದ ತಗ್ಗು ಪ್ರದೇಶದ ನಿವಾಸಿಗಳು ರಾತ್ರಿಯಿಡೀ ಪಡಿಪಾಟಲು ಎದುರಿಸುವಂತಾಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣವಿತ್ತು. ಧಗೆಯಿಂದ ಜನ ಬಳಲಿದ್ದರು. ಬಳಿಕ ಆಗೊಮ್ಮೆ ಈಗೊಮ್ಮೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಿತು. ರಾತ್ರಿ 7 ಗಂಟೆಯ ಸುಮಾರಿಗೆ ಮಳೆ ಬಿರುಸು ಪಡೆದುಕೊಂಡಿತು.ಕೆಲವೆಡೆ ತಡರಾತ್ರಿವರೆಗೂ ವರುಣನ ಅಬ್ಬರ ಮುಂದುವರಿಯಿತು.

ಮನೆಗಳಿಗೆ ನುಗ್ಗಿದ ನೀರು: ಮೈಸೂರು ರಸ್ತೆ ಬ್ಯಾಟರಾಯನಪುರ ಸಮೀಪವಿರುವ ಗಣಪತಿ ನಗರದ ಎರಡನೇ ಅಡ್ಡ ರಸ್ತೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಮಹಿಳೆಯರು ಹಾಗೂ ಮಕ್ಕಳು ಪ್ಲಾಸ್ಟಿಕ್‌ ಮಗ್ಗು ಹಾಗೂ ಬಕೆಟ್‌ಗಳಲ್ಲಿ ನೀರು ತುಂಬಿ ಹೊರ ಹಾಕುತ್ತಿದ್ದ ದೃಶ್ಯ ಕಂಡುಬಂತು. ಪ್ರಮೋದ ಲೇಔಟ್‌ನ ವಸತಿ ಸಮುಚ್ಚಯವೊಂದರ ನೆಲ ಮಹಡಿಗೆ ನೀರು ನುಗ್ಗಿತ್ತು.
ಕೆಲವೆಡೆ ಚರಂಡಿಯ ತ್ಯಾಜ್ಯ ನೀರು ಮನೆಗೆ ನುಗ್ಗಿತ್ತು. ನೀರಿನಲ್ಲಿ ವಾಹನಗಳೂ ಸಿಲುಕಿಕೊಂಡಿದ್ದವು.

ಮರ ಬಿದ್ದು ಸಂಚಾರ ಅಸ್ತವ್ಯಸ್ತ: ಮಲ್ಲೇಶ್ವರದ ಚಿತ್ತಾಪುರ ಮಠದ ಬಳಿ ಭಾರಿ ಗಾತ್ರದ ಮರವೊಂದು ಧರೆಗೆ ಉರುಳಿತ್ತು. ಇದರಿಂದಾಗಿ
ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ಹಾಗೂ ಬಿಬಿಎಂಪಿಯ ತಂಡ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿತು.

ಸಂಜೆ ವೇಳೆ ದಿಢೀರ್‌ ಸುರಿದ ಮಳೆಯಿಂದಾಗಿ ರಕ್ಷಣೆ ಪಡೆಯಲು ಬೈಕ್‌ ಸವಾರರು ಬಸ್‌ ತಂಗುದಾಣ, ಅಂಡರ್‌ಪಾಸ್‌ಗಳ ಬದಿಯಲ್ಲಿ ನಿಂತಿದ್ದ ದೃಶ್ಯ ಕಂಡುಬಂದವು. ಕಚೇರಿಯಿಂದ ಮನೆಗೆ ಹೊರಟಿದ್ದ ಕೆಲವರೂ ಮಳೆಗೆ ಸಿಲುಕಿದರು. 

ಶ್ರೀನಿವಾಸನಗರ, ಗಿರಿನಗರ, ಮಲ್ಲೇಶ್ವರ, ಶ್ರೀನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌, ವಿಜಯನಗರ, ಯಶವಂತಪುರ, ಆರ್‌.ಟಿ.ನಗರ, ಹೊಸಕೆರೆಹಳ್ಳಿ, ಸಂಜಯನಗರ, ಇಂದಿರಾನಗರ, ಪೀಣ್ಯ, ಹೆಬ್ಬಾಳ, ಕೋರಮಂಗಲ, ಜೆ.ಪಿ.ನಗರ, ಎಂ.ಜಿ.ರಸ್ತೆ, ಎಚ್‌ಎಎಲ್‌, ಹೆಣ್ಣೂರು, ಎಚ್‌ಎಸ್‌ಆರ್‌ ಬಡಾವಣೆ, ಪುಟ್ಟೇನಹಳ್ಳಿ, ಕೆಂಗೇರಿ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಮಳೆಯ ಅಬ್ಬರವಿತ್ತು. ರಾಜರಾಜೇಶ್ವರಿ ನಗರ, ಜಯನಗರ, ಸದಾಶಿವನಗರ, ಶಾಂತಿನಗರ, ಹಲಸೂರು ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯಿತು. ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದ ದೃಶ್ಯವೂ ಅಲ್ಲಲ್ಲಿ ಕಂಡುಬಂತು.

ವಾಹನ ದಟ್ಟಣೆ: ಜೋರು ಮಳೆಯಿಂದಾಗಿ ಎಂ.ಜಿ.ರಸ್ತೆ, ಮೆಜೆಸ್ಟಿಕ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲವೆಡೆ ವಿದ್ಯುತ್‌ ಕೈ ಕೊಟ್ಟಿದ್ದರಿಂದ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು