ಸೋಮವಾರ, ಡಿಸೆಂಬರ್ 6, 2021
27 °C

ಸಾಲ ಕೊಡದಿದ್ದಕ್ಕೆ ಕೈ– ಕಾಲು ಕಟ್ಟಿ ಸುಲಿಗೆ; ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಲ ನೀಡಲಿಲ್ಲವೆಂಬ ಕಾರಣಕ್ಕೆ ಎಲ್‌ಐಸಿ ಹೌಸಿಂಗ್ ಕಂಪನಿ ವ್ಯವಸ್ಥಾಪಕರ ಮನೆಗೆ ನುಗ್ಗಿ, ಮನೆಯಲ್ಲಿದ್ದ ಮಹಿಳೆಯ ಕೈ–ಕಾಲು ಕಟ್ಟಿ ಹಾಕಿ ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

‘ವಿ.ಬಿ. ಲೇಔಟ್‌ನ ಶಿವಕುಮಾರ್ ಅಲಿಯಾಸ್ ಮನೋಜ್ (37), ಅತಿಥಿ ಬಡಾವಣೆಯ ಸಿದ್ದಾರ್ಥ (25) ಮತ್ತು ಡೇವಿಡ್ ಅಲಿಯಾಸ್ ಬುದ್ಧ ನೇಷನ್ (32) ಬಂಧಿತರು. ಆರೋಪಿಗಳಿಂದ ₹ 6.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ವೈಟ್‌ಫೀಲ್ಡ್ ಡಿಸಿಪಿ ದೇವರಾಜು ತಿಳಿಸಿದರು.

‘ತಮಿಳುನಾಡಿನ ಶಿವಕುಮಾರ್, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ವೇಳೆ ಕೆಲಸ ಹೋಗಿತ್ತು. ತನ್ನ ಐಷಾರಾಮಿ ಜೀವನಕ್ಕಾಗಿ ಹಲವರಿಂದ ₹ 10 ಲಕ್ಷ ಸಾಲ ಮಾಡಿದ್ದ. ಅದನ್ನು ತೀರಿಸಲು ಸ್ನೇಹಿತರೊಬ್ಬರ ಮೂಲಕ ಎಲ್‌ಐಸಿ ಹೌಸಿಂಗ್ ಕಂಪನಿಯ ವ್ಯವಸ್ಥಾಪಕ ಭಾಸ್ಕರ್ ಎಂಬುವರನ್ನು ಸಂಪರ್ಕಿಸಿದ್ದರು. ಆದರೆ, ಅವರು ಸಾಲ ಕೊಟ್ಟಿರಲಿಲ್ಲ. ಅವಾಗಲೇ ತನ್ನದೇ ಊರಿನ ಸಿದ್ಧಾರ್ಥ ಹಾಗೂ ಡೇವಿಡ್ ಜೊತೆ ಸೇರಿ ಕೃತ್ಯ ಎಸಗಿದ್ದ’ ಎಂದೂ ಹೇಳಿದರು.

‘ಆ. 19ರಂದು ಮದ್ಯ ಕುಡಿದಿದ್ದ ಆರೋಪಿಗಳು, ಕೋರಿಯರ್ ಬಾಯ್ ಸೋಗಿನಲ್ಲಿ ಭಾಸ್ಕರ್ ಅವರ ಮನೆಗೆ ನುಗ್ಗಿದ್ದರು. ಆದರೆ, ಅವರು ಮನೆಯಲ್ಲಿ ಇರಲಿಲ್ಲ. ಪತ್ನಿ ಮಾತ್ರ ಇದ್ದರು. ಅವರ ಕೈ–ಕಾಲು ಕಟ್ಟಿ ಹಾಕಿದ್ದ ಆರೋಪಿಗಳು. ಮನೆಯಲ್ಲಿದ್ದ ₹ 1.60 ಲಕ್ಷ ರೂ. ನಗದು ಹಾಗೂ 170 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾಗಿದ್ದರು. ಸಿಸಿಟಿವಿ ಕ್ಯಾಮರಾದಿಂದ ಸಿಕ್ಕ ಸುಳಿವು ಆಧರಿಸಿ ತಮಿಳುನಾಡಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು