ಮಂಗಳವಾರ, ಏಪ್ರಿಲ್ 20, 2021
27 °C

ಕಂಬಳಕ್ಕೆ ಪ್ರವಾಸೋದ್ಯಮ ಸ್ಪರ್ಶ: ಬೆಂಗಳೂರಿಗರಿಗೆ ವಿಶೇಷ ಪ್ಯಾಕೇಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತುಳುನಾಡಿನ ಸಾಂಸ್ಕೃತಿಕ ಕಲೆಯಾದ ಕಂಬಳಕ್ಕೆ ಪ್ರವಾಸೋದ್ಯಮ ಸ್ಪರ್ಶ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಜನರೂ ಕಂಬಳ ರೋಮಾಂಚನವನ್ನು ಅನುಭವಿಸಲು ವಿಶೇಷ ಟೂರ್‌ ಪ್ಯಾಕೇಜ್‌ ಸಿದ್ಧವಾಗಿದೆ.

ಮೊದಲ ಹಂತವಾಗಿ ಬೆಂಗಳೂರಿನ 10 ಜನ ಕಂಬಳ ಪ್ರಿಯರು ಈಗಾಗಲೇ ಟಿಕೆಟ್‌ ಬುಕ್‌ ಮಾಡಿದ್ದು, ಮಾರ್ಚ್‌ 6 ರಂದು ನಗರದಲ್ಲಿ ನಡೆಯುವ ರಾಮ–ಲಕ್ಷ್ಮಣ ಜೋಡುಕರೆ ಕಂಬಳವನ್ನು ವೀಕ್ಷಿಸಲಿದ್ದಾರೆ.

ಅರ್ಜುನ್‌ ಟೂರ್‌ ಆಂಡ್‌ ಟ್ರಾವೆಲ್ ಸಂಸ್ಥೆಯ ಈ ಪ್ಯಾಕೇಜ್‌ ಆರಂಭಿಸಿದೆ. ‘ನನ್ನ ಸ್ನೇಹಿತರೊಬ್ಬರು ಇತ್ತೀಚೆಗೆ ನನಗೆ ಕಂಬಳದ ಫೋಟೊಗಳನ್ನು ಕಳುಹಿಸಿದ್ದರು. ಕೂಡಲೇ ಕರಾವಳಿ ಕರ್ನಾಟಕದ ಈ ಕಲೆಯನ್ನು ರಾಜ್ಯ, ದೇಶದ ವಿವಿಧ ಭಾಗಗಳ ಜನರು, ವಿದೇಶಿಗರಿಗೂ ಪರಿಚಯಿಸಬೇಕು ಎನ್ನುವ ಆಲೋಚನೆ ಮೂಡಿತ್ತು. ಈ ಬಗ್ಗೆ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್‌ ಚೌಟ ಅವರನ್ನು ಸಂಪರ್ಕಿಸಿದೆ. ನಂತರ ಎರಡು ದಿನಗಳ ಕಂಬಳ ಪ್ಯಾಕೇಜ್‌ ಆರಂಭಿಸಿದೆ’ ಎನ್ನುತ್ತಾರೆ ಸಂಸ್ಥೆಯ ರವಿ ಎಂ.

‘ಆರಂಭದಲ್ಲಿ ಅನೇಕರು ಟಿಕೆಟ್ ಬುಕ್‌ ಮಾಡಿದ್ದರು. ಆದರೆ, ಕೋವಿಡ್–19 ಪ್ರಕರಣಗಳು ಹೆಚ್ಚಿದ್ದರಿಂದ ಹಲವರು ಟಿಕೆಟ್‌ ರದ್ದು ಮಾಡಿದರು. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಅವರಿಗೂ ಮನವಿ ಮಾಡಿದ್ದು, ಕಂಬಳಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

‘ಬೆಂಗಳೂರಿನ ಜನರಿಗೆ ಇರುವ ಎರಡು ದಿನಗಳ ಪ್ಯಾಕೇಜ್‌ನಲ್ಲಿ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶವೂ ಇದೆ. ಮಾ.6 ರಂದು ಬೆಳಿಗ್ಗೆ ಬೆಂಗಳೂರಿನಿಂದ ಪ್ರವಾಸಿಗರು ಹೊರಡಲಿದ್ದು, ಸಂಜೆ ಕಂಬಳ ವೀಕ್ಷಣೆ ಮಾಡಲಿದ್ದಾರೆ. ಮರುದಿನ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಮತ್ತೆ ಬೆಂಗಳೂರಿಗೆ ಮರಳಲಿದ್ದಾರೆ’ ಎಂದು ರವಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು