ಬುಧವಾರ, ಆಗಸ್ಟ್ 10, 2022
23 °C
ಸಮಯ ವಿಸ್ತರಿಸಿದ್ದರೂ ಮೊದಲಿನಷ್ಟೇ ವ್ಯಾಪಾರ: ಸಣ್ಣ ವರ್ತಕರು l ವ್ಯಾಪಾರಕ್ಕೆ ಸಂಜೆಯವರೆಗೆ ಅವಕಾಶಕ್ಕೆ ಒತ್ತಾಯ

ದಟ್ಟಣೆ ಕಡಿಮೆ, ವ್ಯಾಪಾರವೂ ನಿಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಅಗತ್ಯ ವಸ್ತುಗಳ ಮಾರಾಟ ಸಮಯವನ್ನು ವಿಸ್ತರಿಸಿರುವುದರಿಂದ ಮಾರುಕಟ್ಟೆಗಳಲ್ಲಿ ಬುಧವಾರ ಎಂದಿನ ದಟ್ಟಣೆ ಕಂಡು ಬರಲಿಲ್ಲ. ಮಧ್ಯಾಹ್ನದವರೆಗೆ ಸಮಯವಿದ್ದುದರಿಂದ ಜನರು ನಿರಾಳರಾಗಿ ಬಂದು ಹೂವು, ಹಣ್ಣು, ತರಕಾರಿ ಖರೀದಿಸಿದರು.

‘ಮೊದಲು ಹತ್ತು ಗಂಟೆಯವರೆಗೆ ಮಾತ್ರ ಅವಕಾಶವಿದ್ದುದರಿಂದ ಪ್ರಮುಖ ಮಾರುಕಟ್ಟೆಗೆ ಹೋಗಲು ಸಮಯವಾಗುತ್ತಿರಲಿಲ್ಲ. ಮನೆಯ ಸಮೀಪವಿದ್ದ ಅಂಗಡಿಗಳಿಗೆ, ತರಕಾರಿ ಮಳಿಗೆಗಳಿಗೆ ಹೋಗಲೇಬೇಕಾಗಿತ್ತು. ಬೆಲೆಯೂ ಹೆಚ್ಚಾಗುತ್ತಿತ್ತು. ಈಗ ಯಶವಂತಪುರದಲ್ಲಿನ ದೊಡ್ಡ ಮಾರುಕಟ್ಟೆಗೇ ಹೋಗಿ ಬಂದೆ. ತರಕಾರಿ ಬೆಲೆ ಕಡಿಮೆ ಎನಿಸಿತು, ಹೆಚ್ಚು ದಟ್ಟಣೆಯೂ ಇರಲಿಲ್ಲ’ ಎಂದು ಆರ್.ಟಿ. ನಗರದ ಗೋವಿಂದ್ ‘ಪ್ರಜಾವಾಣಿ‘ಗೆ ತಿಳಿಸಿದರು.

‘ನಾನು ಮೊದಲು 7 ಅಥವಾ 8 ಗಂಟೆಯಷ್ಟೊತ್ತಿಗೆ ಮಾರುಕಟ್ಟೆಗೆ ಹೋದರೆ ಕಾಲಿಡಲು ಜಾಗವಿಲ್ಲದಷ್ಟು ಜನರು ಇರುತ್ತಿದ್ದರು. ಲಾಕ್‌ಡೌನ್‌ ಉದ್ದೇಶವೇ ಆಗ ಈಡೇರುತ್ತಿರಲಿಲ್ಲ. ಈಗ ಸಮಯ ಇರುವುದರಿಂದ 11.30ರ ವೇಳೆಗೆ ಮಾರುಕಟ್ಟೆಗೆ ಹೋದೆ. ಬೆರಳೆಣಿಕೆಯಷ್ಟು ಜನರು ಇದ್ದರು’ ಎಂದು ಕೆಂಗೇರಿಯ ನಿವಾಸಿ ಮಹಾಂತೇಶ್‌ ಹೇಳಿದರು.

‘ಮಧ್ಯಾಹ್ನದವರೆಗೂ ಸಮಯ ಇದ್ದರೂ, 10 ಗಂಟೆಯವರೆಗೆ ಎಷ್ಟು ವ್ಯಾಪಾರವಾಗುತ್ತಿತ್ತೋ ಅಷ್ಟೇ ಆಗಿದೆ. ಹೆಬ್ಬಾಳ, ಲಾಲ್‌ಬಾಗ್ ಸುತ್ತ–ಮುತ್ತ, ಪುಲಿಕೇಶಿ ನಗರ, ಸಿ.ವಿ.ರಾಮನ್‌ ನಗರದಲ್ಲಿಯೂ ಅಷ್ಟೇ ವ್ಯಾಪಾರವಾಗಿದೆ. ಮೊದಲು, ಅವಸರದಲ್ಲಿ ಬರುತ್ತಿದ್ದ ಜನ, ಈಗ ತಮಗೆ ಸಮಯ ಸಿಕ್ಕಾಗ ಬಂದು ಹೋಗುತ್ತಿದ್ದಾರೆ’ ಎಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಕೇಶವಮೂರ್ತಿ ಹೇಳಿದರು.

‘ಹೋಟೆಲ್‌ಗಳ ಕಾರ್ಯನಿರ್ವಹಣೆಗೂ ಈಗ ಅವಕಾಶ ನೀಡಿರುವುದರಿಂದ ಸಗಟು ದರದಲ್ಲಿ ತರಕಾರಿ ಕೊಳ್ಳಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೂ, 10 ಗಂಟೆಗಿಂತ ಮೊದಲು ಬರುತ್ತಿದ್ದವರಿಗಿಂತ ಕಡಿಮೆ ಇದೆ. ಹೀಗಾಗಿ, ಅಂತರ ನಿಯಮ ಪಾಲನೆ ಸುಲಭವಾಗಿದೆ’ ಎಂದು ಕೆ.ಆರ್. ಮಾರುಕಟ್ಟೆಯ ವರ್ತಕ ಶ್ರೀಧರ್‌ ತಿಳಿಸಿದರು. 

ಎಲ್ಲರಿಗೂ ಅವಕಾಶ ನೀಡಿ: ‘ಈಗ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೂವು–ಹಣ್ಣು, ತರಕಾರಿ ಮಾರುವವರೇ ಶೇ 75ರಷ್ಟು ಇದ್ದಾರೆ. ಆದರೆ, ಬೀದಿ ಬದಿ ಬಜ್ಜಿ, ಬೋಂಡ, ಗೋಬಿ ಮಂಚೂರಿ, ಪಾನಿಪೂರಿ ಮಾರುವವರಿಗೆ, ಬಟ್ಟೆ, ಪ್ಲಾಸ್ಟಿಕ್ ವಸ್ತು ಮಾರಾಟ ಮಾಡುವವರ ಸಂಖ್ಯೆ ಶೇ 25 ಮಾತ್ರ.  ಇವರಿಗೂ ಅವಕಾಶ ನೀಡಿದರೆ ಅನುಕೂಲವಾಗುತ್ತದೆ’ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಇ. ರಂಗಸ್ವಾಮಿ ಹೇಳಿದರು. 

’ಬಹಳಷ್ಟು ಜನ 10 ಗಂಟೆಗೆ ಕಚೇರಿ ಕೆಲಸಕ್ಕೆ ಹೊರಡುತ್ತಾರೆ. ಅವರು ಮರಳುವುದೇ ಸಂಜೆ. ರಾತ್ರಿ 8 ಗಂಟೆಯವರೆಗಾದರೂ ಅವಕಾಶ ನೀಡಬೇಕು. ಹೆಚ್ಚು ಸಮಯ ಇರುವುದರಿಂದ ಜನರೂ ಗುಂಪುಗೂಡುವುದಿಲ್ಲ. ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುತ್ತೇವೆ’ ಎಂದೂ ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು