ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಪೊಲೀಸರ ಚೌಕಿಗೆ ‘ತುಕ್ಕು’

Last Updated 20 ಜೂನ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಿತ್ತು ಹೋದ ಚಾವಣಿ. ತುಕ್ಕು ಹಿಡಿದ ಕಬ್ಬಿಣ. ಹರಿದು ಹೋದ ಬ್ಯಾನರ್. ಬಿಸಿಲಿನಲ್ಲಿ ಬೆಂದು ಮಳೆಯಲ್ಲಿ ನೆನೆದುಕೊಂಡೇ ಕೆಲಸ ಮಾಡುವ ಸಂಚಾರ ಪೊಲೀಸರು.

ಇದು ಸಿಲಿಕಾನ್ ಸಿಟಿಯ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಪೊಲೀಸರ ಚೌಕಿಗಳ ಸ್ಥಿತಿ. ನಗರದಲ್ಲಿ ಸಂಚಾರ ವ್ಯವಸ್ಥೆ ನಿರ್ವಹಣೆ ಮಾಡುವ ಪೊಲೀಸರಿಗಾಗಿ ಪ್ರಮುಖ ವೃತ್ತಗಳಲ್ಲಿ ಚೌಕಿಗಳನ್ನು ನಿರ್ಮಿಸಲಾಗಿದೆ. ನಿರ್ವಹಣೆ ಕೊರತೆಯಿಂದ ಆ ಚೌಕಿಗಳು ತುಕ್ಕು ಹಿಡಿದು ಹಾಳಾಗಿದ್ದು, ಹೊಸ ಚೌಕಿಗಳ ನಿರ್ಮಾಣಕ್ಕೆ ಇಲಾಖೆ ಹಿರಿಯ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪವಿದೆ.

ಶಾಂತಿನಗರ ರಸ್ತೆ, ರಿಚ್ಮಂಡ್ ವೃತ್ತ ಸೇರಿದಂತೆ ಹಲವೆಡೆ ಇರುವ ಚೌಕಿಗಳು ಬಹುತೇಕ ಹಾಳಾಗಿವೆ. ಅಂಥ ಚೌಕಿಗಳಲ್ಲಿ ಕುಳಿತು ಅನಿವಾರ್ಯವಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮಳೆಗಾಲ ಶುರುವಾಗಿರುವುದು ಪೊಲೀಸರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

‘ವೃತ್ತಗಳಲ್ಲಿ ವಾಹನಗಳ ಸಂಚಾರ ನಿರ್ವಹಣೆಗೆಂದು ನಿತ್ಯವೂ ನಮ್ಮನ್ನು ನಿಯೋಜಿಸಲಾಗುತ್ತದೆ. ಹೆಚ್ಚು ದಟ್ಟಣೆ ಇದ್ದಾಗ ವೃತ್ತಗಳಲ್ಲಿ ನಿಂತು ವಾಹನಗಳ ಸಂಚಾರಕ್ಕೆ ದಾರಿ ಮಾಡಿಕೊಡುತ್ತೇವೆ. ದಟ್ಟಣೆ ಕಡಿಮೆ ಇದ್ದಾಗ ಚೌಕಿಯಲ್ಲಿ ಕುಳಿತು ಸಿಗ್ನಲ್‌ ನಿರ್ವಹಣೆ ಮಾಡುತ್ತೇವೆ. ಸದ್ಯದ ಚೌಕಿಗಳು ಹಾಳಾಗಿದ್ದು, ಯಾವಾಗ ಏನಾಗುತ್ತದೆ ಎಂಬ ಭಯವಿದೆ’ ಎಂದು ಸಂಚಾರ ಪೊಲೀಸ್ ಸಿಬ್ಬಂದಿ ಹೇಳಿದರು.

ಹಿರಿಯ ಅಧಿಕಾರಿಗಳು ಗಮನ ಹರಿಸಲಿ: ‘ಸಂಚಾರ ಪೊಲೀಸರಿಗಾಗಿ ನಿರ್ಮಿಸಿರುವ ಚೌಕಿಗಳ ಸ್ಥಿತಿ ಚಿಂತಾಜನಕವಾಗಿದೆ. ‘ಸ್ವಚ್ಛ ಭಾರತ ಅಭಿಯಾನ’ ಎಂದು ಹೇಳಿಕೊಂಡು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಓಡಾಡುತ್ತಾರೆ. ಇಲ್ಲಿ ಚೌಕಿಗಳು ಗಲೀಜಾಗಿದ್ದು, ಅದರ ಸ್ವಚ್ಛತೆಗೆ ಮಾತ್ರ ಗಮನಹರಿಸುತ್ತಿಲ್ಲ’ ಎಂದು ಬರಹಗಾರ ಕಿಕ್ಕೇರಿ ಚಂದ್ರಶೇಖರ್‌ ಹೇಳಿದರು.

‘ಇಂಥ ಚೌಕಿಗಳಲ್ಲಿ ಪ್ರಾಣಿಗಳು ಸಹ ಮಲಗುವುದಿಲ್ಲ. ಕೂಡಲೇ ಚೌಕಿಗಳ ಸುಧಾರಣೆಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

‘ಹೊಸ ವಿನ್ಯಾಸದ ಚೌಕಿ ನಿರ್ಮಾಣ’
‘ಚೌಕಿಗಳ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಸಹಯೋಗದಲ್ಲಿ ಹೊಸ ವಿನ್ಯಾಸದಲ್ಲಿ ಚೌಕಿಗಳನ್ನು ಆದಷ್ಟು ಬೇಗ ನಿರ್ಮಾಣ ಮಾಡಲಾಗುವುದು’ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಜಗದೀಶ್ ಹೇಳಿದರು.

‘ಈ ಹಿಂದೆ ಬೇರೆ ಕಂಪನಿಗಳ ಪ್ರಾಯೋಜಕತ್ವದಲ್ಲಿ ಚೌಕಿಗಳನ್ನು ಹಾಕಲಾಗುತ್ತಿತ್ತು. ಈ ಬಾರಿ ಅಂಥ ಯಾವುದೇ ಪ್ರಾಯೋಜಕತ್ವ ತೆಗೆದುಕೊಳ್ಳುವುದು ಬೇಡವೆಂದು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT