70 ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ: ₹ 15,400 ದಂಡ ವಸೂಲಿ

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಓಡಾಡಿ 70 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಮಂಜುನಾಥ್ ಎಂಬುವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
‘ಲಗ್ಗೆರೆ ನಿವಾಸಿ ಆಗಿರುವ ಮಂಜುನಾಥ್ ವರ್ಷದ ಹಿಂದಷ್ಟೇ ವಾಹನ ಖರೀದಿಸಿ, ತಂದೆ ಹೆಸರಿಗೆ ನೋಂದಣಿ ಮಾಡಿಸಿದ್ದರು. ಅವರಿಂದ ₹15,400 ದಂಡ ವಸೂಲಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ತರಕಾರಿ ವ್ಯಾಪಾರ ಮಾಡುತ್ತಿದ್ದ ಮಂಜುನಾಥ್ ಹೆಲ್ಮೆಟ್ ಧರಿಸದೆ ವಾಹನ ಓಡಿಸಿಕೊಂಡು ಮಹಾಲಕ್ಷ್ಮೀ ಲೇಔಟ್ ಸಮೀಪ ಹೊರಟಿದ್ದರು. ಅಲ್ಲಿಯೇ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ರಾಜಾಜಿನಗರ ಸಂಚಾರ ಠಾಣೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ ರವೀಂದ್ರ ಕೈಗೆ ಸಿಕ್ಕಿಬಿದ್ದಿದ್ದರು. ವಾಹನದ ನೋಂದಣಿ ಸಂಖ್ಯೆ ಆಧರಿಸಿ ಉಪಕರಣದಲ್ಲಿ ಪರಿಶೀಲಿಸಿದಾಗ 70 ಬಾರಿ ನಿಯಮ ಉಲ್ಲಂಘಿಸಿದ್ದು ಗೊತ್ತಾಗಿತ್ತು.’
‘ದಂಡ ಪಾವತಿ ಮಾಡುವಂತೆ ಹೇಳಿ ಚಾಲಕನಿಗೆ ನೋಟಿಸ್ ನೀಡಿ ವಾಹನ ಜಪ್ತಿ ಮಾಡಲಾಗಿತ್ತು. ಶನಿವಾರ ಬೆಳಗ್ಗೆ ಠಾಣೆಗೆ ಬಂದ ಮಂಜುನಾಥ್ ದಂಡ ಪಾವತಿಸಿದ್ದಾರೆ. ಸಂಚಾರ ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಿ ವಾಹನ ಬಿಡುಗಡೆ ಮಾಡಿದ್ದೇನೆ’ ಎಂದು ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.