ಮಂಗಳವಾರ, ಜೂನ್ 28, 2022
25 °C

ಲಾಕ್‌ಡೌನ್‌ ಸಡಿಲಿಕೆ: ರಾಜಧಾನಿಯತ್ತ ಜನ, ವಿಪರೀತ ದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್‌. ವೃತ್ತದಲ್ಲಿ ಶುಕ್ರವಾರ ಸಂಚಾರ ದಟ್ಟಣೆ ಕಂಡುಬಂತು – ಪ್ರಜಾವಾಣಿ ಚಿತ್ರ

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಸಾವಿರಾರು ಮಂದಿ ರಾಜಧಾನಿ ಬೆಂಗಳೂರಿನತ್ತ ವಾಪಸು ಬರುತ್ತಿದ್ದಾರೆ.

ಅಗತ್ಯ ಸೇವೆಗಳಿಗೆ ಅವಕಾಶ ನೀಡಿರುವ ಸಮಯದಲ್ಲೇ ಸಾವಿರಾರು ವಾಹನಗಳು ನಗರ ಪ್ರವೇಶಿಸುತ್ತಿವೆ. ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಹಾಗೂ ಮಾಗಡಿ ರಸ್ತೆ ಮೂಲಕ ಜನರು ನಗರದೊಳಗೆ ಸೇರುತ್ತಿದ್ದಾರೆ.

ದ್ವಿಚಕ್ರ ವಾಹನ, ಆಟೊ, ಗೂಡ್ಸ್ ವಾಹನ ಹಾಗೂ ಕಾರುಗಳ ಮೂಲಕ ವಸ್ತುಗಳ ಸಮೇತ ಜನ ನಗರಕ್ಕೆ ಬರುತ್ತಿರುವ ದೃಶ್ಯಗಳು ಶುಕ್ರವಾರ ಸಾಮಾನ್ಯವಾಗಿದ್ದವು. ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ಹೋಗಲು ಅವಕಾಶವಿದೆ. ಅದೇ ನೆಪದಲ್ಲಿ ಜನರು ನಗರದಲ್ಲಿ ಪ್ರಯಾಣಿಸುತ್ತಿದ್ದಾರೆ.

ನಗರದ ಹೊರವಲಯದಲ್ಲಿರುವ ಟೋಲ್‌ಗೇಟ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ‘ಕೆಲದಿನ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಗುರುವಾರದಿಂದ ವಾಹನಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ’ ಎಂದು ಟೋಲ್‌ಗೇಟ್ ಸಿಬ್ಬಂದಿ ಹೇಳಿದರು.

ಕೊರೊನಾ ಸೋಂಕು ಹೆಚ್ಚಾಗಿ ಲಾಕ್‌ಡೌನ್‌ ಜಾರಿಯಾದ ವೇಳೆಯಲ್ಲಿ ಲಕ್ಷಾಂತರ ಮಂದಿ ಬೆಂಗಳೂರು ತೊರೆದಿದ್ದರು. ಇದೀಗ  ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದ್ದು, ನಗರಕ್ಕೆ ವಾಪಸು ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ದಟ್ಟಣೆ ಕಂಡು ಪೊಲೀಸರೂ ಮೌನ: ನಗರದ ಮೆಜೆಸ್ಟಿಕ್, ಪೀಣ್ಯ, ಟಿ–ದಾಸರಹಳ್ಳಿ, ಯಶವಂತಪುರ, ಚಾಮರಾಜಪೇಟೆ, ಶಿವಾಜಿನಗರ, ಕೋರಮಂಗಲ, ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಶುಕ್ರವಾರ ವಾಹನಗಳ ಓಡಾಟ ಹೆಚ್ಚಿತ್ತು.

ನಗರದ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿದೆ. ಅದರ ಕೆಳಗಿನ ಹಾಗೂ ಅಕ್ಕ–ಪಕ್ಕದ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು. ರಸ್ತೆಗಳು ಚಿಕ್ಕದಾಗಿದ್ದರಿಂದ ಅಲ್ಲೆಲ್ಲ ದಟ್ಟಣೆ ಉಂಟಾಯಿತು.

ಪೊಲೀಸರು ಚೆಕ್‌ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಆದರೆ, ವಾಹನಗಳು ಹೆಚ್ಚಾದ ಸಂದರ್ಭದಲ್ಲಿ ತಪಾಸಣೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಅಗತ್ಯ ವಸ್ತುಗಳ ಖರೀದಿ ಹಾಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ವಾಹನ ಬಳಕೆಗೆ ಅವಕಾಶವಿದೆ. ಇದನ್ನೇ ನೆಪ ಮಾಡಿಕೊಂಡ ಹಲವರು ಅನಗತ್ಯವಾಗಿ ಸಂಚರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು