ಶುಕ್ರವಾರ, ನವೆಂಬರ್ 15, 2019
22 °C
ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಘಟನೆ

ಸಂಚಾರ ಹೆಡ್ ಕಾನ್‌ಸ್ಟೆಬಲ್ – ಬಿಎಂಟಿಸಿ ಚಾಲಕ ಜಟಾಪಟಿ

Published:
Updated:
Prajavani

ಬೆಂಗಳೂರು: ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಸಂಚಾರ ಹೆಡ್‌ ಕಾನ್‌ಸ್ಟೆಬಲ್ ಹಾಗೂ ಬಿಎಂಟಿಸಿ ಚಾಲಕನ ನಡುವೆ ಶನಿವಾರ ಜಟಾಪಟಿ ನಡೆದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅವರಿಬ್ಬರ ಜಟಾಪಟಿಯಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ವಾಹನಗಳ ಓಡಾಟಕ್ಕೆ ಕೆಲ ಹೊತ್ತು ಅಡ್ಡಿ ಉಂಟಾಗಿತ್ತು. ಬಸ್ಸಿನಲ್ಲಿದ್ದವರೇ ವಿಡಿಯೊ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ. ಅದನ್ನು ಹಲವರು ಹಂಚಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ: ಜಂಕ್ಷನ್ ಬಳಿ ರಸ್ತೆ ಪಕ್ಕದಲ್ಲಿ ಚಾಲಕ ಬಸ್‌ ನಿಲುಗಡೆ ಮಾಡಿದ್ದರು. ಅಲ್ಲಿಗೆ ಬಂದ ಹೆಡ್‌ ಕಾನ್‌ಸ್ಟೆಬಲ್, ‘ಇದು ಬಸ್ ನಿಲ್ಲಿಸುವ ಜಾಗವಲ್ಲ’ ಎಂದು ಹೇಳಿದ್ದರು. ಚಾಲಕ, ಬಸ್ ಚಲಾಯಿಸಿಕೊಂಡು ಮುಂದಕ್ಕೆ ಹೊರಟಿದ್ದರು. ಹೆಡ್‌ ಕಾನ್‌ಸ್ಟೆಬಲ್, ‘ನೀನು ಸಂಚಾರ ನಿಯಮ ಉಲ್ಲಂಘಿಸಿರುವೆ. ಬಸ್‌ ಪಕ್ಕಕ್ಕೆ ನಿಲ್ಲಿಸು’ ಎಂದು ಹೇಳಿದ್ದರು.

ಅದಕ್ಕೆ ಒಪ್ಪದ ಚಾಲಕ, ತನ್ನ ಪಾಡಿಗೆ ಬಸ್‌ ಚಲಾಯಿಸಿಕೊಂಡು ಹೊರಟಿದ್ದರು. ಬಸ್‌ ಏರಿದ್ದ ಹೆಡ್‌ ಕಾನ್‌ಸ್ಟೆಬಲ್, ಸ್ಟೇರಿಂಗ್ ಹಿಡಿದು ಎಳೆದಾಡಿದ್ದರು. ಚಾಲಕನ ಜೇಬಿಗೆ ಕೈ ಹಾಕಿ ಮೊಬೈಲ್ ಕಿತ್ತುಕೊಂಡು ಕೆಳಗೆ ಇಳಿದಿದ್ದರು. ಆತನ ಜೊತೆಯೇ ಇಳಿದಿದ್ದ  ಚಾಲಕ, ಮೊಬೈಲ್ ವಾಪಸು ಕೊಡುವಂತೆ ಕೋರಿದ್ದರು. ಇದೇ ವೇಳೆ ಅವರಿಬ್ಬರು ಪರಸ್ಪರ ತಳ್ಳಾಡಿಕೊಂಡಿದ್ದರು. ಈ ದೃಶ್ಯ ವಿಡಿಯೊದಲ್ಲಿದೆ.

ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ನಗರದ ಪುರಭವನ ಬಳಿ ಕಳೆದ ತಿಂಗಳಷ್ಟೇ ಸಂಚಾರ ಠಾಣೆ ಹೆಡ್ ಕಾನ್‌ಸ್ಟೆಬಲ್‌ ಹಾಗೂ ಟೆಂಪೊ ಚಾಲಕನ ನಡುವೆ ಜಟಾಪಟಿ ನಡೆದಿತ್ತು. ಇದಾದ ನಂತರ, ಸಾರ್ವಜನಿಕರ ಜೊತೆ ತಾಳ್ಮೆಯಿಂದ ವರ್ತಿಸುವಂತೆ ಹೆಚ್ಚುವರಿ ಪೊಲೀಸ್ ಕಮಿಷನರ್ ಅವರು ಸೂಚನೆ ಸಹ ನೀಡಿದ್ದರು.

ಪ್ರತಿಕ್ರಿಯಿಸಿ (+)