ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ 5 ಪಟ್ಟು ಏರಿಕೆ

ಆರು ತಿಂಗಳಿನಲ್ಲಿ ₹ 30.29 ಕೋಟಿ ದಂಡ ವಿಧಿಸಿದ ನಗರದ ಸಂಚಾರ ಪೊಲೀಸರು
Last Updated 8 ಜುಲೈ 2019, 20:28 IST
ಅಕ್ಷರ ಗಾತ್ರ

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ವಿಪರೀತ ಹೆಚ್ಚಳ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹಾಗೂ ದಂಡ ವಿಧಿಸುವ ಪ್ರಮಾಣದಲ್ಲೂ ಏರಿಕೆ...

ಇದು, ಸಿಲಿಕಾನ್ ಸಿಟಿಯ ಸದ್ಯದ ಸಂಚಾರ ವ್ಯವಸ್ಥೆ ಸ್ಥಿತಿ. ಸಂಚಾರ ನಿರ್ವಹಣೆ ಹೊಣೆ ಹೊತ್ತಿರುವ ಪೊಲೀಸರು, ಪರಿಸ್ಥಿತಿಯನ್ನು ನಿಭಾಯಿಸಲು ನಿತ್ಯವೂ ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ, ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2019ರ ಜನವರಿಯಿಂದ ಜೂನ್‌ವರೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪ್ರಮಾಣ ಸುಮಾರು ಐದು ಪಟ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕರ ವಿರುದ್ಧ 42.28 ಲಕ್ಷ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಪ್ಪಿತಸ್ಥರಿಗೆ ₹ 30.29 ಕೋಟಿ ದಂಡ ಹಾಕಿದ್ದಾರೆ. 2018ರ ಜನವರಿಯಿಂದ ಜೂನ್‌ವರೆಗೆ 7.98 ಲಕ್ಷ ಪ್ರಕರಣಗಳಲ್ಲಿ ₹ 6.75 ಕೋಟಿ ದಂಡ ವಿಧಿಸಿದ್ದರು.

‘ಹೆಲ್ಮೆಟ್‌ ಧರಿಸದಿರುವುದು, ನಿರ್ಲಕ್ಷ್ಯದ ಚಾಲನೆ, ಪಥ ಶಿಸ್ತು ಉಲ್ಲಂಘನೆ, ಸಾರ್ವಜನಿಕ ಸೇವೆ ಒದಗಿಸುವ ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು, ಸಿಗ್ನಲ್ ಜಂಪ್ ಹಾಗೂ ಅತೀ ವೇಗದ ಚಾಲನೆಯಂಥ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ. ವಿಮೆ ಮಾಡಿಸದಿರುವುದು, ವಾಹನಗಳ ನೋಂದಣಿ ಪತ್ರ ಹೊಂದಿಲ್ಲದಿರುವುದು, ಚಾಲನಾ ಪರವಾನಗಿ ಇಲ್ಲದಿರುವುದು ಸೇರಿದಂತೆ ಮೋಟಾರು ವಾಹನಗಳ ಕಾಯ್ದೆ ವ್ಯಾಪ್ತಿಗೆ ಬರುವ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ 2019ರ ಜೂನ್‌ವರೆಗೆ 80.49 ಲಕ್ಷ ವಾಹನಗಳು ನೋಂದಣಿ ಆಗಿವೆ. ಆ ಪೈಕಿ ಶೇ 90ರಷ್ಟು ವಾಹನಗಳು ನಿತ್ಯವೂ ನಗರದಲ್ಲಿ ಸಂಚರಿಸುತ್ತವೆ. ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ರಸ್ತೆಗಳ ಸಾಮರ್ಥ್ಯ ಹೆಚ್ಚಳ ಆಗದ ಕಾರಣ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ದಟ್ಟಣೆ ಕಿರಿಕಿರಿಯಿಂದ ಬೇಸತ್ತ ಕೆಲವರು ಅನಿವಾರ್ಯವಾಗಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸಂಚಾರ ನಿಯಮ ಉಲ್ಲಂಘನೆ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗುತ್ತಿದೆ.

ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆ, ಕಾಲೇಜು, ಕಚೇರಿ, ಬಡಾವಣೆಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಹೆಚ್ಚಲಿದೆ ದಂಡದ ಮೊತ್ತ: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಧಿಸಲಾಗುವ ದಂಡದ ಮೊತ್ತವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಇತ್ತೀಚೆಗಷ್ಟೇ ಆದೇಶ ಹೊರಡಿಸಿದ್ದು, ಪರಿಷ್ಕೃತ ದಂಡ ವಸೂಲಿ ಪ್ರಕ್ರಿಯೆ ಇದೇ 20ರಿಂದ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ವಿಧಿಸಲಾಗುವ ದಂಡದ ಮೊತ್ತವೂ ಹೆಚ್ಚಳವಾಗುವ ಸಾಧ್ಯತೆ ಇದೆ.

700 ಕ್ಯಾಮೆರಾಗಳ ಕಾವಲು
‘ಸಂಚಾರ ನಿಯಮ ಉಲ್ಲಂಘಿಸುವವರ ಪತ್ತೆಗಾಗಿ ನಗರದಲ್ಲಿ ಸದ್ಯ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೆಲವೇ ದಿನಗಳಲ್ಲಿ 600 ಹೊಸ ಕ್ಯಾಮೆರಾಗಳನ್ನು ಅಳವಡಿಸುವ ಕೆಲಸ ಶುರುವಾಗಲಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ. ಹರಿಶೇಖರನ್‌ ತಿಳಿಸಿದರು.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಆಧುನಿಕ ತಂತ್ರಜ್ಞಾನವಿರುವ ಕ್ಯಾಮೆರಾಗಳನ್ನೇ ಬಳಸಿಕೊಂಡು ಪ್ರಕರಣಗಳನ್ನು ಪತ್ತೆ ಮಾಡುತ್ತಿದ್ದೇವೆ. ಪ್ರಸಕ್ತ ವರ್ಷದ ಜೂನ್‌ವರೆಗೆ 22.05 ಲಕ್ಷ ಪ್ರಕರಣಗಳನ್ನು ಕ್ಯಾಮೆರಾ ಸಹಾಯದಿಂದಲೇ ದಾಖಲಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರ ಮನೆಗೇ ದಂಡದ ರಶೀದಿ ಕಳುಹಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT