ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಾದಿಡ್ಡಿ ಬಸ್‌ ನಿಲುಗಡೆ: ಅಸಮಾಧಾನ

ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಜನಸ್ಪಂದನ: ಸಮಸ್ಯೆ ಆಲಿಸಿದ ಅಧಿಕಾರಿಗಳು
Last Updated 24 ಆಗಸ್ಟ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಮೂಲಕ ಚಾಲಕರು ಸಂಚಾರಕ್ಕೆ ಅನಗತ್ಯ ತೊಂದರೆ ಮಾಡುತ್ತಿದ್ದಾರೆ ಎಂಬ ಅಸಮಾಧಾನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

‘ಬಿಎಂಟಿಸಿ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುತ್ತಿದ್ದು, ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಚಾಲಕರ ಈ ವರ್ತನೆಯನ್ನು ತಿದ್ದಿಕೊಳ್ಳಬೇಕು ಇಲ್ಲವೆ ಸಂಬಂಧಪಟ್ಟ ಅಧಿಕಾರಿಗಳಾದರೂ ಕಿವಿ ಹಿಂಡಿ ಎಚ್ಚರಿಕೆ ನೀಡಬೇಕು’ ಎಂದು ಜನರು ಆಗ್ರಹಿಸಿದರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಬಿಬಿಎಂಪಿ, ಬಿಎಂಟಿಸಿ, ಬಿಎಂಆರ್‌ಸಿಎಲ್, ಸಾರಿಗೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ಆಯೋಜಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು, ‘ಪ್ರತಿ ರಸ್ತೆಯಲ್ಲೂ ಬಸ್‌ ಬೇ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಸಂಚಾರ ಪೊಲೀಸ್‌ ಹಾಗೂ ಬಿಎಂಟಿಸಿ ಅಧಿಕಾರಿಗಳು ಸೇರಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳಿ’ ಎಂದು ಅಧಿಕಾರಿಗಳಿಗೆ ಹೇಳಿದರು.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ: ‘ನಗರದ ಹಲವೆಡೆ ಕಾಮಗಾರಿ ನಡೆಯುತ್ತಿದ್ದು, ಅದು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಇಂಥ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಬೇಕು. ಆದರೆ, ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಲವು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರದ ವೇಳೆ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಸ್ತೆ ದುರಸ್ತಿಗೆ ಮೊದಲ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ರಸ್ತೆ ಅಗೆಯುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.

ಸಂಚಾರ ನಿಯಮ ಉಲ್ಲಂಘನೆ: ‘ಹಲವು ಸವಾರರು, ಫುಟ್‌ಪಾತ್ ಮೇಲೆಯೇ ಬೈಕ್‌ಗಳನ್ನು ಓಡಿಸುತ್ತಿದ್ದಾರೆ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಂಥ ಸವಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೊಬೈಲ್ ಆ್ಯಪ್ ಆಧರಿತ ಬಾಡಿಗೆ ಬೈಕ್‌ಗಳು ನಗರದಲ್ಲಿವೆ. ಅವುಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದ್ದು, ಅದರಿಂದಲೂ ದಟ್ಟಣೆ ಉಂಟಾಗುತ್ತಿದೆ’ ಎಂದು ಸಾರ್ವಜನಿಕರು ಹೇಳಿದರು.

ತಪ್ಪಿಸಿಕೊಳ್ಳಲು ‘ವಾಟ್ಸ್‌ಆ್ಯಪ್‌ ಗ್ರೂಪ್’
‘ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೆಲ ಯುವಕರು, ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದಾರೆ’ ಎಂದು ಸಾರ್ವಜನಿಕರೊಬ್ಬರು ಮಾಹಿತಿ ನೀಡಿದರು.

‘ರಸ್ತೆಯ ಅಕ್ಕ–ಪಕ್ಕದಲ್ಲಿ ನಿಲ್ಲುವ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಿ ದಂಡ ವಿಧಿಸುತ್ತಿದ್ದಾರೆ. ಅಂಥ ಪೊಲೀಸರನ್ನು ಕಂಡ ಕೂಡಲೇ ಯುವಕರು, ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಮಾಹಿತಿ ರವಾನಿಸುತ್ತಿದ್ದಾರೆ. ‘ಈ ರಸ್ತೆಯಲ್ಲಿ ಬರಬೇಡಿ. ಪೊಲೀಸರು ಇದ್ದಾರೆ’ ಎಂದು ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಇಂಥ ಗ್ರೂಪ್‌ಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ’ ಎಂದು ಹೇಳಿದರು.

ಬಸ್‌ ನಿಲ್ದಾಣ ಜಾಗದಲ್ಲಿ ಖಾಸಗಿ ವಾಹನ
‘ಚಂದ್ರಾಲೇಔಟ್‌ ಬಸ್‌ ನಿಲ್ದಾಣದ ಜಾಗದಲ್ಲಿ ಖಾಸಗಿ ವಾಹನಗಳೇ ಹೆಚ್ಚು ನಿಲ್ಲುತ್ತಿವೆ. ಅದನ್ನು ಪ್ರಶ್ನಿಸಿದರೆ ಮಾಲೀಕರು ಪ್ರಯಾಣಿಕರ ಮೇಲೆಯೇಹರಿಹಾಯುತ್ತಿದ್ದಾರೆ’ ಎಂದು ಸಾರ್ವಜನಿಕರೊಬ್ಬರು ದೂರಿದರು.

‘ವಾಣಿಜ್ಯ ಚಟುವಟಿಕೆಗೆ ಮೆಟ್ರೊ ಜಾಗ ನೀಡಬೇಡಿ’
‘ಸಾರ್ವಜನಿಕರ ಸಂಚಾರಕ್ಕೆ ಮೆಟ್ರೊ ರೈಲು ಅನುಕೂಲವಾಗಿದೆ. ಇಂಥ ಮೆಟ್ರೊ ನಿಲ್ದಾಣದ ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡಬಾರದು’ ಎಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು.

‘ನಿಲ್ದಾಣದ ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡಿದರೆ, ಅದೊಂದು ಮಿನಿ ಮಾರುಕಟ್ಟೆ ಆಗಲಿದೆ. ಅನಧಿಕೃತ ಅಂಗಡಿಗಳೂ ತಲೆ ಎತ್ತಲಿವೆ. ಪ್ರಯಾಣಿಕರಿಗೂ ತೊಂದರೆ ಆಗಲಿದೆ’ ಎಂದು ಹೇಳಿದರು.

*
ಜನರ ಸಮಸ್ಯೆ ಆಲಿಸಲು ‘ಜನಸ್ಪಂದನ’ ಕಾರ್ಯಕ್ರಮ ಅನುಕೂಲವಾಯಿತು. ಜನರು ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
-ಭಾಸ್ಕರ್ ರಾವ್, ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT